ಗಂಗಾವತಿ: ಹೆಚ್ಚಿದ ಬಿಸಿಲಿನ ತಾಪ, ನೀರಿಗಾಗಿ ಮಂಗಗಳ ಪೈಪೋಟಿ
ಬೇಸಿಗೆ ಪ್ರಾರಂಭದಲ್ಲೇ ಬಿಸಿಲಿನ ತಾಪ ಹೆಚ್ಚಳ| ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ 36 ಡಿಗ್ರಿ ಸೆಲ್ಸಿಯಸ್ ತಾಪಮಾನ| ನೀರಿಗಾಗಿ ಮನೆ ಮನೆಗಳಿಗೆ ನುಗ್ಗುತ್ತಿರುವ ಮಂಗಗಳು|
ರಾಮಮೂರ್ತಿ ನವಲಿ
ಗಂಗಾವತಿ(ಫೆ.28): ಗಂಗಾವತಿ ತಾಲೂಕಿನಲ್ಲಿ ಬೇಸಿಗೆ ಆರಂಭದಲ್ಲಿಯೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಪಶು, ಪಕ್ಷಿಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಫೆಬ್ರುವರಿ ಅಂತ್ಯದಲ್ಲೇ ವಿಪರೀತ ಬಿಸಿಲು, ಸೆಖೆ ಇದ್ದು, ಮೇ, ಜೂನ್ ತಿಂಗಳಲ್ಲಿ ತಾಪ ಇನ್ನಷ್ಟು ಹೆಚ್ಚಾಗುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿವೆ.
ನಗರದ ಸುತ್ತಲೂ ಬೆಟ್ಟ, ಗುಡ್ಡಗಳಿದ್ದು, ಪಶು, ಪಕ್ಷಿಗಳ ಸಂಖ್ಯೆಯೂ ಅಧಿಕವಾಗಿದೆ. ಆದರೆ ಆ ಪ್ರಾಣಿಗಳಿಗೆ ಕುಡಿಯಲು ನೀರಿಲ್ಲದ ಕಾರಣ ಸಮೀಪದ ತುಂಗಭದ್ರಾ ನದಿ ಮತ್ತು ಮನೆ ಮನೆಗಳಲ್ಲಿರುವ ನೀರಿನ ಟ್ಯಾಂಕ್‌ಗಳಿಗೆ ಮಾರು ಹೋಗಿವೆ.
ಮಂಗಗಳ ದಂಡು:
ಸಮೀಪವಿರುವ ಬೆಟ್ಟ ಗುಡ್ಡಗಳಲ್ಲಿ ಕಲ್ಲು ಗಣಿಗಾರಿಕೆಯಿಂದ ತತ್ತರಿಸಿದ ಮಂಗಗಳು ಈಗ ನಗರಕ್ಕೆ ದಾಳಿ ಇಟ್ಟಿವೆ. ಮನೆ ಮನೆಗಳಿಗೆ ನುಗ್ಗುತ್ತಿರುವ ಮಂಗಗಳು ಮನೆಯೊಳಗಿರುವ ನೀರಿನ ಟ್ಯಾಂಕ್ ಅಥವಾ ಬ್ಯಾರಲ್‌ಗಳಿಗೆ ದಾಳಿ ಇಟ್ಟು ನೀರು ಕುಡಿಯುಲು ಪೈಪೋಟಿ ನಡೆಸುತ್ತಿರುವುದು ಸಾಮಾನ್ಯವಾಗಿದೆ. ಆನೆಗೊಂದಿ ರಸ್ತೆಯ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಂಗಗಳು ಈಗ ಮನೆಗಳಿಗೆ ದಾಳಿ ಇಟ್ಟಿದ್ದರಿಂದ ಮನೆ ಮಾಲಿಕರು ಭಯಭೀತರಾಗಿದ್ದಾರೆ.
ಕಳೆದ ವರ್ಷ ಹಿರೇಜಂತಗಲ್ ಗ್ರಾಮದಲ್ಲಿ ವೃದ್ದೆಗೆ ಮಂಗ ಕಚ್ಚಿ ಗಾಯಗೊಳಿಸಿತ್ತು. ಅರಣ್ಯ ಇಲಾಖೆ ಮಂಗಗಳನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ. ತಾಲೂಕಿನ ಹೊಸಕೇರಾ ಕ್ಯಾಂಪಿನಲ್ಲಿ ಒಂದು ಮಂಗ ಸೆರೆ ಹಿಡಿಯಲು 600ರಿಂದ 700 ನಿಗದಿಪಡಿಸಿ ಹಲವು ಮಂಗಗಳನು ಸೆರೆ ಹಿಡಿದಿದ್ದಾರೆ. ಆನೆಗೊಂದಿ ರಸ್ತೆಯ ಮಾರ್ಗದಲ್ಲಿರುವ ಪಿಜಿ ಕೇಂದ್ರಕ್ಕೆ ದಾಳಿ ಇಟ್ಟಿರುವ ಮಂಗಗಳು ಮನೆಯೊಳಗೆ ನುಗ್ಗಿ ನೀರು ಕುಡಿಯಲು ಪೈಪೋಟಿ ನಡೆಸಿವೆ.
