ವಿಜಯಪುರದ ಮಹಿಳಾ ವಿವಿಗೆ ದಕ್ಷಿಣ ಕರ್ನಾಟಕದ ಮಹಿಳಾ ಕಾಲೇಜ್‌ ಸೇರಿಸಿ: ಹೊರಟ್ಟಿ

ದಕ್ಷಿಣ ಕರ್ನಾಟಕದ ಮಹಿಳಾ ಕಾಲೇಜ್‌ಗಳನ್ನು ಮಹಿಳಾ ವಿಶ್ವ ವಿದ್ಯಾಲಯದ ವ್ಯಾಪ್ತಿಗೆ ಸೇರಿಸಬೇಕು| ದಕ್ಷಿಣ ಕರ್ನಾಟಕದ ಕೆಲ ಮಹಿಳಾ ಕಾಲೇಜ್‌ಗಳು ಇದರ ವ್ಯಾಪ್ತಿಗೆ ಸೇರಿಲ್ಲ ಎಂದು ಅಸಮಾಧಾನ| ಸರ್ಕಾರಕ್ಕೆ ಪತ್ರ ಬರೆದ ವಿಪ ಸದಸ್ಯ ಬಸವರಾಜ ಹೊರಟ್ಟಿ|

MLC Basavaraj Horatti Talks Over Karnataka State Akkamahadevi Womens University

ಹುಬ್ಬಳ್ಳಿ(ಮೇ.31): ವಿಜಯಪುರದಲ್ಲಿನ ಮಹಿಳಾ ವಿಶ್ವ ವಿದ್ಯಾಲಯದ ವ್ಯಾಪ್ತಿಯನ್ನು ಮೊಟಕುಗೊಳಿಸುವುದನ್ನು ಕೈಬಿಟ್ಟು, ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಬೇಕು ಎಂದು ವಿಧಾನ ಪರಿಷತ್‌ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ದಕ್ಷಿಣ ಕರ್ನಾಟಕದ ಮಹಿಳಾ ಕಾಲೇಜ್‌ಗಳನ್ನು ಮಹಿಳಾ ವಿಶ್ವ ವಿದ್ಯಾಲಯದ ವ್ಯಾಪ್ತಿಗೆ ಸೇರಿಸಬೇಕು. ಆದರೆ ದಕ್ಷಿಣ ಕರ್ನಾಟಕದ ಕೆಲ ಮಹಿಳಾ ಕಾಲೇಜ್‌ಗಳು ಇದರ ವ್ಯಾಪ್ತಿಗೆ ಸೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರೋನಾ ಕಾಟ: ಸಾಲ ವಸೂಲಿಗೆ ಗ್ರಾಹಕರ ಮೇಲೆ ಒತ್ತಡ ಹಾಕಿದರೆ ಕ್ರಮ

ರಾಜ್ಯದ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ, ಬೆಂಗಳೂರಿನ ಸಂಸ್ಕೃತ , ಶಿಗ್ಗಾವಿಯ ಜನಪದ, ಬೀದರನ ಪಶುಸಂಗೋಪನೆ ಹಾಗೂ ಹಂಪಿಯ ಕನ್ನಡ ಹಾಗೂ ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾಲಯಗಳ ಮಾದರಿಯಲ್ಲಿ ಮಹಿಳಾ ವಿಶ್ವವಿದ್ಯಾಲಯವನ್ನು ವಿಜಯಪುರದಲ್ಲಿ 2013ರಲ್ಲಿ ಪ್ರಾರಂಭಿಸಲಾಗಿದೆ. 

ಪ್ರಾರಂಭದಲ್ಲಿ ಮುಂಬೈ ಹಾಗೂ ಹೈದರಾಬಾದ್‌ ಕರ್ನಾಟಕದ ವ್ಯಾಪ್ತಿಯನ್ನು ಹೊಂದಿತ್ತು . 2017ರಲ್ಲಿ ವಿಶ್ವವಿದ್ಯಾಲಯವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿ ಆದೇಶಿಸಲಾಗಿದೆ. ಈ ವಿಶ್ವವಿದ್ಯಾಲಯವು ರಾಜ್ಯದಲ್ಲಿ ವಿಭಿನ್ನವಾಗಿ ಮಹಿಳಾ ದೃಷ್ಟಿಕೋನವನ್ನು ಪ್ರಧಾನವಾಗಿ ಇಟ್ಟುಕೊಂಡು ಸ್ತ್ರೀಪರ ಪಠ್ಯಕ್ರಮ ಮತ್ತು ಮಹಿಳಾ ಸಶಸ್ತೀಕರಣ, ಲಿಂಗ ತಾರತಮ್ಯ, ಅಸಮಾನತೆ ವಿರುದ್ಧ ಜಾಗೃತಿ ಮಾಡಿಸುವಲ್ಲಿ ಮಹತ್ತರ ಪಾತ್ರವನ್ನು ಕೈಗೊಂಡಿದೆ. ವಿಶ್ವವಿದ್ಯಾಲಯವು ಸಿಂಧನೂರು, ಕಾಡುತಡಿ, ಮಂಡ್ಯದಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಆರಂಭಿಸಿದೆ. ದಕ್ಷಿಣದ ಇನ್ನೂ ಅನೇಕ ಮಹಿಳಾ ಕಾಲೇಜುಗಳು ಇದರ ವ್ಯಾಪ್ತಿಗೆ ಬಂದಿಲ್ಲ. ಇಂತಹವುಗಳನ್ನು ಇದರ ವ್ಯಾಪ್ತಿಗೆ ತಂದು ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವನ್ನು ಬಲಪಡಿಸಬೇಕು. ಇಲ್ಲಿನ ಆಡಳಿತಾತ್ಮಕ ತೊಂದರೆಗಳನ್ನು ಸರಿಪಡಿಸಿ ಪುನರುಜ್ಜೀವನಗೊಳಿಸಬೇಕೇ ಹೊರತು ಇದರ ವ್ಯಾಪ್ತಿಯನ್ನು ಮೊಟಕುಗೊಳಿಸುವ ವಿಚಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿನ ಇಂತಹ ಸಂಸ್ಥೆಗಳ ಅಧಿಕಾರವನ್ನು ಮೊಟಕುಗೊಳಿಸುವುದರಿಂದ ಈ ಭಾಗಕ್ಕೆ ಅನ್ಯಾಯವೆಸಗಿದಂತಾಗುತ್ತದೆ. ಈ ಮಲತಾಯಿ ಧೋರಣೆಯನ್ನು ಕೈಬಿಡಬೇಕು. ಆದ್ದರಿಂದ ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ಮೊಟಕುಗೊಳಿಸುವ ವಿಚಾರವನ್ನು ಕೂಡಲೇ ಕೈಬಿಟ್ಟು ಅದನ್ನು ತೀವ್ರಗತಿಯಲ್ಲಿ ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
 

Latest Videos
Follow Us:
Download App:
  • android
  • ios