ಬೆಂಗಳೂರು(ಮಾ.04): ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್‌)ದಲ್ಲಿ ಮಂಗಳವಾರ ಮಹಿಳಾ ಅಗ್ನಿಶಾಮಕ ತಂಡ ನೀಡಿದ ಬೆಂಕಿ ನಂದಿಸುವ ಅಣಕು ಪ್ರದರ್ಶನ ಎಲ್ಲರ ಹುಬ್ಬೇರುವಂತೆ ಮಾಡಿತು. ಮಹಿಳೆಯರು ಯಾವುದಕ್ಕೂ ಕಮ್ಮಿ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.

ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಮಹಿಳಾ ಅಗ್ನಿಶಾಮಕ ತಂಡ ಅಗ್ನಿ ಅವಘಡದ ವೇಳೆ ಕೈಗೊಳ್ಳುವ ಕಾರ್ಯಾಚರಣೆಯ ಅಣಕು ಪ್ರದರ್ಶನ ನೀಡಿದರು. ವಿಶೇಷವೆಂದರೆ ಏಷ್ಯಾ ಖಂಡ ವಿಮಾನ ನಿಲ್ದಾಣಗಳ ಪೈಕಿ ಮಹಿಳಾ ಅಗ್ನಿಶಾಮಕ ತಂಡ ಇರುವ ಏಕೈಕ ವಿಮಾನ ನಿಲ್ದಾಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಮಾನ ನಿಲ್ದಾಣ ನಿರ್ವಹಣೆ ಮಾಡುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್‌) ಸಂಸ್ಥೆಯು 2019ರಲ್ಲಿ ಅಗ್ನಿಶಾಮಕ ದಳಕ್ಕೆ ಈ 14 ಮಂದಿ ಮಹಿಳೆಯರನ್ನು ಆಯ್ಕೆ ಮಾಡಿ ತಂಡ ಕಟ್ಟಿದೆ. ಈ ಮಹಿಳಾ ತಂಡ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಕೊಲ್ಕತ್ತದ ಅಗ್ನಿಶಾಮಕ ತರಬೇತಿ ಕೇಂದ್ರದಲ್ಲಿ ನಾಲ್ಕು ತಿಂಗಳ ಕಠಿಣ ತರಬೇತಿ ಪೂರೈಸಿದ್ದಾರೆ.

ಕಠಿಣ ತರಬೇತಿ, ದೃಢನಿಶ್ಚಯ, ಸಾಧಿಸುವ ಛಲದೊಂದಿಗೆ ಈ ಮಹಿಳಾ ತಂಡ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಮಹಿಳಾ ತಂಡ ಮಹಿಳಾ ಸಮುದಾಯಕ್ಕೆ ಸ್ಫೂರ್ತಿ ನೀಡಿದೆ ಎಂದು ಬಿಐಎಎಲ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಥಾಮಸ್‌ ಹಾಫ್‌ ಆಂಡ್ರಸನ್‌ ಸಂಸತ ವ್ಯಕ್ತಪಡಿಸಿದರು.

ಚಿಕ್ಕಂದಿನಿಂದಲೂ ಸಾಧನೆ ಮಾಡಬೇಕೆಂಬ ಆಸೆ ಇತ್ತು. ಇದೀಗ ಅಗ್ನಿಶಾಮಕ ದಳಕ್ಕೆ ಸೇರ್ಪಡೆಯಾಗುವ ಮೂಲಕ ಕನಸು ಈಡೇರಿದೆ. ಪುರುಷರಿಗೆ ಸರಿಸಮಾನವಾಗಿ ಈ ಕ್ಷೇತ್ರದಲ್ಲಿಯೂ ಕೆಲಸ ಮಾಡಬಲ್ಲರು ಎಂಬುದನ್ನು ತೋರಿಸಿದ್ದೇವೆ. ಮಹಿಳೆಯರು ಹಿಂಜರಿಕೆ ಬಿಟ್ಟು ಧೈರ್ಯವಾಗಿ ಮುನ್ನುಗ್ಗಿದರೆ ಎಂತಹ ಕಠಿಣ ಸವಾಲುಗಳನ್ನು ಎದುರಿಸಬಹುದು ಎಂದು ಅಗ್ನಿಶಾಮಕ ತಂಡದ ಸದಸ್ಯೆ ಸುಮಾ ಹೇಳಿದರು.

ಎರಡು ನಿಮಿಷಕ್ಕೆ ಹಾಜರು!

ವಿಮಾನ ನಿಲ್ದಾಣದಲ್ಲಿ ಎರಡು ಅಗ್ನಿಶಾಮಕ ಠಾಣೆಗಳಿವೆ. ಮೂರು ಆ್ಯಂಬುಲೆನ್ಸ್‌ ಸೇರಿದಂತೆ 25 ಬೆಂಕಿ ನಂದಿಸುವ ವಾಹನಗಳಿವೆ. 265 ಪುರುಷ ಸಿಬ್ಬಂದಿ ಹಾಗೂ 14 ಮಂದಿ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಈ ಅಗ್ನಿಶಾಮಕ ದಳ ಕಾರ್ಯ ಪ್ರವೃತ್ತವಾಗಲಿದೆ. ಅವಘಡದ ಸಂದರ್ಭದಲ್ಲಿ ಎರಡರಿಂದ ಮೂರು ನಿಮಿಷದೊಳಗೆ ಈ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಬಿಐಎಎಲ್‌ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅಪಾಯಕಾರಿ ಕೆಲಸವೆಂದು ಕುಟುಂಬದವರು ಭಯಪಟ್ಟರು. ಬಳಿಕ ಅವರ ಮನವೊಲಿಸಿ ಕೆಲಸಕ್ಕೆ ಸೇರಿದೆ. ಇದೀಗ ಯಶಸ್ವಿಯಾಗಿ ತರಬೇತಿ ಮುಗಿಸಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ಕೆಲಸಕ್ಕೆ ಸೇರಿದ್ದಕ್ಕೆ ಹೆಮ್ಮೆ ಇದೆ ಎಂದು ಅಗ್ನಿಶಾಮಕ ತಂಡದ ಸದಸ್ಯೆ ಪ್ರಿಯದರ್ಶಿನಿ ಬಿರಾದಾರ್‌ ಹೇಳಿದ್ದಾರೆ.

ಏಷ್ಯಾದಲ್ಲಿಯೇ ಮಹಿಳಾ ಅಗ್ನಿಶಾಮಕ ತಂಡವಿರುವ ಏಕೈಕ ವಿಮಾನ ನಿಲ್ದಾಣ ನಮ್ಮದು. ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸಬೇಕು ಎನ್ನುವ ದೃಷ್ಟಿಯಲ್ಲಿ ಈ ತಂಡ ಕಟ್ಟಿದ್ದೇವೆ. ಈ ತಂಡ ಕಠಿಣ ತರಬೇತಿ ಪಡೆದು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂತಹ ತಂಡವನ್ನು ಹೊಂದಿರುವುದಕ್ಕೆ ಹೆಮ್ಮೆಯಿದೆ ಎಂದು ಬಿಐಎಎಲ್‌ ಉಪಾಧ್ಯಕ್ಷ ವೆಂಕಟರಮಣ ತಿಳಿಸಿದ್ದಾರೆ.