ಹುಬ್ಬಳ್ಳಿ: ಕಟಬಾಕಿಯಾದ 350ಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳು ಬ್ಲಾಕ್‌!

ಬ್ಯಾಂಕ್‌ ಆಫ್‌ ಬರೋಡಾದಲ್ಲಿನ ಖಾತೆಗಳು| ಬೆಂಬಲ ಬೆಲೆ ಯೋಜನೆಯಡಿ ಜಮೆಯಾದ ಹಣ ಸಾಲಕ್ಕೆ ಸರಿದೂಗಿಸುತ್ತಿರುವ ಬ್ಯಾಂಕ್‌| ರೈತರ ಆಕ್ರೋಶ: ಸರಿಪಡಿಸದಿದ್ದಲ್ಲಿ ಉಗ್ರ ಹೋರಾಟ|

More than 350 Farmers Bank Accounts Block due to Loan Repayment in Hubballi

ಶಿವಾನಂದ ಗೊಂಬಿ

ಹುಬ್ಬಳ್ಳಿ(ಆ.13):  ಸರ್ಕಾರ ಒತ್ತಾಯಪೂರ್ವಕವಾಗಿ ಸಾಲ ವಸೂಲಾತಿ ಮಾಡಬಾರದೆಂದು ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದ್ದರೂ ತಾಲೂಕಿನ ಹೆಬಸೂರು ಗ್ರಾಮದಲ್ಲಿ ಬ್ಯಾಂಕ್‌ ಆಫ್‌ ಬರೋಡಾ ಶಾಖೆ ಆ ಎಲ್ಲ ನಿಯಮ, ನಿರ್ದೇಶನಗಳನ್ನು ಗಾಳಿಗೆ ತೂರಿ 350ಕ್ಕೂ ಹೆಚ್ಚು ರೈತರ ಖಾತೆಗಳನ್ನು ಬ್ಲಾಕ್‌ ಮಾಡಿದೆ!

ಇದರೊಂದಿಗೆ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಜಮೆ ಮಾಡಿದ ಹಣವನ್ನು ಸಾಲಕ್ಕೆ ಸರಿದೂಗಿಸಿಕೊಳ್ಳಲಾಗುತ್ತಿದೆ. ಆದರೆ, ಇದನ್ನು ತಳ್ಳಿಹಾಕುವ ಬ್ಯಾಂಕ್‌ನ ಸಿಬ್ಬಂದಿ ನಾವು ಯಾರ ಖಾತೆಯನ್ನೂ ಬ್ಲಾಕ್‌ ಮಾಡಿಲ್ಲ. ‘ಕಟಬಾಕಿ ಇರುವವರ ಖಾತೆಗಳು ತನ್ನಿಂದ ತಾನಾಗಿಯೇ ಬ್ಲಾಕ್‌ ಆಗುತ್ತವೆ’ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ರೈತರು ಆಕ್ರೋಶ ವ್ಯಕ್ತಪಡಸುತ್ತಿದ್ದು, ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.

ಭಾರತ ತಾಲಿಬಾನ್‌, ಪಾಕಿಸ್ತಾನ ಅಲ್ಲ: ಪ್ರಮೋದ್‌ ಮುತಾಲಿಕ್‌

ಆಗಿರುವುದೇನು?:

ಈ ಬ್ಯಾಂಕಿನಲ್ಲಿ ಖಾತೆ ಹೊಂದಿರುವ 350-400 ರೈತರು ಬೆಳೆಸಾಲವನ್ನು ಕಳೆದ ಎರಡ್ಮೂರು ವರ್ಷಗಳ ಹಿಂದೆ ಪಡೆದಿದ್ದಾರೆ. ಆದರೆ, ಕಳೆದ ವರ್ಷದ ಅತಿವೃಷ್ಟಿ, ಅದರ ಹಿಂದಿನ ವರ್ಷಗಳ ಬರ ಪರಿಸ್ಥಿತಿಯಿಂದಾಗಿ ಸಾಲವನ್ನು ಮರುಪಾವತಿಸಿಲ್ಲ. ಹೀಗಾಗಿ ಕಟಬಾಕಿದಾರರಾಗಿದ್ದಾರೆ. ಈ ಕಾರಣದಿಂದಾಗಿ ಈ ಖಾತೆಗಳೆಲ್ಲ ಬ್ಲಾಕ್‌ ಆಗಿವೆ. ಇದರೊಂದಿಗೆ ಕಳೆದ ಎರಡ್ಮೂರು ತಿಂಗಳ ಹಿಂದೆ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಹತ್ತಿ, ಕಡಲೆ ಮತ್ತಿತರ ಬೆಳೆಗಳನ್ನು ಸರ್ಕಾರ ಖರೀದಿಸಿತ್ತು. ಅದರ ದುಡ್ಡನ್ನು ರೈತರ ಖಾತೆಗಳಿಗೆ ಜಮೆ ಮಾಡಿದೆ. ಒಬ್ಬೊಬ್ಬರ ಖಾತೆಯಲ್ಲಿ . 70 ಸಾವಿರ, . 60 ಸಾವಿರ ಹೀಗೆ ರೈತರಿಂದ ಎಷ್ಟುಕ್ವಿಂಟಲ್‌ ಕಡಲೆ, ಹತ್ತಿ ಖರೀದಿಸಿತ್ತೋ ಅಷ್ಟುದುಡ್ಡನ್ನು ಸರ್ಕಾರ ಜಮೆ ಮಾಡಿದೆ. ಈ ಹಣವನ್ನು ಬ್ಯಾಂಕ್‌ ತನ್ನ ಸಾಲಕ್ಕೆ ಹೊಂದಾಣಿಕೆ ಮಾಡಿಕೊಂಡಿದೆ!

