ಶಿವಮೊಗ್ಗ(ಜು.09): ಜಿಲ್ಲೆಯ ಘಟ್ಟಪ್ರದೇಶ ಹಾಗೂ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಂಗೆ, ಭದ್ರೆ, ಶರಾವತಿ ಸೇರಿದಂತೆ ಜಿಲ್ಲೆಯ ಪ್ರಮುಖ ನದಿಗಳು ತುಂಬಿ ಹರಿಯತೊಡಗಿವೆ.

ಕಳೆದೆರಡು ದಿನಗಳಿಂದ ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಜಿಲ್ಲೆಯ ಪ್ರಮುಖ ನದಿಗಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ನದಿಗಳಿಗೆ ಜೀವಕಳೆ ಬಂದಿದೆ.

ತುಂಗಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯ ಪರಿಣಾಮ ನದಿ ನೀರಿನ ಹರಿವು ಏರಿಕೆ ಕಂಡಿದೆ. ಶಿವಮೊಗ್ಗ ನಗರದ ಕೋರ್ಪಲಯ್ಯನ ಛತ್ರದ ಬಳಿ ಇರುವ ಐತಿಹಾಸಿಕ ಮಂಟಪ ಮುಳುಗಲು ಇನ್ನು 3 ಅಡಿ ಮಾತ್ರ ಬಾಕಿ ಇದೆ.

ತೀರ್ಥಹಳ್ಳಿ ಸೇರಿ ಶೃಂಗೇರಿ, ಕೊಪ್ಪ ಮುಂತಾದ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹಾಗಾಗಿ ತುಂಗಾ ಜಲಾಶಯದ 11 ಕ್ರಸ್ಟ್‌ ಗೇಟ್‌ಗಳನ್ನು ತೆರೆದು ಸುಮಾರು 25 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಯ ಬಿಡಲಾಗುತ್ತಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಸಾರ್ವಜನಿಕರು ಎಚ್ಚರದಿಂದಿರಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಒಂದು ಪರಿಹಾರವಾಗುತ್ತಿದ್ದಂತೆಯೇ ರಾಜ್ಯ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ

ಜು.1 ರಿಂದ 8 ರವರೆಗೆ ಶಿವಮೊಗ್ಗ ತಾಲೂಕಿನಲ್ಲಿ 82 ಮಿ.ಮೀ, ಭದ್ರಾವತಿ ತಾಲೂಕಿನಲ್ಲಿ 71 ಮಿ.ಮೀ, ತೀರ್ಥಹಳ್ಳಿಯಲ್ಲಿ 272.00 ಮಿ.ಮೀ, ಸಾಗರ 198.80 ಮಿ.ಮೀ, ಶಿಕಾರಿಪುರ 82.80 ಮಿ.ಮೀ, ಸೊರಬ 101.40 ಮಿ.ಮೀ, ಹೊಸನಗರ 304.30 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಸರಾಸರಿ 159.01 ಮಿ.ಮೀ ಮಳೆಯಾಗಿದೆ.

ಲಿಂಗನಮಕ್ಕಿ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ1761.25 ಅಡಿ ಇದೆ. ಜಲಾಶಯನ ಪ್ರದೇಶದಲ್ಲಿ 53.20 ಮಿ.ಮೀ. ಮಳೆಯಾಗಿದೆ. ಭದ್ರಾ ಜಲಾಶಯದಲ್ಲಿ 144.50 ಅಡಿ ನೀರು ಇದ್ದು, ಜಲಾನಯನ ಪ್ರದೇಶದಲ್ಲಿ 8.20 ಮಿ.ಮೀ. ಮಳೆಯಾಗಿದೆ. ತುಂಗಾ ಜಲಾಶಯದ ಸರಾಸರಿ ಮಟ್ಟ588.24 ಅಡಿ ಇದ್ದು, ಇಂದು ಕೂಡ 588.24 ಅಡಿ ಇದೆ. ಜಲಾಶಯ ಭರ್ತಿಯಾಗಿದ್ದು, ಒಳ ಹರಿವು 23,560 ಕ್ಯುಸೆಕ್‌ ತಲುಪಿದೆ. ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ.