ರಾಮನಗರದಲ್ಲೂ ಈಗ ಮಂಗನಕಾಯಿಲೆ ಭೀತಿ

ಮಲೆನಾಡನ್ನು ಬೆಚ್ಚಿ ಬೀಳಿಸಿದ್ದ ಮಂಗನ ಕಾಯಿಲೆ ಭೀತಿ ಇದೀಗ ರಾಮನಗರದ ಜನತೆಯಲ್ಲಿಯೂ ಕಾಡಿದೆ. ಮಂಗವೊಂದರ ಶವ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. 

Monkey disease Fear in Ramanagar

ರಾಮನಗರ: ಮಲೆನಾಡು ಭಾಗದ ಜನರ ನಿದ್ದೆಗೆಡಿಸಿರುವ ಮಂಗನ ಕಾಯಿಲೆ ಇದೀಗ ರೇಷ್ಮೆ ನಗರಿ ರಾಮನಗರಕ್ಕೂ ವ್ಯಾಪಿಸಿರುವ ಅನುಮಾನ ಮೂಡಿದೆ. ನಗರದ ಹೊರವಲಯದ ಹೋಟೆಲ್‌ವೊಂದರ ಆವರಣದಲ್ಲಿ 5 ವರ್ಷದ ಹೆಣ್ಣು ಮಂಗವೊಂದರ ಶವ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಮಂಗನ ಮೃತದೇಹವನ್ನು ಕಂಡ ತಕ್ಷಣ ಹೋಟೆಲ್‌ ಮಾಲೀಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 

ತಕ್ಷಣ ಅರಣ್ಯಾಧಿಕಾರಿಗಳು ಹಾಗೂ ಪಶು ವೈದ್ಯರು ಆಗಮಿಸಿ ಪರಿಶೀಲನೆ ನಡೆಸಿ, ಸ್ಥಳದಲ್ಲೇ ಮಂಗನ ಮರಣೋತ್ತರ ಪರೀಕ್ಷೆ ನಡೆಸಿದರು. ರಾಜ್ಯದ ವಿವಿಧೆಡೆ ಮಂಗನ ಕಾಯಿಲೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮೃತ ಮಂಗನ ಅಂಗಾಂಗಗಳನ್ನು ಪುಣೆಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲು ಪಶುವೈದ್ಯರು ನಿರ್ಧರಿಸಿದ್ದಾರೆ. 

ಈ ಮೊದಲು ಮಂಗಗಳು ಸಾವನ್ನಪ್ಪುವುದು ಸಾಮಾನ್ಯವಾಗಿತ್ತು. ಆದರೆ, ಈಗ ರಾಜ್ಯದ ಹಲವೆಡೆ ಮಂಗನ ಕಾಯಿಲೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಕ್ರಮ ವಹಿಸಲಾಗಿದೆ ಎಂದು ಅರಣ್ಯಾಧಿಕಾರಿ ರಾಮಕೃಷ್ಣ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯೆ ನೀಡಿದರು.

ಮೇಲ್ನೋಟಕ್ಕೆ ಗರ್ಭದಲ್ಲಿ ಗಡ್ಡೆ ಬೆಳೆದು ಕ್ಯಾನ್ಸರ್‌ನಿಂದ ಮಂಗ ಸಾವನ್ನಪ್ಪಿರುವಂತೆ ಕಂಡು ಬರುತ್ತಿದೆ. ಅಂಗಾಂಗಗಳ ಪರೀಕ್ಷೆ ನಡೆದು ವರದಿ ಬಂದ ನಂತರವಷ್ಟೇ ಮಂಗನ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಪಶುವೈದ್ಯ ಹರೀಶ್‌ ಪ್ರತಿಕ್ರಿಯಿಸಿದ್ದಾರೆ.

Latest Videos
Follow Us:
Download App:
  • android
  • ios