ಸಿಬಿಲ್‌ನಲ್ಲೂ ಡಿಫಾಟ್ಲರ್‌:

ಇನ್ನೂ ಕಟ್‌ಬಾಕಿದಾರರಾಗಿರುವ ರೈತರ ಸಿಬಿಲ್‌ಗಳಲ್ಲೂ ಡಿಫಾಟ್ಲರ್‌ಗಳೆಂದು ನಮೂದಾಗುವುದರಿಂದ ಬೇರೆ ಬ್ಯಾಂಕ್‌ಗಳಲ್ಲೂ ಇವರಿಗೆ ಸಾಲ ದೊರೆಯುತ್ತಿಲ್ಲ. ಅತ್ತ ಬೇರೆಡೆ ಸಾಲ ಪಡೆದು ಕೃಷಿ ಮಾಡೋಣ ಎಂದರೆ ಸಿಬಿಲ್‌ನಲ್ಲಿ ಡಿಫಾಟ್ಲರ್‌ ಅಂತ ಬರುತ್ತದೆ. ಹೀಗಾಗಿ ಯಾವ ಬ್ಯಾಂಕ್‌ ಕೂಡ ಸಾಲ ನೀಡುತ್ತಿಲ್ಲ. ಇನ್ನೂ ಬೆಳೆ ಮಾರಿದ್ದ ದುಡ್ಡನ್ನಾದರೂ ಪಡೆಯೋಣ ಎಂದರೆ ಖಾತೆಗಳನ್ನು ಬ್ಯಾಂಕ್‌ ಬ್ಲಾಕ್‌ ಮಾಡಿದೆ. ಇನ್ನು ಈ ವರ್ಷ ಉತ್ತಮ ಮಳೆ ಸುರಿದಿದೆ. ಈಗಾಗಲೇ ಬಿತ್ತನೆ ಮಾಡಲಾಗಿದೆ. ಗೊಬ್ಬರ ಖರೀದಿಗೆಲ್ಲ ದುಡ್ಡು ಬೇಕು. ಆದರೆ ದುಡ್ಡು ಸಿಗುತ್ತಿಲ್ಲ. ಇದು ರೈತರನ್ನು ಕಂಗೆಡಿಸಿದೆ.

ಬ್ಯಾಂಕ್‌ ಸ್ಪಷ್ಟನೆ:

ನಾವಾಗಿಯೇ ರೈತರ ಖಾತೆಗಳನ್ನು ಬ್ಲಾಕ್‌ ಮಾಡಿಲ್ಲ. ಆದರೆ, ಕಟ್‌ಬಾಕಿದಾರರಾಗಿರುವ ಕಾರಣ ಕಂಪ್ಯೂಟರ್‌ ಸಿಸ್ಟಂನಲ್ಲೇ ಆಟೋಮ್ಯಾಟಿಕ್‌ ಆಗಿ ಬ್ಲಾಕ್‌ ಆಗುತ್ತವೆ. ನಾವೇನು ಮಾಡಲು ಬರುವುದಿಲ್ಲ ಎಂದು ಬ್ಯಾಂಕ್‌ ಸ್ಪಷ್ಟಪಡಿಸಿದೆ.
ಅಲ್ಲದೇ, ಬ್ಯಾಂಕ್‌ ನೀಡಿರುವುದು ಬೆಳೆಸಾಲ. ಈಗ ಬೆಂಬಲ ಬೆಲೆ ಯೋಜನೆಯಡಿ ಜಮೆಯಾದ ಹಣ ಬೆಳೆ ಮಾರಿದ್ದರಿಂದಲೇ ಬಂದಿರುವುದರಿಂದ ಅದನ್ನು ಸಾಲಕ್ಕೆ ಹೊಂದಿಸಿಕೊಳ್ಳುತ್ತದೆ. ಸರ್ಕಾರದ ಯೋಜನೆಗಳಾದ ಬೆಳೆವಿಮೆ, ಬೆಳೆ ಪರಿಹಾರ, ಕಿಸಾನ್‌ ಸಮ್ಮಾನಗಳಂತಹ ಯೋಜನೆಗಳಿಂದ ಬಂದಂತಹ ಹಣವನ್ನೇನೂ ನಾವು ಸಾಲಕ್ಕೆ ಸರಿದೂಗಿಸಿಕೊಳ್ಳುತ್ತಿಲ್ಲ ಎಂದು ಬ್ಯಾಂಕ್‌ ಸಿಬ್ಬಂದಿ ತಿಳಿಸುತ್ತಾರೆ.

