ಅವಧೂತ ವಿನಯ್ ಗುರೂಜಿ ನಡೆ ಬಗ್ಗೆ ಬಹಿರಂಗ ಆಕ್ಷೇಪ
ಗೌರಿಗದ್ದೆಯ ವಿನಯ್ ಗುರೂಜಿ ನಡೆ ಬಗ್ಗೆ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಅವರ ಬೆಂಬಲಿಗರ ವಿರುದ್ಧವೂ ಅಸಮಾಧಾನ ವ್ಯಕ್ತವಾಗಿದೆ.
ಚಿಕ್ಕಮಗಳೂರು (ಆ.19): ಚಿಕ್ಕಮಗಳುರು ಜಿಲ್ಲೆ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ವಿರುದ್ಧ ವಿಧಾನಪರಿಷತ್ ಸದಸ್ಯ ರಘು ಆಚಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ವಿನಯ್ ಗುರೂಜಿ ನಡೆದುಕೊಂಡಿದ್ದರೆನ್ನಲಾದ ನಡವಳಿಕೆ ಬಗ್ಗೆ ಆಕ್ಷೇಪಿಸಿದ್ದಾರೆ.
ರಂಭಾಪುರಿ ಶ್ರೀ ಪಾದಪೂಜೆ ಮಾಡಿ ಕಾಲಜ್ಞಾನ ನುಡಿದ ವಿನಯ್ ಗುರೂಜಿ...
ಶಿವಮೊಗ್ಗದಲ್ಲಿ ಮದುವೆ ಕಾರ್ಯ ಒಂದರಲ್ಲಿ ಅವಧೂತ ವಿನಯ್ ಗುರೂಜಿ ಪಾಲ್ಗೊಂಡಿದ್ದರು. ಮಾಸ್ಕ್ ಹಾಕಿಕೊಳ್ಳದೇ ಎಲ್ಲರ ಜೊತೆಗೆ ಮಾತನಾಡಿದ್ದರು. ಅಲ್ಲದೇ ಗುರೂಜಿ ತಿಂದು ಬಿಟ್ಟ ಊಟವನ್ನು ಪ್ರಸಾದ ಎಂದು ಅವರ ಬೆಂಬಲಿಗರು ಎಲ್ಲರಿಗೂ ಹಂಚಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ರಘು ಆಚಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಿನಯ್ ಗುರೂಜಿಯಿಂದ ಮರಳು ರವಾನೆ
ಕೊರೋನಾ ಕಾಲದಲ್ಲಿ ಈ ರೀತಿಯಾಗಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ. ಇದೊಂದು ಅಕ್ಷಮ್ಯ ಎಂದು ದೂರಿದ್ದಲ್ಲದೇ ಗುರೂಜಿಗೆ ಬಹಿರಂಗವಾಗಿಫೇಸ್ ಬುಕ್‌ನಲ್ಲಿ ಪತ್ರ ಬರೆದು ಇಂತಹ ನಡವಳಿಕೆ ಕೆಐ ಬಿಡಬೇಕೆಂದು ಆಗ್ರಹಿಸಿದ್ದಾರೆ.
ನಿಮಗೊಂದು ಬಹಿರಂಗ ಬಿನ್ನಹ..
ಇಷ್ಟಕ್ಕೂ ಇಂತಹದೊಂದು ಬಹಿರಂಗ ಬಿನ್ನಹ ಬರೆಯಲು ಪ್ರಚೋದಿಸಿದ್ದು ಸೋಮವಾರ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿಮ್ಮ ಹಾಗೂ ನಿಮ್ಮ ಶಿಷ್ಯರ ನಡವಳಿಕೆ. ಭೂತ ಭವಿಷ್ಯ ಬಲ್ಲ ನಿಮಗೆ ಗೊತ್ತಿರುವಂತೆಯೇ ಇಡೀ ಜಗತ್ತನ್ನು ಇಂದು ಕೋರೋನಾ ಎಂಬ ಮಹಾಮಾರಿ ಬೆಂಬಿಡದೆ ಕಾಡುತ್ತಿದೆ.
ಇಂತಹ ಮಹಾಮಾರಿಯಿಂದ ವೈಯಕ್ತಿಕವಾಗಿ ನಮ್ಮನ್ನು ಹಾಗೂ ನಮ್ಮ ಸುತ್ತಮುತ್ತಲೂ ಇರುವವರನ್ನು ರಕ್ಷಿಸಲು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ನಮ್ಮ ದೇಶದ ಸರ್ಕಾರಗಳು ಕೆಲವೊಂದು ಸಾರ್ವಜನಿಕ ನಡವಳಿಕೆಯನ್ನು ನಿಯಮದಂತೆ ವಿಧಿಸಿವೆ.
ಅದರಲ್ಲಿ ಮುಖ್ಯವಾದವು ನಮ್ಮ ಉಸಿರು ಅನ್ಯರಿಗೆ ತಗುಲದಂತೆ ಮಾಸ್ಕ್ ಧರಿಸುವುದು ಹಾಗೂ ನಮ್ಮ ಉಗುಳು ಅನ್ಯರಿಗೆ ತಾಗದಂತೆ ವರ್ತಿಸುವುದು.