ಬಿಸಿಲಿನ ತಾಪಮಾನ:
ಗಂಗಾವತಿ ನಗರದಲ್ಲಿ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದು, ಜನರು ತಂಪು ಪಾನೀಯಗಳ ಸೇವೆನೆಗೆ ಮುಂದಾಗಿದ್ದಾರೆ. ಪಿಯು ಪ್ರಥಮ ವರ್ಷದ ಪರೀಕ್ಷೆ ಮುಗಿದಿದ್ದು, ಇನ್ನೂ ದ್ವಿತೀಯ ಪಿಯು, ಪ್ರೌಢ ಶಾಲೆಗಳ ಮಟ್ಟದ ಪರೀಕ್ಷೆಗಳು ಆರಂಭ ವಾಗಬೇಕಿವೆ. ಈ ವರ್ಷ ಬಿಸಿಲಿನ ತಾಪ ತೀವ್ರ ಹೆಚ್ಚಳ ವಾಗಿದ್ದು, ಕಾಲುವೆ ನೀರು ಪೂರೈಕೆ ಸ್ಥಗಿತಗೊಳ್ಳುತ್ತಿದ್ದಂತೆಯೇ ನೀರಿಗಾಗಿ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.
ಮದ್ದೂರು ಏಳನೀರಿಗೆ ಭಾರಿ ಬೇಡಿಕೆ:
ಗಂಗಾವತಿ ನಗರಕ್ಕೆ ಮಂಡ್ಯ ಜಿಲ್ಲೆ ಮದ್ದೂರು ಎಳನೀರು ಬಂದಿದ್ದು, ಭಾರಿ ಬೇಡಿಕೆ ಇದೆ. ಒಂದು ಎಳನೀರಿಗೆ 30ರಿಂದ 40ಗೆ ಮಾರಾಟ ನಡೆದಿವೆ. ಬಿಸಿಲಿನ ಧಗೆ ಹೆಚ್ಚಾಗುತ್ತಿದ್ದರಿಂದ ಜನರು ಸ್ಥಳೀಯ ಟೆಂಗಿನಕಾಯಿ ನೀರನ್ನು ಬಿಟ್ಟು ಮದ್ದೂರು ಕಾಯಿಗಳನ್ನು ಖರೀದಿಸುತ್ತಿದ್ದಾರೆ. ಕೆಂಪು ಬಣ್ಣದ ಕಾಯಿಗಳಿದ್ದು, ಇದೇ ವರ್ಷ ಅಧಿಕ ಮಟ್ಟದಲ್ಲಿ ಕಾಯಿಗಳ ಮಾರಾಟ ನಡೆದಿವೆ. ಅಲ್ಲದೇ ಕರಬೂಜು ಮತ್ತು ಕಲ್ಲಂಗಡಿ ಹಣ್ಣುಗಳ ಮಾರಾಟ ಭರದಿಂದ ನಡೆದಿವೆ. ಕಿನ್ನಾಳ, ಕೊಪ್ಪಳ ಮತ್ತು ಗದಗ ನಗರದಿಂದ ಹಣ್ಣುಗಳು ಮಾರಾಟಕ್ಕೆ ಬರುತ್ತಿದ್ದು, ಜನರು ಬಿಸಿಲಿನ ಧಗೆ ತೀರಿಸಿಕೊಳ್ಳಲು ಹಣ್ಣುಗಳನ್ನು ಖರೀದಿಸುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗಂಗಾವತಿ ನಗರದಲ್ಲಿ ಮಂಗಗಳ ಹಾವಳಿ ಅತಿಯಾಗಿದ್ದು, ಮನೆಯೊಳಗೆ ನುಗ್ಗುತ್ತವೆ. ಮಂಗಗಳು ಗುಂಪು ಗಂಪಾಗಿ ದಾಳಿ ಇಡುತ್ತಿದ್ದು, ಮನೆಯಲ್ಲಿರುವ ಪದಾರ್ಥಗಳನ್ನು ಎತ್ತಿಕೊಂಡು ಹೋಗುತ್ತವೆ. ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕಾಗಿದೆ. ಪಶು ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕೈಗೊಳ್ಳಬೇಕಾಗಿದೆ ಎಂದು ರಾಮಲಿಂಗೇಶ್ವರ ಕಾಲೋನಿಯ ಸಿ. ಚಂದ್ರರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಗಂಗಾವತಿ ಅರಣ್ಯಾಧಿಕಾರಿ ಶಿವರಾಜ ಮೇಟಿ ಅವರು, ಗಂಗಾವತಿ ನಗರ ಸೇರಿದಂತೆ ಸುತ್ತಮುತ್ತಲೂ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶ ಇರುವುದರಿಂದ ಮಂಗಗಳ ಸಂಖ್ಯೆ ಅಧಿಕವಾಗಿದೆ. ಅಲ್ಲದೇ ಈ ಪ್ರದೇಶ ಹನುಮಾನ್ ನಾಡು ಎಂದು ಖ್ಯಾತಿಯಾಗಿದ್ದರಿಂದ ಮಂಗಗಳು ಇರುವುದು ಸಾಮಾನ್ಯವಾಗಿದೆ. ಮಂಗಗಳು ಸಾರ್ವಜನಿಕರಿಗೆ ಉಪಟಳ ನೀಡಿರುವುದರ ಬಗ್ಗೆ ದೂರು ಬಂದರೆ ಹಿಡಿದು ಅರಣ್ಯಕ್ಕೆ ಬಿಡಲಾಗುತ್ತದೆ ಎಂದು ತಿಳಿಸಿದ್ದಾರೆ.