ಆಕ್ಷೇಪ:

ನಾವು ಸಾಲವನ್ನು ಕಟ್ಟುವುದಿಲ್ಲ ಅಂತೇನೂ ಹೇಳುವುದಿಲ್ಲ. ಆದರೆ, ಸದ್ಯ ನಾವು ಕೃಷಿ ಕೈಗೊಳ್ಳಲು ದುಡ್ಡಿನ ಅಗತ್ಯವಿದೆ. ಇಂಥ ಸಮಯದಲ್ಲಿ ಖಾತೆಗಳನ್ನು ಬ್ಲಾಕ್‌ ಮಾಡಿದರೆ, ಖಾತೆಯಲ್ಲಿನ ದುಡ್ಡನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಂಡರೆ ನಾವು ಹೇಗೆ ಕೃಷಿ ಮಾಡುವುದು ? ಎಂಬ ಪ್ರಶ್ನೆ ರೈತರದ್ದು.

ಕೂಡಲೇ ಬ್ಲಾಕ್‌ ಮಾಡಿರುವ ಖಾತೆಗಳನ್ನು ಚಾಲ್ತಿ ಮಾಡಬೇಕು. ಜತೆಗೆ ಬೆಂಬಲ ಬೆಲೆಯಲ್ಲಿ ಬೆಳೆ ಮಾರಾಟ ಮಾಡಿದ್ದರಿಂದ ಜಮೆಯಾಗಿರುವ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳದೇ ರೈತರಿಗೆ ನೀಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ರೈತರು ಎಚ್ಚರಿಕೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ರೈತರ ಖಾತೆಗಳು ಬ್ಲಾಕ್‌ ಆಗಿರುವುದು ರೈತರನ್ನು ಕಂಗೆಡಿಸಿರುವುದಂತೂ ಸತ್ಯ.

ಕಟಬಾಕಿದಾರರ ಖಾತೆಗಳು ಸಹಜವಾಗಿ ನಿಷ್ಕಿ್ರಯವಾಗುತ್ತವೆ. ಇನ್ನೂ ಬ್ಯಾಂಕ್‌ ಸಾಲ ನೀಡಿದ್ದು ಬೆಳೆಸಾಲ. ಬೆಳೆ ಮಾರಿದ್ದರಿಂದಲೇ ಹಣ ಬಂದಿರುವ ಕಾರಣ ಅದನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಆರ್‌ಬಿಐ ನಿಯಮದಂತೆ ಬ್ಯಾಂಕ್‌ ಆಫ್‌ ಬರೋಡಾ ಕೆಲಸ ಮಾಡಿದೆ. ಸರ್ಕಾರದ ಯೋಜನೆಗಳಿಂದ ಬಂದಂತಹ ದುಡ್ಡನ್ನು ರೈತರಿಗೆ ನೀಡಲಾಗುತ್ತಿದೆ ಎಂದು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಈಶ್ವರನಾಥ ಅವರು ತಿಳಿಸಿದ್ದಾರೆ.

ಸದ್ಯ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ದುಡ್ಡಿನ ಅಗತ್ಯವಿದೆ. ಇಂಥ ಸಮಯದಲ್ಲಿ ಈ ರೀತಿ ಖಾತೆಯನ್ನು ಬ್ಲಾಕ್‌ ಮಾಡಿದರೆ, ಬೆಂಬಲ ಬೆಲೆ ಯೋಜನೆಯಡಿ ಜಮೆಯಾದ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಂಡರೆ ಕೃಷಿಯನ್ನು ಹೇಗೆ ಮಾಡಬೇಕು? ಈ ವರ್ಷ ನಮಗೆ ದುಡ್ಡು ಕೊಡಲಿ, ನಾವು ಬೆಳೆ ಬಂದ ಮೇಲೆ ಬ್ಯಾಂಕಿಗೆ ಸಾಲ ಮರುಪಾವತಿ ಮಾಡುತ್ತೇವೆ ಎಂದು ಹೆಬಸೂರು ರೈತ ಗುರು ರಾಯನಗೌಡರ ಅವರು ಹೇಳಿದ್ದಾರೆ.  
 

Latest Videos
Follow Us:
Download App:
  • android
  • ios