ಹಾವೇರಿ(ಮೇ.27): ಕೊರೋನಾ ಎರಡನೇ ಅಲೆ ನಿಯಂತ್ರಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ತಜ್ಞರ ಸಮಿತಿಗಳು ಮುನ್ಸೂಚನೆ ನೀಡಿದ್ದರೂ ರಾಜಕೀಯ ಸ್ವಾರ್ಥಕ್ಕಾಗಿ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಇಂದು ಈ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಆರೋಪಿಸಿದ್ದಾರೆ. 

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ತಮ್ಮ ವೈಯಕ್ತಿಕ ರಾಜಕೀಯ ಹಿತಾಸಕ್ತಿಗಾಗಿ ಜನರ ಪ್ರಾಣವನ್ನು ತೆಗೆದುಕೊಂಡಿವೆ. ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಶೇ. 3ರಷ್ಟಿದ್ದು, ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಸರ್ಕಾರ ಜಿಲ್ಲೆಗೆ ಮೂಲ ಸೌಲಭ್ಯ, ವೈದ್ಯರು, ತಾಂತ್ರಿಕ ಸಿಬ್ಬಂದಿ ನೇಮಕ ಮಾಡಿಕೊಳ್ಳದ್ದರಿಂದ ಅಮಾಯಕರ ಜೀವ ಹೋಗುತ್ತಿದೆ. ಜಿಲ್ಲೆಗೆ ಬೇಕಾಗುವಷ್ಟು ಆಕ್ಸಿಜನ್‌ ಪೂರೈಸಿಲ್ಲ. ವೆಂಟಿಲೇಟರ್‌ ಇದ್ದರೂ ಬಳಕೆಗೆ ತಾಂತ್ರಿಕ ಸಿಬ್ಬಂದಿ ಇಲ್ಲ. ವಿವಿಧ ತಾಲೂಕು ಆಸ್ಪತ್ರೆಗಳಲ್ಲಿ 23 ವೆಂಟಿಲೇಟರ್‌ಗಳ ಫೈಕಿ ಕೇವಲ 1 ಮಾತ್ರ ಕಾರ್ಯನಿರ್ವಹಿಸುತ್ತಿದೆ. ಸಾಕಷ್ಟು ವೈದ್ಯಕೀಯ ಸೌಲಭ್ಯ ಕೊಟ್ಟಿದ್ದರೆ ಸಾವಿನ ಪ್ರಮಾಣ ತಗ್ಗಿಸಬಹುದಿತ್ತು ಎಂದರು.

"

ಇತ್ತೀಚೆಗೆ ಜಿಲ್ಲೆಗೆ ಬಂದಿದ್ದ ಆರೋಗ್ಯ ಸಚಿವ ಡಾ. ಸುಧಾಕರ್‌ ಅವರು ಒಂದು ವಾರದಲ್ಲಿ ವೈದ್ಯರನ್ನು ನೇಮಕ ಮಾಡುವುದಾಗಿ ಹೇಳಿ ಹೋಗಿದ್ದಾರೆ. ಇಲ್ಲಿಗೆ ಬರುವ ಮೊದಲು ಅವರಿಗೆ ಇಲ್ಲಿನ ವೈದ್ಯರ ಕೊರತೆಯ ಬಗ್ಗೆ ಮಾಹಿತಿ ಇರಲಿಲ್ಲವೇ? ಈಗಲಾದರೂ ವೈದ್ಯರು, ತಾಂತ್ರಿಕ ಸಿಬ್ಬಂದಿ ನೇಮಿಸಲು ಕ್ರಮ ಕೈಗೊಂಡಿದ್ದಾರಾ ಎಂದು ಪ್ರಶ್ನಿಸಿದ ಅವರು, ಆರೋಗ್ಯ ಸಚಿವರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಅರೋಪಿಸಿದರು.

2ನೇ ಅಲೆಯಲ್ಲಿಯೇ ಮಕ್ಕಳು, ಯುವಕರಿಗೆ ಹೆಚ್ಚು ಸೋಂಕು..!

