ಪರವಾನಗಿ ಇಲ್ಲದೆ ಗಣಿ ಸಾಮಗ್ರಿಗಳನ್ನು ಸಾಗಿಸುತ್ತಿದ್ದ 30ಕ್ಕೂ ಹೆಚ್ಚು ಲಾರಿಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ನಡುವೆ ಶಾಸಕ ಸಿ.ಎಸ್‌.ಪುಟ್ಟರಾಜು ಮಧ್ಯಪ್ರವೇಶಿಸಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಆಗಿರುವ ತೀರ್ಮಾನವನ್ನು ಹಿರಿಯ ಭೂ ವಿಜ್ಞಾನಿ ಅವರಿಗೆ ತಿಳಿಸಿದ ಬಳಿಕ ಲಾರಿಗಳಿಗೆ ನೋಟೀಸ್‌ ಮಾಡಿ ಬಿಡುಗಡೆಗೊಳಿಸಿದ್ದಾರೆ. 

ಪಾಂಡವಪುರ (ಜು.30): ಪರವಾನಗಿ ಇಲ್ಲದೆ ಗಣಿ ಸಾಮಗ್ರಿಗಳನ್ನು ಸಾಗಿಸುತ್ತಿದ್ದ 30ಕ್ಕೂ ಹೆಚ್ಚು ಲಾರಿಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ನಡುವೆ ಶಾಸಕ ಸಿ.ಎಸ್‌.ಪುಟ್ಟರಾಜು ಮಧ್ಯಪ್ರವೇಶಿಸಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಆಗಿರುವ ತೀರ್ಮಾನವನ್ನು ಹಿರಿಯ ಭೂ ವಿಜ್ಞಾನಿ ಅವರಿಗೆ ತಿಳಿಸಿದ ಬಳಿಕ ಲಾರಿಗಳಿಗೆ ನೋಟೀಸ್‌ ಮಾಡಿ ಬಿಡುಗಡೆಗೊಳಿಸಿದ್ದಾರೆ. ಕಟ್ಟಡ ಸಾಮಗ್ರಿಗಳನ್ನು ತುಂಬಿಕೊಂಡು ಸಾಗುತ್ತಿದ್ದ ಸುಮಾರು 30ಕ್ಕೂ ಹೆಚ್ಚು ಲಾರಿಗಳನ್ನು ತಾಲೂಕಿನ ಕಟ್ಟೇರಿ ಚೆಕ್‌ಪೋಸ್ಟ್‌ ಬಳಿ ಗಣಿ ಅಧಿಕಾರಿಗಳು ತಡೆದು ನಿಲ್ಲಿಸಿದರು. 

ಲಾರಿಗಳ ಪರವಾನಗಿಯನ್ನು ಪರಿಶೀಲಿಸಿದಾಗ ಮೂರ್ನಾಲ್ಕು ಲಾರಿಗಳಿಗೆ ಮಾತ್ರ ಪರ್ಮಿಟ್‌ ಇತ್ತೆಂದು ಹೇಳಲಾಗಿದೆ. ಉಳಿದ ಲಾರಿಗಳಿಗೆ ಪರ್ಮಿಟ್‌ ಇಲ್ಲದಿದ್ದರಿಂದ ಅವುಗಳನ್ನು ರಸ್ತೆಯಲ್ಲೇ ತಡೆದು ನಿಲ್ಲಿಸಲಾಗಿತ್ತು. ಲಾರಿಗಳನ್ನು ತಡೆದ ಗಣಿ ಅಧಿಕಾರಿಗಳ ವಿರುದ್ಧ ಚಾಲಕರು ಹಾಗೂ ಮತ್ತಿತರರು ಮಾತಿನ ಚಕಮಕಿ ನಡೆಸಿ ವಾಗ್ವಾದಕ್ಕಿಳಿದರು. ಆದರೂ ಗಣಿ ಅಧಿಕಾರಿಗಳು ಲಾರಿಗಳನ್ನು ಬಿಡದೆ ತಡೆದು ನಿಲ್ಲಿಸಿದ್ದರು.

ಅತ್ತೆ ಜತೆ ಅಕ್ರಮ ಸಂಬಂಧ: ಸ್ನೇಹಿತನ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಬೆಸ್ಟ್‌ಫ್ರೆಂಡ್‌

ಸ್ಥಳಕ್ಕೆ ಶಾಸಕ ಭೇಟಿ, ಅಧಿಕಾರಿಗಳ ಜತೆ ಚರ್ಚೆ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಸಿ.ಎಸ್‌.ಪುಟ್ಟರಾಜು ಗಣಿ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಕೈಕುಳಿ ಕೆಲಸ ಮಾಡಿಕೊಂಡು ಗಣಿಗಾರಿಕೆ ಮಾಡುವವರಿಗೆ ತೊಂದರೆ ಕೊಡಬಾರದು ಎಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ವಿಷಯವಾಗಿ ಕಂದಾಯ ಮತ್ತು ಗಣಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳೊಂದಿಗೂ ಮಾತುಕತೆ ನಡೆಸಲಾಗಿದೆ. ಅವರೂ ಒಂದು ನಿರ್ಧಾರಕ್ಕೆ ಬರುವವರೆಗೆ ಕೆಲಸ ಮಾಡಿಕೊಂಡು ಹೋಗುವಂತೆ ತಿಳಿಸಿರುವ ಆದೇಶ ಕಾಪಿ ಇದೆ. 

