ಬಳ್ಳಾರಿಯ ಕಲ್ಲುಕಂಭದಲ್ಲಿ 35ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ
ಕಲ್ಲುಕಂಭ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣ ಕಾಣಿಸಿಕೊಂಡಿದ್ದು ಜನರನ್ನು ತಲ್ಲಣಗೊಳಿಸಿದೆ| ಮಕ್ಕಳಿಂದ ವಯಸ್ಕರ ವರೆಗೆ ಎಲ್ಲರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ| ಬುಧವಾರ ರಾತ್ರಿ ಕಲ್ಲುಕಂಭ ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ಕಾಣಿಸಿಕೊಂಡ ವಾಂತಿ-ಭೇದಿ ಗುರುವಾರ ಕುರುಬರ ಓಣಿಗೂ ವ್ಯಾಪಿಸಿರುವುದು ಗ್ರಾಮದ ಜನರ ಆತಂಕ ಹೆಚ್ಚಾಗಲು ಕಾರಣವಾಗಿದೆ|
ಕುರುಗೋಡು(ಅ.5): ತಾಲೂಕಿಸನ ಕಲ್ಲುಕಂಭ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣ ಕಾಣಿಸಿಕೊಂಡಿದ್ದು ಜನರನ್ನು ತಲ್ಲಣಗೊಳಿಸಿದೆ. ಮಕ್ಕಳಿಂದ ವಯಸ್ಕರ ವರೆಗೆ ಎಲ್ಲರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಬುಧವಾರ ರಾತ್ರಿ ಕಲ್ಲುಕಂಭ ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ಕಾಣಿಸಿಕೊಂಡ ವಾಂತಿ-ಭೇದಿ ಗುರುವಾರ ಕುರುಬರ ಓಣಿಗೂ ವ್ಯಾಪಿಸಿರುವುದು ಗ್ರಾಮದ ಜನರ ಆತಂಕ ಹೆಚ್ಚಾಗಲು ಕಾರಣವಾಗಿದೆ.
ಗುರುವಾರ ಬೆಳಗ್ಗೆಯಿಂದ ಗ್ರಾಮದಲ್ಲಿರುವ ಆರೋಗ್ಯ ಉಪ ಕೇಂದ್ರದಲ್ಲಿ 35ಕ್ಕೂ ಹೆಚ್ಚು ಜನರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿದೆ. ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ಸೇವೆಯಲ್ಲಿ ತೊಡಗಿದ್ದಾರೆ. ಬುಧವಾರ ರಾತ್ರಿ 20ಕ್ಕೂ ಹೆಚ್ಚು ಜನರು ಕುರುಗೋಡಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಬುಧವಾರ ರಾತ್ರಿಯಿಂದ ಗುರುವಾರದವರೆಗೆ ಒಟ್ಟು 60 ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು ಮತ್ತೆ ಶುಕ್ರವಾರ 43 ಜನರಿಗೆ ಕಾಣಿಸಿಕೊಂಡಿದೆ ಎಂದು ಡಾ. ಲಕ್ಷ್ಮಣ್ ನಾಯಕ್ ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ವಿಷಯ ತಿಳಿದ ನಂತರ ಕಲ್ಲುಕಂಭ ಗ್ರಾಮಕ್ಕೆ ತಾಪಂ ಇಒ ಬಸಪ್ಪ, ಜಿಲ್ಲಾ ಆರೋಗ್ಯ ಅಧಿಕಾರಿ ಶಿವರಾಜ ಹೆಡೆ ಮತ್ತು ತಾಲೂಕು ಆರೋಗ್ಯ ಅಧಿಕಾರಿ ವೀರೇಂದ್ರ ಕುಮಾರ್, ಎಇಇ ಪ್ರಸನ್ನ ಕುಮಾರ್ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಜನರು ಸೇವಿಸಿದ ಕಲುಷಿತ ನೀರಿನಿಂದ ವಾಂತಿ-ಭೇದಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ವಾಂತಿ-ಭೇದಿಗೆ ಸ್ಪಷ್ಟಕಾರಣ ತಿಳಿದುಬರಲಿದೆ. ಈಗಾಗಲೇ ಸಂಪರ್ಕ ಹೊಂದಿರುವ ನೀರಿನ ಪೈಪ್‌ಗಳು ಮತ್ತು ನೀರಿನ ಟ್ಯಾಂಕರ್‌ಗಳಿಗೆ ಭೇಟಿ ನೀಡಿ ಪರಿಶಿಲೀಸಲಾಗಿದೆ ಎಂದರು.