ಶಿವಮೊಗ್ಗದ ಕಾರ್ಯಕ್ರಮದಲ್ಲಿ ಮಹಾಮಹೀಮರಾದ ತಮ್ಮಿಂದ ಹಾಗೂ ತಮ್ಮ ಶಿಷ್ಯರಿಂದ ಈ ಎರಡು ನಿಯಮಗಳ ಬಹಿರಂಗ ಉಲ್ಲಂಘನೆಗೊಂಡು ನಿಜಕ್ಕೂ ಅಚ್ಚರಿ ಹಾಗೂ ಗಾಬರಿ ಮೂಡಿತು. ನೀವು ಮಾಸ್ಕ್ ತೊಡದೆ ಎಲ್ಲರೊಂದಿಗೆ ಆತ್ಮೀಯವಾಗಿ ವರ್ತಿಸುತ್ತಿದ್ದಿರಿ. ಆಶೀರ್ವಾದ ಮಾಡುತ್ತಿದ್ದಿರಿ. ಇನ್ನು ಮದುವೆಯ ಊಟ ಮಾಡಿದ ನಂತರ ತಾವು ತಿಂದುಂಡು ಬಿಟ್ಟ ಆಹಾರವನ್ನು ನಿಮ್ಮ ಶಿಷ್ಯರೂ ಎಲ್ಲರಿಗೂ ಪ್ರಸಾದ ಎಂದು ವಿತರಿಸಿ ಬಲವಂತವಾಗಿ ಎಂಜಲು ತಿನ್ನುವಂತೆ ಮಾಡಿದರು.
ಗೌರವ, ನಂಬಿಕೆ, ಭಕ್ತಿ ಇವೆಲ್ಲ ಇರಲಿ, ಇರಬೇಕು. ಒಪ್ಪುತ್ತೇನೆ. ಆದರೆ ಕರೋನಾದಂತಹ ಮಾರಕ ಸನ್ನಿವೇಶದಲ್ಲಿ ಇಂತಹದೊಂದು ನಡವಳಿಕೆಯನ್ನು ನಿಮ್ಮ ಹಾಗೂ ನಿಮ್ಮ ಶಿಷ್ಯರಿಂದ ಕಂಡು ನನಗೆ ನಂಬಿಕೆಯೇ ಬರಲಿಲ್ಲ. ನಿಮ್ಮ ಶಿಷ್ಯರ ನಡವಳಿಕೆ ನಿಮ್ಮ ಗಮನಕ್ಕೆ ಬರದೆ ಈ ಅಚಾತುರ್ಯ ನಡೆಯುತ್ತಿರಬಹುದು ಎಂದು ಭಾವಿಸಿ ಈ ಬಗ್ಗೆ ವಿಚಾರಿಸಿದೆ. ಆಗ ಇದು ನಿಮ್ಮ ಗಮನಕ್ಕೆ ಬಂದೇ ನಡೆಯುತ್ತಿದೆ ಎಂದು ಕೇಳ್ಪಟ್ಟೆ. ಇದು ನಿಜಕ್ಕೂ ಆಘಾತ ತರುವಂತಹ ವಿಚಾರ.
ಕರೋನಾ ಕಾಲದಲ್ಲಿ ನಿಮ್ಮಿಂದ ಇಂತಹ ನಡವಳಿಕೆಯನ್ನು ನಾನು ನಿರೀಕ್ಷಿಸಿರಲಿಲ್ಲ. ನಿಮ್ಮ ಬಗ್ಗೆ ಅಪಾರ ಗೌರವ ಹೊಂದಿದ್ದರೂ ಜನರ ಜೀವಕ್ಕೆ ಅಪಾಯ ತರುವಂತಹ ಆ ಬೇಜವಾಬ್ದಾರಿ ನಡವಳಿಕೆಯನ್ನು ಖಂಡಿಸದೆ ನನಗೆ ಬೇರೆ ವಿಧಿಯಿಲ್ಲ.
ದಯಮಾಡಿ ಈ ವರ್ತನೆಯನ್ನು ಬದಲಾಯಿಸಿಕೊಳ್ಳಿ. ತನ್ಮೂಲಕ ನೀವು ಕೊಟ್ಟಿದ್ದನ್ನು ಪ್ರಸಾದ ಎಂದು ಭಾವಿಸುವ ಜನರ ಜೀವದೊಂದಿಗೆ ಚೆಲ್ಲಾಟ ಆಡುವುದನ್ನು ಇನ್ನಾದರೂ ನಿಲ್ಲಿಸುವಂತೆ ಕೋರುತ್ತೇನೆ.
ಇಂತಿ ತಮ್ಮ ವಿಶ್ವಾಸಿ
ರಘು ಆಚಾರ್,
ಸದಸ್ಯರು,
ಕರ್ನಾಟಕ ವಿಧಾನ ಪರಿಷತ್ತು
https://www.facebook.com/100996105008448/posts/135567878217937/?sfnsn=wiwspmo&extid=WFAxwKNBNAoWxFmQ