ಬೆಂಗಳೂರು(ಫೆ.07): ದೇಶದಲ್ಲಿ ಎಲ್ಲ ಧರ್ಮಿಯರ ನಡುವೆ ಸಮನ್ವಯತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ. ಆದರೆ, ಪ್ರಧಾನಿ ಮೋದಿ, ಅಮಿತ್‌ ಶಾ ದೇಶದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಪುರಭವನ ಮುಂಭಾಗ ‘ಪ್ರಜಾಧಿಕಾರ ಹೋರಾಟ ಸಮಿತಿ’ ನೇತೃತ್ವದಲ್ಲಿ ಗುರುವಾರದಿಂದ ಫೆ.10ರವರೆಗೆ ಹಮ್ಮಿಕೊಂಡಿರುವ ‘ಸಂವಿಧಾನ ಹಾಗೂ ರಾಜಕೀಯ, ಸಾಮಾಜಿಕ, ಆರ್ಥಿಕ, ನಾಗರಿಕ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ’ ನಡೆದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದ್ದಾರೆ.

ಅನುಮತಿ ನೀಡಲು ತಕರಾರು:

ಅನುಮತಿ ಪಡೆದಿಲ್ಲ ಎಂದು ಆರಂಭದಲ್ಲಿ ಪೊಲೀಸರು ಪ್ರತಿಭಟನಾಕಾರರಿಗೆ ತಡೆ ನೀಡಿದರು. ಆಗ ಎಚ್‌.ಎಸ್‌.ದೊರೆಸ್ವಾಮಿ, ಪ್ರತಿಭಟಿಸುವ ಹಕ್ಕಿಲ್ಲವೇ, ಶಾಂತ ರೀತಿಯಲ್ಲಿ ಅಹಿಂಸಾತ್ಮಕ ಮಾರ್ಗದಲ್ಲಿ ಪ್ರತಿಭಟಿಸಬಾರದೇ? ಸ್ವಾತಂತ್ರ ತಂದುಕೊಟ್ಟವರಿಗೇ ಹೋರಾಡುವ ಸ್ವಾತಂತ್ರ್ಯವಿಲ್ಲವೆ? ಪ್ರತಿಭಟನೆಯನ್ನು ಬಿಜೆಪಿ ಸರ್ಕಾರ ಹತ್ತಿಕ್ಕಲು ಪ್ರಯತ್ನಿಸುತ್ತಿರುವುದೇಕೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಪ್ರತಿಭಟನೆಯಲ್ಲಿ ಚಿಂತಕ ಅಲಿಬಾಬಾ ಇನ್ನಿತರರು ಇದ್ದರು.