ಸುಡುವ ಬಿಸಿಲಿಗೆ ಮಲೆ ಮಹದೇಶ್ವರ ಬೆಟ್ಟದ ಕಾಡು ಒಣಗುತ್ತಿದೆ. ನಿಧಾನವಾಗಿ ಜಲಮೂಲಗಳು ಬತ್ತಿ ಹೋಗುತ್ತಿವೆ, ವನ್ಯಜೀವಿಗಳ ದಾಹ ನೀಗಿಸಲು ಅರಣ್ಯ ಇಲಾಖೆ ಟ್ಯಾಂಕರ್ ನೀರಿನ ಮೊರೆ ಹೋಗಿದೆ.

ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

Add Asianetnews Kannada as a Preferred SourcegooglePreferred

ಚಾಮರಾಜನಗರ (ಏ.06): ಸುಡುವ ಬಿಸಿಲಿಗೆ ಮಲೆ ಮಹದೇಶ್ವರ ಬೆಟ್ಟದ ಕಾಡು ಒಣಗುತ್ತಿದೆ. ನಿಧಾನವಾಗಿ ಜಲಮೂಲಗಳು ಬತ್ತಿ ಹೋಗುತ್ತಿವೆ, ವನ್ಯಜೀವಿಗಳ ದಾಹ ನೀಗಿಸಲು ಅರಣ್ಯ ಇಲಾಖೆ ಟ್ಯಾಂಕರ್ ನೀರಿನ ಮೊರೆ ಹೋಗಿದೆ. ಅಲ್ಲದೇ ವನ್ಯಪ್ರಾಣಿಗಳು ಕೂಡ ಈ ನೀರನ್ನು ಕುಡಿದು ದಾಹ ತೀರಿಸಿಕೊಳ್ತಿವೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ. ಹನೂರು ಮತ್ತು ಕೊಳ್ಳೇಗಾಲ ತಾಲೂಕುಗಳಲ್ಲಿ ಅವೃತವಾಗಿರುವ ಮಲೆ ಮಹದೇಶ್ವರ ವನ್ಯಜೀವಿ ಧಾಮ ಕಡಿಮೆ ಮಳೆ ಬೀಳುವ ಅರಣ್ಯ ಪ್ರದೇಶ.

ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಮರದ ಎಲೆಗಳು ಉದುರುತ್ತವೆ. ಹಾಗಾಗಿ, ಇದನ್ನು ಒಣ ಪರ್ಣಪಾತಿ ಕಾಡು ಎಂದು ಕರೆಯಲಾಗುತ್ತದೆ.ಪ್ರಸ್ತುತ ವನ್ಯಜೀವಿಧಾಮದಲ್ಲಿ ಸುಮಾರು 230 ಕೆರೆಗಳಿವೆ. ಆದರೆ, ಬೇಸಿಗೆ ಬೇಗೆ ಜಲಮೂಲಗಳನ್ನು ಬರಿದಾಗಿಸುತ್ತಿವೆ. ಹಲವು ಕೆರೆಗಳಲ್ಲಿ ನೀರಿದೆ. ಇನ್ನುಳಿದ ಕಡೆ ನೀರಿಲ್ಲ. ಬೇಸಿಗೆ ಎದುರಿಸಲು ಸಜ್ಜುಗೊಂಡಿರುವ ಅರಣ್ಯ ಇಲಾಖೆ ಕಾಡಿನೊಳಗೆ ಅಲಲ್ಲಿ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿದೆ. ಅಲ್ಪಸ್ವಲ್ಪ ನೀರು ತೊಟ್ಟಿಗಳಿಗೆ ಸೋಲಾರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

