ಕೇಂದ್ರ ಬರ ಅಧ್ಯಯನ ತಂಡದಿಂದ ಬರ ಪರಿಸ್ಥಿತಿ ಪರಿಶೀಲನೆ

ಮಳೆ ಕೊರತೆಯಿಂದ ಉಂಟಾಗಿರುವ ಬರಪರಿಸ್ಥಿತಿ ಅಧ್ಯಯನ ಮಾಡಿ, ಪರಿಶೀಲಿಸಲು ಕೇಂದ್ರ ಜಲ ಆಯೋಗದ ನಿರ್ದೇಶಕ ವಿ. ಅಶೋಕ್ ಕುಮಾರ್ ನೇತೃತ್ವದ ತಂಡ ಶುಕ್ರವಾರ ಜಿಲ್ಲೆಯ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ ಕ್ಷೇತ್ರ ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿತು.

Monitoring of Drought Situation by Central Drought Study Team snr

  ತುಮಕೂರು :  ಮಳೆ ಕೊರತೆಯಿಂದ ಉಂಟಾಗಿರುವ ಬರಪರಿಸ್ಥಿತಿ ಅಧ್ಯಯನ ಮಾಡಿ, ಪರಿಶೀಲಿಸಲು ಕೇಂದ್ರ ಜಲ ಆಯೋಗದ ನಿರ್ದೇಶಕ ವಿ. ಅಶೋಕ್ ಕುಮಾರ್ ನೇತೃತ್ವದ ತಂಡ ಶುಕ್ರವಾರ ಜಿಲ್ಲೆಯ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ ಕ್ಷೇತ್ರ ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿತು.

ಜಿಲ್ಲೆಯ 9 ತಾಲೂಕು ತೀವ್ರ ಬರ ಪೀಡಿತ ಪ್ರದೇಶ ಹಾಗೂ ಒಂದು ತಾಲೂಕನ್ನು ಸಾಧಾರಣ ಬರಪೀಡಿತ ತಾಲೂಕೆಂದು ರಾಜ್ಯ ಸರ್ಕಾರ ಘೋಷಿಸಿರುವ ಹಿನ್ನೆಲೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಅರಸಾಪುರದ ಬಳಿ ಜಿಲ್ಲೆಗೆ ಆಗಮಿಸಿದ ಕೇಂದ್ರ ತಂಡದ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿ.ಪಂ.ಸಿಇಒ ಜಿ. ಪ್ರಭು ಬರಮಾಡಿಕೊಂಡರು.

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈರೇನಹಳ್ಳಿ ಗ್ರಾಮದ ನಾಗೇಂದ್ರ ಕುಮಾರ್ ಅವರು 1.14 ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಿರುವ ಶೇಂಗಾ, ತೊಗರಿ, ಅಲಸಂದೆ, ಜೋಳದ ಬೆಳೆ ಪರಿಶೀಲಿಸಿತು. ರೈತ ನಾಗೇಂದ್ರಕುಮಾರ್ ಅವರು ನಾನು, ಉಳುಮೆ ಮಾಡಿ ಬಿತ್ತನೆ ಮಾಡುವುದಕ್ಕೆ 40 ಸಾವಿರ ರು. ಖರ್ಚಾಗಿದೆ. ಮಳೆ ಬಾರದ ಹಿನ್ನೆಲೆ ಬೆಳೆ ಸಂಪೂರ್ಣ ನಷ್ಟವಾಗಿದೆ. ದನಕರುಗಳಿಗೆ ಮೇವು ಸಹ ಆಗುವುದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಮಧುಗಿರಿ ತಾಲೂಕಿನ ಮಾಡಗಾನಹಟ್ಟಿ ಗ್ರಾಮದ ಸರ್ವೆ ನಂಬರ್ 13/1ರ ತಿಪ್ಪೇನರಸಯ್ಯ ಅವರಿಗೆ ಸೇರಿದ ಎರಡು ಎಕರೆ ಕೃಷಿ ಭೂಮಿಯಲ್ಲಿ ಶೇಂಗಾ ಬೆಳೆಯನ್ನು ಪರಿಶೀಲಿಸಿದರು. ಬಿತ್ತನೆ ಮಾಡಿದಾಗಿನಿಂದಲೂ ಸರಿಯಾಗಿ ಮಳೆ ಬಾರದ ಕಾರಣ ಬೆಳೆ ಕುಂಠಿತವಾಗಿದೆ ಎಂದು ಹೇಳಿದರು.