ಆದರೂ ಇವರನ್ನು ತಡೆದು ನಿಲ್ಲಿಸಿರುವುದೇಕೆ. ನೀವು ಗಣಿಗಾರಿಕೆ, ಕ್ರಷರ್‌ ನಡೆಸುವವರ ವಿರುದ್ಧ ಏನಾದರೂ ಕ್ರಮ ಕೈಗೊಳ್ಳಿ. ಇವರಿಗೇಕೆ ತೊಂದರೆ ಕೊಡುವಿರಿ ಎಂದು ಪ್ರಶ್ನಿಸಿದರು. ನಂತರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪದ್ಮಜಾ ಅವರೊಂದಿಗೆ ದೂರವಾಣಿಯಲ್ಲೇ ಮಾತುಕತೆ ನಡೆಸಿ ಕೈಕುಳಿಯಲ್ಲಿ ಗಣಿಗಾರಿಕೆ ಮಾಡುವವರಿಗೆ ತೊಂದರೆ ನೀಡದಂತೆ ನಿಮ್ಮ ಅಧಿಕಾರಿಗಳಿಗೆ ಸೂಚಿಸುವಂತೆ ತಿಳಿಸಿದ ಬಳಿಕ ಪರ್ಮಿಟ್‌ ಇಲ್ಲದ ಲಾರಿಗಳಿಗೆ ನೋಟೀಸ್‌ ನೀಡಿ ಅಧಿಕಾರಿಗಳು ಬಿಟ್ಟು ಕಳುಹಿಸಿದರು.

ಗಣಿ ಇಲಾಖೆ ಕಚೇರಿ ಎದುರು ಪ್ರತಿಭಟನೆ: ಪಾಂಡವಪುರ ತಾಲೂಕಿನ ಕಟ್ಟೇರಿ ಬಳಿ ಪರ್ಮಿಟ್‌ ಇಲ್ಲದೆ ಗಣಿ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ನೋಟೀಸ್‌ ನೀಡಿ ಬಿಡುಗಡೆಗೊಳಿಸಿದ ಗಣಿ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ರೈತಸಂಘದ ಕಾರ್ಯಕರ್ತರು ನಗರದ ಗಣಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಗಣಿ ಇಲಾಖೆ ಎದುರು ಸೇರಿದ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪರ್ಮಿಟ್‌ ಇಲ್ಲದ ಲಾರಿಗಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸದೆ ಬಿಡುಗಡೆ ಮಾಡಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಶಾಸಕ ಸಿ.ಎಸ್‌.ಪುಟ್ಟರಾಜು ಅವರ ಒತ್ತಡಕ್ಕೆ ಮಣಿದು ಲಾರಿಗಳನ್ನು ಬಿಟ್ಟು ಕಳುಹಿಸಿದ್ದೀರಿ. ಅಕ್ರಮ ಗಣಿಗಾರಿಕೆ ಹಾಗೂ ಗಣಿ ಸಾಮಗ್ರಿಗಳ ಅಕ್ರಮ ಸಾಗಣೆಗೆ ಗಣಿ ಅಧಿಕಾರಿಗಳು ಒತ್ತಾಸೆಯಾಗಿ ನಿಂತಿರುವುದು ಇದರಿಂದ ಸಾಬೀತಾಗಿದೆ. ಯಾವುದೇ ಸರ್ಕಾರದ ಆದೇಶವಿಲ್ಲದಿದ್ದರೂ ಅವರ ಮಾತಿನ ಆಧಾರದ ಮೇಲೆ ಬಿಟ್ಟು ಕಳುಹಿಸಿದ್ದು ಎಷ್ಟುಸರಿ. ಸರ್ಕಾರದ ಆದೇಶವಿದ್ದರೆ ನಮಗೂ ಕೊಡಿ ಎಂದು ಪಟ್ಟು ಹಿಡಿದಾಗ ಅಧಿಕಾರಿಗಳು ತಬ್ಬಿಬ್ಬಾದರು. ಲಾರಿಗಳಿಗೆ ಕೇವಲ ನೋಟೀಸ್‌ ನೀಡಿದರೆ ಅದರಿಂದ ಯಾವ ಪ್ರಯೋಜನವಾಗದು. 

Mandya: ಟ್ರಯಲ್‌ ಬ್ಲಾಸ್ಟ್‌ ನಡೆಸುವುದೇ ಮೂರ್ಖತನ: ಎಂ.ಲಕ್ಷ್ಮಣ್‌

ಇಂತಹ ಕ್ರಮಗಳಿಂದ ಅಕ್ರಮ ಗಣಿಗಾರಿಕೆಯನ್ನು ಎಂದಿಗೂ ತಡೆಯಲಾಗದು. ನಿಮ್ಮ ವಿರುದ್ಧವೇ ಪೊಲೀಸ್‌ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪ್ರಸನ್ನಗೌಡ, ಕೆ.ಆರ್‌.ಜಯರಾಂ, ರಾಜೇಗೌಡ, ಪಾಂಡವಪುರ ತಾಲೂಕು ಅಧ್ಯಕ್ಷ ಹರೀಶ್‌, ಎಸ್‌.ಸಿ.ಮಧುಚಂದನ್‌, ಬೋರೇಗೌಡ, ಕರವೇ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಎಚ್‌.ಡಿ.ಜಯರಾಂ, ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್‌, ಹುಲ್ಕೆರೆ ಮಹದೇವು ಇತರರಿದ್ದರು.