ಕಲ್ಲುಕಂಭ ಗ್ರಾಮದ ಆರೋಗ್ಯ ಉಪ ಕೇಂದ್ರಕ್ಕೆ ಡಿಸಿ ಮತ್ತು ಜಿಪಂ ಸಿಇಒ ಭೇಟಿ ನೀಡಿ ವಿಚಾರಿಸಿದರು. ಜನರಿಗೆ ಜಾಗೃತಿ ಮೂಡಿಸಲು ಗ್ರಾಪಂ ಹಾಗೂ ಆರೋಗ್ಯ ಇಲಾಖೆ ಮತ್ತು ಶಾಲೆ ಮಕ್ಕಳಿಂದ ಜಾಥಾ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ರೈತರು ಜಮೀನುಗಳಲ್ಲಿ ನಿಂತಿರುವ ಮತ್ತು ಕಾಲುವೆ ನೀರು ಕುಡಿಯದೆ ಮನೆಯಲ್ಲಿನ ಕಾಯಿಸಿ ಆರಿಸಿದ ನೀರು ಸೇವಿಸಲು, ಬಿಸಿಯಾದ ಆಹಾರ ಸೇವಿಸಲು ತಿಳಿಸಲಾಗಿದೆ.
ಆರೋಗ್ಯ ಇಲಾಖೆಯಿಂದ ವೈದ್ಯಾಧಿಕಾರಿಗಳನ್ನು ಮತ್ತು ಸ್ಟಾಪ್ ನರ್ಸ್‌ಗಳನ್ನು ನೇಮಿಸಿ ಗ್ರಾಮದಲ್ಲೇ ತರ್ತು ಚಿಕಿತ್ಸೆ ಸೇವೆ ಒದಗಿಸುವ ಕೆಲಸ ಮಾಡಲಾಗಿದೆ. ಪ್ರಯೋಗಾಲಯಕ್ಕೆ ಕಳಿಸಿದ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಇಒ ಬಸಪ್ಪ ತಿಳಿಸಿದರು.
ಉಪ ಕೇಂದ್ರಕ್ಕೆ ಡಿಸಿ ಭೇಟಿ:
ಕಲ್ಲುಕಂಭ ಗ್ರಾಮದಲ್ಲಿ ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅವರಿಗೆ ಗ್ರಾಮದ ಆರೋಗ್ಯ ಉಪ ಕೇಂದ್ರದಲ್ಲಿ ಚಿಕಿತ್ಸೆ ನಡೆಸಲಾಗುತ್ತಿದ್ದು. ಸ್ಥಳಕ್ಕೆ ಡಿಸಿ ಎಸ್.ಎಸ್. ನಕುಲ್ ಮತ್ತು ಜಿಪಂ ಸಿಇಒ ಕೆ. ನಿತೀಶ್ ಭೇಟಿ ನೀಡಿ ವೈದ್ಯಾಧಿಕಾರಿಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ತಿಳಿಸಿದರು. ಬಳಿಕ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ವಿಚಾರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ವಿ. ದೇವಿ ಜಡೆಪ್ಪ, ಪಿಡಿಒ ವನಜಾಕ್ಷಿ, ಮುರಳೀಧರ್, ಎಂ. ಬಸವರಾಜ, ಲಕ್ಷ್ಮಣ ನಾಯಕ್, ರಾಘವೇಂದ್ರ, ಚಿದಾನಂದ, ಸೇರಿ ಆಶಾ ಕಾರ್ಯಕರ್ತೆಯರು ಇದ್ದರು.