ರಾಮನಗರ (ಡಿ.02):  ಪಂಚಾಯ್ತಿ ಫೈಟ್‌ಗೆ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಮುಂದಾಗಿರುವ ಬಿಜೆಪಿ ಪಕ್ಷ ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಗ್ರಾಮಸ್ವರಾಜ್‌ ಸಮಾವೇಶ ಜಿಲ್ಲೆಯಲ್ಲಿ ನಡೆಯಿತು.  

ಸಮಾವೇಶದಲ್ಲಿ ಮಾತನಾಡಿದ ಎಂಎಲ್ಸಿ ಸದಸ್ಯ ಸಿ.ಪಿ.ಯೋಗೇಶ್ವರ್‌,ಈ ಹಿಂದೆ ಜಿಲ್ಲೆಯ ಜನತೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಎಂಬ ವಾತಾವರಣ ನಿರ್ಮಾಣಗೊಂಡಿತ್ತು. ಆದರೆ, ಇದೀಗ ಜನತೆ ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ಜಿಲ್ಲೆಯಲ್ಲಿ ಬದಲಾವಣೆಯ ಪರ್ವ ಆರಂಭಗೊಂಡಿದ್ದು, ಬಿಜೆಪಿಯನ್ನು ಬೆಂಬಲಿಸಲು ಜನತೆ ಮುಂದಾಗಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಹೆಚ್ಚು ಗ್ರಾಪಂಗಳಲ್ಲಿ ಬಿಜೆಪಿ ಗೆಲ್ಲಲಿದ್ದು, ಹಾಗೆಯೇ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಯಲ್ಲೂ ಪಕ್ಷ ಅ​ಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವನಾಥ್‌ಗೆ ಸಚಿವ ಸ್ಥಾನ ವಿಚಾರ : ಸಾ.ರಾ ಮಹೇಶ್ ಹೊಸ ಬಾಂಬ್ ...

ಅವಕಾಶ ಬಂದಾಗ ಒಂದಾಗುವ ಮೂಲಕ ಜೋಡೆತ್ತುಗಳು ಎಂದು ಬಿಂಬಿಸಿಕೊಳ್ಳುತ್ತಿದ್ದವರು, ಇದೀಗ ಕಿತ್ತಾಡುತ್ತಿದ್ದಾರೆ. ಜನತೆ ಇನ್ನಾದರೂ ಇವರ ಹುನ್ನಾರಗಳನ್ನು ಅರ್ಥ ಮಾಡಿಕೊಂಡು ಈ ಎರಡೂ ಪಕ್ಷಗಳಿಗೆ ಪರ್ಯಾಯ ಶಕ್ತಿಯಾಗಿ ಬಿಜೆಪಿಯನ್ನು ಅ​ಧಿಕಾರಕ್ಕೆ ತರಲು ಪ್ರಯತ್ನಿಸ ಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

ದೊಡ್ಡ ನಾಯಕರು ಗೇಟು ಕಾಯುತ್ತಿದ್ದರು:

ಸಮಾವೇಶದಲ್ಲಿ ಮಾತನಾಡಿದ ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ, ಕುಮಾರಸ್ವಾಮಿ ಅವರು ಅ​ಧಿಕಾರದಲ್ಲಿದ್ದಾಗ ತಾಲೂಕಿನ ದೊಡ್ಡದೊಡ್ಡ ನಾಯಕರು ಅವರ ಮನೆಯ ಗೇಟಿನ ಒಳಗೆ ಹೋಗಲಾಗದೆ ಗೇಟು ಕಾಯುತ್ತಾ ನಿಂತಿದ್ದರು. ಅ​ಧಿಕಾರ ಇದ್ದಾಗ ಏನೂ ಮಾಡದವರು, ಇದೀಗ ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಬಂದಿದ್ದಾರೆ. ಇವರಿಗೆ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.