ಉಳಿದ ತೊಟ್ಟಿಗಳಿಗೆ ಟ್ಯಾಂಕಗರ್ಗಳಲ್ಲಿ ತುಂಬಿಕೊಂಡು ಬಂದು ನೀರು ತುಂಬಿಸಲಾಗುತ್ತಿದೆ ಎಂದು ಮಲೆ ಮಹದೇಶ್ವರ ವನ್ಯಧಾಮ ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ.ಇನ್ನೂ ಮಲೆ ಮಹದೇಶ್ವರ ಬೆಟ್ಟದ ಕಾಡಿನಲ್ಲಿ ನೀರಿನ ಸಮಸ್ಯೆ ಇದೆ. ಮೂರು ಕಡೆ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿಗೆ ಟ್ಯಾಂಕರ್ನಲ್ಲಿ ನೀರು ತುಂಬಲಾಗುತ್ತಿದೆ. ರಾಮಾಪುರದ ವಲಯದ ಕೌದಳ್ಳಿ ಅರಣ್ಯದ ಕೆರೆಯಲ್ಲಿ ನೀರಿದೆ.

ಸಂತೇಖಾನೆ ನರ್ಸರಿ ಬಳಿಯ ತೊಟ್ಟಿ ಮತ್ತು ವಡಕೆರೆಹಳ್ಳದ ಕ್ಯಾಂಪ್ ಬಳಿ ತೊಟ್ಟಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಉಡುತೊರೆ ಹಳ್ಳದ ನೀರು ಹರಿಯವ ಕಾಡು ಪ್ರದೇಶದಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಪಿ.ಜಿ.ಪಾಳ್ಯಕ್ಕೂ ಇಲ್ಲಿನ ನೀರು ಹರಿಯುವುದರಿಂದ ಸಮಸ್ಯೆ ಇಲ್ಲ. ಇಲ್ಲಿ ಎರಡು ಕಡೆ ನಿರ್ಮಾಣ ಮಾಡಿರುವ ತೊಟ್ಟಿಗಳಿಗೆ ಸೋಲಾರ್ ಬಳಸಿ ನೀರು ಸರಬರಾಜು ಮಾಡಲಾಗುತ್ತಿದೆ. ಜಲಾಶಯ ಇರುವುದರಿಂದ ಹೂಗ್ಯಂ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಂದಿಲ್ಲ. ಕೊಳ್ಳೇಗಾಲದ ಸುತ್ತಮುತ್ತಲಿನ ಕಾಡಿಗೆ ಕಾವೇರಿ ನದಿ ನೀರು ಆಸರೆಯಾಗಿದೆ.

ಮಾನವ-ವನ್ಯಜೀವಿ ಸಂಘರ್ಷ ಶುರು

ಉಳಿದಂತೆ ಸಿಎಸ್ಆರ್ ಫಂಡ್ನಿಂದ ಜಲಮೂಲಗಳಿಲ್ಲದ 3 ಕಡೆಗಳಲ್ಲಿ ತೊಟ್ಟಿ ನಿರ್ಮಾಣ ಮಾಡಲಾಗಿದೆ. ವನ್ಯಜೀವಿಗಳ ದಾಹ ತಣಿಸಲು ಟ್ಯಾಂಕರ್ನಿಂದ ನೀರು ಕೊಡಲಾಗುತ್ತಿದೆ. ಒಟ್ನಲ್ಲಿ ಬೇಸಿಗೆಯಲ್ಲಿ ಕಾಡಿನೊಳಗೆ ಆಹಾರ ಮತ್ತು ನೀರಿನ ಅಭಾವ ಉಂಟಾದರೆ ಮಾನವ-ವನ್ಯಜೀವಿ ಸಂಘರ್ಷ ಶುರುವಾಗುತ್ತದೆ. ಅರಣ್ಯದೊಳಗೆ ಆಹಾರ ಮತ್ತು ನೀರಿಗಾಗಿ ಅಲೆದು ನಾಡಿನತ್ತ ಧಾವಿಸುವ ವನ್ಯಜೀವಿಗಳು ಮಾನವರ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚು.ಆದ್ರಿಂದ ಅರಣ್ಯಾಧಿಕಾರಿಗಳು ಪ್ರಾಣಿಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸ್ತಿರೋದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.