ಮಳೆ ಹಿಂದಿನ ವರ್ಷ ಅತಿವೃಷ್ಠಿಯಿಂದ ಬೆಳೆ ಹಾಳಾಗಿತ್ತು, ಈ ವರ್ಷ ಮಳೆ ಸಕಾಲಕ್ಕೆ ಬಾರದೆ ಬೆಳೆ ನಷ್ಟವಾಗಿದೆ. ಆಗಾಗ್ಗೆ ಮಳೆ ಬಂದರೂ ಸಹ ಭೂಮಿಯ ಮೇಲ್ಭಾಗದ ಒಂದೆರಡು ಇಂಚು ಮಾತ್ರ ತೇವಗೊಂಡಿರುತ್ತದೆ. ಬೇರಿನವರೆಗೆ ತೇವಾಂಶ ಇರುವುದಿಲ್ಲ. ಮುಂದಿನ ಮುಂಗಾರಿನವರೆಗೆ ಜಾನುವಾರುಗಳಿಗೆ ನೀರು, ಮೇವು ಬೇಕು. ಬರಗಾಲದಿಂದ ಜನರ ರಕ್ಷಣೆ ಮಾಡುವಂತೆ ಮತ್ತು ತಾಲೂಕಿನ ಸಮಗ್ರ ವರದಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೀಡಬೇಕು ಎಂದು ರೈತರು ಕೇಂದ್ರ ತಂಡದ ಅಧಿಕಾರಿಗಳಿಗೆ ಮನವಿ ಮಾಡಿದರು.

ನರೇಗಾ ಯೋಜನೆಯಡಿಯಲ್ಲಿ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು. ಗ್ರಾ.ಪಂ. ಸದಸ್ಯರಿಗೆ ಮಾತ್ರ ಕಾಮಗಾರಿ ಮಾಡುವುದಕ್ಕೆ ಅವಕಾಶ ಕಲ್ಪಿಸಿ ಕೊಡಬಾರದು ಎಂದು ರೈತರು ಈ ಸಂದರ್ಭ ಕೇಳಿಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲೆಯ 9 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ ಒಂದು ತಾಲೂಕನ್ನು ಸಾಧಾರಣ ಬರಪೀಡಿತ ತಾಲೂಕು ಎಂದು ಘೋಷಿಸಿರುವ ಹಿನ್ನೆಲೆ ಕೇಂದ್ರ ಜಲ ಆಯೋಗದ ನಿರ್ದೇಶಕರಾದ ಅಶೋಕ್ ಕುಮಾರ್ ವಿ. ಅವರ ನೇತೃತ್ವದ ಅಧಿಕಾರಿಗಳ ಬರ ಪರಿಶೀಲನಾ ತಂಡವು ಕೊರಟಗೆರೆ, ಮಧುಗಿರಿ, ಶಿರಾ ತಾಲೂಕುಗಳ ಆಯ್ದ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದರು.

ಜಿಲ್ಲೆಯಲ್ಲಿ ಶೇ.69ರಷ್ಟು ಬಿತ್ತನೆಯಾಗಿದ್ದು, ಶೇ.73 ರಷ್ಟು ಬೆಳೆ ಹಾನಿಯಾಗಿದ್ದು, ಒಟ್ಟಾರೆ ೧೮೮೦ ಕೋಟಿ ನಷ್ಟವಾಗಿದ್ದು, ಇಳುವರಿ ಪ್ರಮಾಣ ಕೂಡ ಕಡಿಮೆಯಾಗಿದೆ ಎಂದು ತಿಳಿಸಿದರು. ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಸಣ್ಣ ಮತ್ತು ಮಧ್ಯಮ ರೈತರಿಗೆ ಒಂದು ಹೆಕ್ಟೇರ್‌ಗೆ ಬೆಳೆ ನಷ್ಟಕ್ಕೆ ೮,೫೦೦ ರು. ಪರಿಹಾರದಂತೆ ಒಟ್ಟು ೧೪೮ ಕೋಟಿ ಪರಿಹಾರ ನೀಡಲಾಗುವುದು. ರೈತರ ಮನವಿಯ ಮೇರೆಗೆ ಹೆಚ್ಚುವರಿ ಪರಿಹಾರ ಮೊತ್ತಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ತದನಂತರ ತಂಡವು ಡಿ.ವಿ.ಹಳ್ಳಿ, ಕಂಬದಹಳ್ಳಿ, ಡಿ.ವಿ.ಹಳ್ಳಿ ಬಳಿಯ ಬೆಲ್ಲದಮಡು ಗೇಟ್ ಬಳಿಯ ಬೆಳೆ ಹಾನಿಯಾದ ರೈತರ ಪ್ರದೇಶಗಳಿಗೆ ತಂಡವು ಭೇಟಿ ನೀಡಿತು. ಈ ಸಂದರ್ಭ ಎಂ.ಎನ್.ಸಿ.ಎಫ್.ಸಿ. ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಕರಣ್ ಚೌದರಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Latest Videos
Follow Us:
Download App:
  • android
  • ios