ಮಂಗಳವಾರ 5000ಕ್ಕೂ ಹೆಚ್ಚು ಪ್ರಕರಣಗಳು, ಹೊಸ ದಾಖಲೆ| ಬೆಂಗಳೂರಲ್ಲಿ 2.57 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ| ಕಳೆದ 10 ದಿನದಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ 40,611 ಕೊರೋನಾ ಸೋಂಕು ಪ್ರಕರಣ ಪತ್ತೆ, 314 ಮಂದಿ ಸಾವು| ಡಿಸೆಂಬರ್ ವೇಳೆ ನಗರದಲ್ಲಿ ಮತ್ತಷ್ಟು ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚು|
ಬೆಂಗಳೂರು(ಅ.07): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಗಳವಾರ ಕೊರೋನಾ ಸೋಂಕು ಸ್ಫೋಟಗೊಂಡಿದ್ದು, ಬರೋಬ್ಬರಿ ಐದು ಸಾವಿರಕ್ಕೂ ಅಧಿಕ ಹೊಸ ಪ್ರಕರಣ ಒಂದೇ ದಿನದಲ್ಲಿ ಪತ್ತೆಯಾಗಿವೆ.
ಇದೇ ಮೊದಲ ಬಾರಿ ನಗರದಲ್ಲಿ ಒಂದೇ ದಿನದಲ್ಲಿ ಐದು ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ ಪತ್ತೆಯಾಗಿವೆ. ಈ ಹಿಂದೆ ಸೆ.29 ರಂದು ಒಂದೇ ದಿನದಲ್ಲಿ ಪತ್ತೆಯಾದ 4,868 ಪ್ರಕರಣ ಪತ್ತೆಯಾಗಿದ್ದವು. ಮಂಗಳವಾರ 5,012 ಪ್ರಕರಣ ಪತ್ತೆಯಾಗುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ. ಈ ಮೂಲಕ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 2,57,241 ತಲುಪಿದೆ. ಇನ್ನು 3,354 ಮಂದಿ ಗುಣಮುಖರಾಗಿದ್ದು, ಗುಣಮುಖರ ಸಂಖ್ಯೆ 1,98,369ಕ್ಕೆ ಏರಿಕೆಯಾಗಿದೆ. 55,736 ಸಕ್ರಿಯ ಪ್ರಕರಣಗಳಿದ್ದು, ನಗರದ ವಿವಿಧ ಆಸ್ಪತ್ರೆಗಳಲ್ಲಿ 302 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
34 ಮಂದಿ ಸಾವು:
ಮಂಗಳವಾರ ನಗರದಲ್ಲಿ 34 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಬಗ್ಗೆ ವರದಿಯಾಗಿದೆ. ಈ ಮೂಲಕ ಮೃತರ ಸಂಖ್ಯೆ 3,135ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಮಂಗಳವಾರ ಕರ್ನಾಟಕದಲ್ಲಿ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು..!
ಡಿಸೆಂಬರ್‌ಗೆ ಸಾವಿನ ಪ್ರಮಾಣ ಹೆಚ್ಚುವ ಭೀತಿ
ಕಳೆದ 10 ದಿನದಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ 40,611 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, 314 ಮಂದಿ ಮೃತಪಟ್ಟಿದ್ದಾರೆ. ಡಿಸೆಂಬರ್ ವೇಳೆ ನಗರದಲ್ಲಿ ಮತ್ತಷ್ಟುಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನೇನು ಚಳಿಗಾಲ ಶುರುವಾಗಲಿದ್ದು, ನ್ಯೂಮೋನಿಯಾ ಪ್ರಕರಣಗಳು ಹೆಚ್ಚಾಗಲಿವೆ. ನ್ಯೂಮೋನಿಯಾ ಇರುವ ವ್ಯಕ್ತಿಗೆ ಕೊರೋನಾ ಸೋಂಕು ಕಾಣಿಸಿಕೊಂಡರೆ ಪ್ರಾಣಕ್ಕೆ ಕಂಟಕವಾಗಲಿದೆ. ಅದರೊಂದಿಗೆ ಶ್ವಾಸಕೋಶ ಸಂಬಂಧಿ ಕಾಯಿಲೆ, ಅಸ್ತಮಾ ರೋಗಿಗಳಿಗೆ ಚಳಿಗಾಲದ ಮೂರು ತಿಂಗಳು ತುಂಬಾ ಅಪಾಯಕಾರಿಯಾಗಿರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
