ಹುಬ್ಬಳ್ಳಿ(ಜ.26): ಸಾಕಷ್ಟು ಸೋಲುಗಳು, ಹೊಡೆತ ತಿಂದಿರುವ ಜೆಡಿಎಸ್‌, ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಹೊಸ ಹುರುಪಿನೊಂದಿಗೆ ತಳಮಟ್ಟದಿಂದ ಪಕ್ಷ ಸಂಘಟಿಸಿಕೊಳ್ಳಲಿದೆ ಎಂದು ಜೆಡಿಎಸ್‌ ಹಿರಿಯ ಮುಖಂಡ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.

ಸೋಮವಾರ ಕೋರ್‌ ಕಮೀಟಿ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವರಿಷ್ಠರು ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲು ತೀರ್ಮಾನಿಸಿದ್ದಾರೆ. ಮುಂದಿನ 15 ದಿನಗಳ ಒಳಗೆ ಬೆಳಗಾವಿ ವಿಭಾಗ ಮಟ್ಟದ 7 ಜಿಲ್ಲೆಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಈಗಾಗಲೆ ಬೆಳಗಾವಿ ವಿಭಾಗಕ್ಕೆ 17 ಮಂದಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಶೀಘ್ರ ಪದಾಧಿಕಾರಿಗಳ ನೇಮಕ ನಡೆಯಲಿದೆ. ಶೇ. 45ರಷ್ಟು ಯುವಕರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದರು.

ದೇವೇಗೌಡರ ಬಾಯಿ ಮುಚ್ಚಿಸಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ!

ಪಕ್ಷ ಬಿಟ್ಟು ಹೋದವರನ್ನು ಮರಳಿ ಸೇರುವಂತೆ ಮನವೊಲಿಸುವ ಕಾರ್ಯವಾಗಲಿದೆ. ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳಲಿದ್ದೇವೆ. ಜ. 31ರಂದು ಎಚ್‌.ಡಿ. ಕುಮಾರಸ್ವಾಮಿ ಅವರು ಬಾಗಲಕೋಟೆ ಮತ್ತು ವಿಜಯಪುರ ಪ್ರವಾಸ ಕೈಗೊಂಡು, ಅಲ್ಲಿಯ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಲಿದ್ದಾರೆ. ಚುನಾವಣೆ ಟಿಕೆಟ್‌ ನೀಡುವುದು ಸೇರಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ತಾಲೂಕು, ಜಿಲ್ಲಾ ಮಟ್ಟದ ಸಮಿತಿಯಲ್ಲಿ ಚರ್ಚಿಸುತ್ತೇವೆ. ಕೆಲವು ಪಕ್ಷದ ಮುಖಂಡರು ಸಹ ಜೆಡಿಎಸ್‌ಗೆ ಬರಲು ಮುಂದಾಗಿದ್ದಾರೆ. ಸಂದರ್ಭ ಬಂದಾಗ ಅದನ್ನು ತಿಳಿಸುತ್ತೇವೆ ಎಂದರು.

ಹಿಂದೆ ಸ್ವತಃ ಯಡಿಯೂರಪ್ಪ, ಸಿದ್ದರಾಮಯ್ಯ ಬಂದು ತಮ್ಮ ಪಕ್ಷಗಳಿಗೆ ಸೇರುವಂತೆ ಕೇಳಿದರೂ ಹೋಗಿಲ್ಲ. ಮುಂದೆಯೂ ಹೋಗಲ್ಲ. ತೃಪ್ತಿಯಿರುವ ಕಾರಣಕ್ಕೆ ಜೆಡಿಎಸ್‌ನಲ್ಲಿ ಇದ್ದೇನೆ ಎಂದರು. ಅಧಿಕಾರ ಇದ್ದಾಗ ಉತ್ತರ ಕರ್ನಾಟಕ ಭಾಗಕ್ಕೆ ಜೆಡಿಎಸ್‌ ತಾರತಮ್ಯ ಮಾಡಿದೆ ಎಂಬುದು ತಪ್ಪು ಕಲ್ಪನೆ ಎಂದರು.