ಲಸಿಕೆ ನೀಡುವಲ್ಲಿ ಸರ್ಕಾರ ಗೊಂದಲ ಮೂಡಿಸುತ್ತಿದೆ. ಜನವರಿಯಲ್ಲೇ ಲಸಿಕಾ ಅಭಿಯಾನ ಆರಂಭಗೊಂಡಾಗ ಪಿಎಂ, ಸಿಎಂ ಹಾಗೂ ಸಚಿವರೇ ಮೊದಲು ಚಿಕಿತ್ಸೆ ಪಡೆದು ಜನರಿಗೆ ಅರಿವು ಮೂಡಿಸಬಹುದಿತ್ತು. ಆಗ ಲಸಿಕೆ ಉತ್ಪಾದನೆಯಾದರೂ ಖರೀದಿ ಮಾಡದೇ ವಿದೇಶಕ್ಕೆ ರಫ್ತು ಮಾಡಲಾಯಿತು. ಈಗ ಲಸಿಕೆ ಕೊರತೆಯಾಗಿರುವ ಹಿನ್ನೆಲೆ ಎರಡನೇ ಡೋಸ್‌ ನೀಡುವ ದಿನಗಳನ್ನು ಹೆಚ್ಚಿಸಿ ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಕೂಡಲೇ ಲಸಿಕೆ ಗೊಂದಲ ನಿವಾರಿಸಿ 18 ವರ್ಷ ಮೇಲ್ಪಟ್ಟವರಿಗೆ ಯಾವಾಗ ಲಸಿಕೆ ನೀಡಲಾಗುತ್ತಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಬ್ಲ್ಯಾಕ್‌ ಫಂಗಸ್‌ ರೋಗಕ್ಕೆ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಪ್ರತ್ಯೇಕ ವಾರ್ಡ್‌ ತೆರೆದಿಲ್ಲ. ಔಷಧಗಳನ್ನು ಪೂರೈಸಿಲ್ಲ. ಹುಬ್ಬಳ್ಳಿಯ ಕಿಮ್ಸ್‌ಗೆ ಹೋದರೂ ಚಿಕಿತ್ಸೆ ಸಿಗುತ್ತಿಲ್ಲ. ಔಷಧಿ ಅಭಾವ ಇರುವುದು ಕೇಂದ್ರ, ರಾಜ್ಯ ಸಚಿವರಿಗೆ ಗೊತ್ತಿದ್ದರೂ ಸಕಾಲಕ್ಕೆ ತರಿಸಿಕೊಳ್ಳಲು ಪ್ರಯತ್ನ ಮಾಡದೇ ಕಣ್ಮುಚ್ಚಿ ಕುಳಿತಿದ್ದಾರೆ. ಜಿಲ್ಲೆಯಲ್ಲಿ ಆಕ್ಸಿಜನ್‌ ಬೆಡ್‌ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ಪ್ರಸ್ತುತ ಕೊರೋನಾ ಹೊರತುಪಡಿಸಿ ಬೇರೆ ರೋಗಿಗಳಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಇತ್ತೀಚೆಗೆ ಬ್ಯಾಡಗಿ ತಾಲೂಕಿನ ಕಳಕೊಂಡ ಗ್ರಾಮದ ವ್ಯಕ್ತಿಯೊಬ್ಬರಿಗೆ ಹಾವು ಕಡಿದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬಂದಾಗ ಬೆಡ್‌ ಸಿಗಲಿಲ್ಲ. ಹೀಗಾಗಿ ಸಾಮಾನ್ಯ ರೋಗಿಗಳಿಗೆ ಪ್ರತ್ಯೇಕ ಬೆಡ್‌ ವ್ಯವಸ್ಥೆ ಮಾಡಿ ಚಿಕಿತ್ಸೆ ಕೊಡಿಸಬೇಕು. ಮುಂಗಾರು ಹಂಗಾಮು ಆರಂಭವಾಗಿದ್ದು, ಸಕಾಲಕ್ಕೆ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಬೇಕು. ಆಶಾ ಕಾರ್ಯಕರ್ತೆಯರು, ವೈದ್ಯರು, ಅಂಗವಿಕಲರಿಗೆ ಪ್ರತಿ ತಿಂಗಳು ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಜಿಪಂ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಡಾ. ಸಂಜಯ ಡಾಂಗೆ ಇತರರು ಇದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona