ನಾರಾಯಣ ಹೆಗಡೆ

ಹಾವೇರಿ(ಮೇ.27): ಕೊರೋನಾ ಎರಡನೇ ಅಲೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದೆ. ಅದರಲ್ಲೂ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲದೇ ಮರಣ ಪ್ರಮಾಣವೂ ಜಿಲ್ಲೆಯಲ್ಲಿ ಹೆಚ್ಚಿದ್ದು, ಸಾವಿನ ಸಂಖ್ಯೆ 400ರ ಗಡಿ ದಾಟಿದೆ.

ಜಿಲ್ಲೆಯಲ್ಲಿ ಮಂಗಳವಾರದವರೆಗೆ 18,817 ಕೋವಿಡ್‌- 19 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಮಂಗಳವಾರದವರೆಗೆ 16364 ಜನರು ಸೋಂಕಿನಿಂದ ಗುಣಮುಖರಾಗಿದ್ದರೆ, 406 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಮೊದಲ ಅಲೆಯಲ್ಲಿ 12 ಸಾವಿರದಷ್ಟಿದ್ದ ಪ್ರಕರಣ ಎರಡನೇ ಅಲೆಯಲ್ಲಿ 7615 ಪಾಸಿಟಿವ್‌ ಕೇಸ್‌ ದೃಢಪಟ್ಟಿವೆ. ಮೊದಲ ಅಲೆಯಲ್ಲಿ 196 ಜನರು ಸೋಂಕಿಗೆ ಬಲಿಯಾಗಿದ್ದರು. ಈಗ ಕೇವಲ 45 ದಿನಗಳಲ್ಲಿ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸೋಂಕು ಮತ್ತು ಸಾವು ಎರಡೂ ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಏರುತ್ತಿದೆ.

"

ಮಕ್ಕಳು, ಯುವಕರೇ ಹೆಚ್ಚು:

ಕೊರೋನಾ ಎರಡನೇ ಅಲೆ ಶುರುವಾದ ಮೇಲೆ ಜಿಲ್ಲೆಯಲ್ಲಿ 7615 ಜನರಿಗೆ ಸೋಂಕು ತಗುಲಿದೆ. ಈ ಪೈಕಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಸಂಖ್ಯೆಯೇ ಅಧಿಕವಾಗಿದೆ. 18 ವರ್ಷದೊಳಗಿನ 721 ಜನರಿಗೆ ಸೋಂಕು ದೃಢಪಟ್ಟಿದೆ. ಇನ್ನು 19ರಿಂದ 30 ವರ್ಷದೊಳಗಿನ 1816 ಯುವಕರಿಗೆ ಪಾಸಿಟಿವ್‌ ಬಂದಿವೆ. ಒಟ್ಟಾರೆ 30 ವರ್ಷದೊಳಗಿನವರಿಗೆ 2537 ಜನರಿಗೆ ಕೋವಿಡ್‌- 19 ದೃಢಪಟ್ಟಿದೆ. ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್‌ ಎಂದು ಹೇಳಲಾಗುತ್ತಿದ್ದರೂ ಈಗಲೇ ಆ ವರ್ಗದ ವಯೋಮಾನದವರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ.

ಹಾವೇರಿಯಲ್ಲಿ ಮೊದಲ ಬ್ಲ್ಯಾಕ್‌ ಫಂಗಸ್‌ ಪತ್ತೆ: ಚಿಕಿತ್ಸೆಗೆ ಔಷಧಿನೇ ಇಲ್ಲ..!

31ರಿಂದ 40 ವರ್ಷ ವಯೋಮಾನದ 1667 ಜನರಿಗೆ, 41ರಿಂದ 50 ವರ್ಷದವರೆಗಿನ 1322 ಜನರಿಗೆ, 51ರಿಂದ 60 ವರ್ಷದವರಿಗೆ 1039 ಜನರಿಗೆ ಹಾಗೂ 60 ವರ್ಷ ಮೇಲ್ಪಟ್ಟ1050 ಜನರಿಗೆ ಸೋಂಕು ತಗಲಿದೆ. ಒಟ್ಟಾರೆ ಎರಡನೇ ಅಲೆಯಲ್ಲಿ 7615 ಜನರಿಗೆ ಸೋಂಕು ಬಂದಿವೆ.

ಮಹಿಳೆಯರಿಗಿಂತ ಪುರುಷರಲ್ಲೇ ಹೆಚ್ಚು:

ಜಿಲ್ಲೆಯಲ್ಲಿ ಕೊರೋನಾ ಸೋಂಕು ಪುರುಷರಲ್ಲೇ ಅಧಿಕ ಎಂಬುದನ್ನು ಅಂಕಿ- ಅಂಶ ಹೇಳುತ್ತವೆ. ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿರುವ 7615 ಜನರ ಪೈಕಿ 4382 ಪುರುಷರು ಸೇರಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ 3233 ಮಹಿಳೆಯರಿಗೆ ಪಾಸಿಟಿವ್‌ ಬಂದಿದೆ. ಅಂದರೆ ಮಹಿಳೆಯರಿಗಿಂತ ಸುಮಾರು ಒಂದು ಸಾವಿರ ಹೆಚ್ಚು ಪುರುಷರಲ್ಲಿ ಸೋಂಕು ದೃಢಪಟ್ಟಿದೆ.

ಪುರುಷರು ಮನೆಯಿಂದ ಹೊರಬರುತ್ತಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. ಅಗತ್ಯ ವಸ್ತು ಖರೀದಿ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗಾಗಿ ಪುರುಷರು ಅನಿವಾರ್ಯವಾಗಿ ಹೊರಗೆ ಬರುತ್ತಿರುವುದರಿಂದ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ತಗಲಿದೆ.

400ರ ಗಡಿ ದಾಟಿದ ಸಾವು:

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ ಏರುತ್ತಲೇ ಇದೆ. ರಾಜ್ಯಮಟ್ಟದಲ್ಲೇ ಮರಣ ಪ್ರಮಾಣ ಜಿಲ್ಲೆಯಲ್ಲಿ ಅಧಿಕವಾಗಿರುವುದು ಆತಂಕ ಹುಟ್ಟಿಸುತ್ತಿದೆ. ಮೊದಲ ಅಲೆಯಲ್ಲಿ 196 ಜನರು ಸೋಂಕಿಗೆ ಬಲಿಯಾಗಿದ್ದರು. ಆದರೆ, ಎರಡನೇ ಅಲೆ ಶುರುವಾದ ಒಂದೂವರೆ ತಿಂಗಳಲ್ಲೇ 210 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ ಮಂಗಳವಾರದವರೆಗೆ 406 ಜನರು ಕೊರೋನಾದಿಂದ ಮೃತಪಟ್ಟಿದ್ದಾರೆ.

ಗ್ರಾಮೀಣ ಭಾಗದಲ್ಲೇ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ಟೆಸ್ಟ್‌ ಮಾಡಿಸುವಲ್ಲಿ ವಿಳಂಬ, ನಂತರ ವರದಿ ಬರುವುದೂ ತಡವಾಗುತ್ತಿರುವುದರಿಂದ ಗ್ರಾಮೀಣರು ಆಸ್ಪತ್ರೆಗೆ ದಾಖಲಾಗಲು ತಡವಾಗುತ್ತಿದೆ. ರೋಗ ಉಲ್ಬಣಗೊಂಡಾಗ ಆಸ್ಪತ್ರೆ ಸೇರುತ್ತಿರುವುದರಿಂದ ಸಾವಿನ ಪ್ರಮಾಣ ಹೆಚ್ಚುತ್ತಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona