ಮಲೆನಾಡಿನಲ್ಲಿ ಮರುಕಳಿಸಿದ ಮುಂಗಾರು ಮಳೆಯ ವೈಭವ
ಒಂದೇ ಸಮನೇ ಬೀಸುವ ಥಂಡಿ ಗಾಳಿ, ನಿರಂತರವಾಗಿ ಸುರಿಯುವ ಬೀಳುವ ತುಂತುರು ಮಳೆ, ಕೈಯಲ್ಲಿ ಕೊಡೆ ಇಲ್ಲದೇ ಹೊರಗೆ ಹೋಗಲಾರದಂತಹ ಚಿತ್ರಣ ಜಿಲ್ಲೆಯ ಮಲೆನಾಡಿನ ಕೆಲವೆಡೆ ಕಾಣಿಸಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಚಿಕ್ಕಮಗಳೂರು(ಜು.18): ವಾಡಿಕೆಯಂತೆ ಕಳೆದ ಜೂನ್ ತಿಂಗಳಲ್ಲಿ ಮಳೆ ಬಾರದಿದ್ದರೂ ಒಂದೆರಡು ದಿನಗಳಿಂದ ಮಲೆನಾಡಿನಲ್ಲಿ ಮುಂಗಾರು ಮಳೆಯ ವೈಭವ ಮರುಕಳಿಸಿದೆ.
ಒಂದೇ ಸಮನೇ ಬೀಸುವ ಥಂಡಿ ಗಾಳಿ, ನಿರಂತರವಾಗಿ ಸುರಿಯುವ ಬೀಳುವ ತುಂತುರು ಮಳೆ, ಕೈಯಲ್ಲಿ ಕೊಡೆ ಇಲ್ಲದೇ ಹೊರಗೆ ಹೋಗಲಾರದಂತಹ ಚಿತ್ರಣ ಜಿಲ್ಲೆಯ ಮಲೆನಾಡಿನ ಕೆಲವೆಡೆ ಕಾಣಿಸಿಕೊಂಡಿದೆ.
ಮಳೆಯಿಂದ ಶೀತಗಾಳಿ ಹೆಚ್ಚಳ: ಕೊರೋನಾ, ಇತರ ವೈರಸ್ ಹೆಚ್ಚಳ!
ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಹುಟ್ಟಿಹರಿಯುವ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಬರುತ್ತಿದೆ. ಇದರಿಂದ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಮಳೆ ಮುಂದುವರಿದಿದ್ದರಿಂದ ಜಲಾಶಯಗಳ ಒಳಹರಿವು ಜಾಸ್ತಿಯಾಗಲಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ, ಕೊಟ್ಟಿಗೆಹಾರ, ಜಾವಳಿ, ಗೋಣಿಬೀಡು ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು, ಕಳೆದ ವರ್ಷದ ಮಹಾ ಮಳೆಗೆ ತತ್ತರಿಸಿರುವ ಇಲ್ಲಿನ ಜನರಲ್ಲಿ ಆತಂಕ ಎದುರಾಗಿದೆ.
ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಮಳೆ ಸುರಿಯುತ್ತಿದ್ದು, ಆಗಾಗ ಬಿಡುವು ನೀಡಿತಾದರೂ ಮೋಡ ಕವಿದ ವಾತಾವರಣ ಮುಂದುವರಿದಿತ್ತು. ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಕಡೂರು ಹಾಗೂ ತರೀಕೆರೆ ತಾಲೂಕುಗಳಲ್ಲೂ ಉತ್ತಮ ಮಳೆ ಬಂದಿದೆ.