ಹುಬ್ಬಳ್ಳಿ(ಫೆ.10): ಭಾನುವಾರ ಬಿಎಸ್‌ವೈ ಮರಿಮೊಮ್ಮಗಳ ನಾಮಕರಣದಲ್ಲಿ ಸೇರಿದ್ದ ಸಚಿವ ಜಗದೀಶ ಶೆಟ್ಟರ್‌ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾಧ್ಯಮದೆದುರು ಮುಖಾಮುಖಿಯಾದ ವೇಳೆ ಜುಗಲ್‌ಬಂದಿ ರಾಜಕೀಯ ಹೇಳಿಕೆ ನೀಡುತ್ತ ಸ್ವಾರಸ್ಯಕರ ವಾತಾವರಣಕ್ಕೆ ಕಾರಣರಾದರು.

ಮಿರಾಕಲ್‌ ಆದರೆ ಮಾತ್ರ ಎಚ್‌ಡಿಕೆ ಕಿಂಗ್‌ ಮೇಕರ್‌ ಆಗುತ್ತಾರೆ ಎಂದು ಹೇಳಿಕೆ ನೀಡಿದ್ದೆ ವಿನಃ ಈಗಲೇ ಅಂತಹ ಪರಿಸ್ಥಿತಿ ಇದೆ ಎಂದು ಹೇಳಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ತಮ್ಮ ಶನಿವಾರದ ಹೇಳಿಕೆಗೆ ಸ್ಪಷ್ಟನೆ ನೀಡಿದರೆ, ಅಲ್ಲಿಯೆ ಪಕ್ಕದಲ್ಲಿದ್ದ ಸಚಿವ ಜಗದೀಶ ಶೆಟ್ಟರ್‌ ಮುಗುಳ್ನಗುತ್ತ ಮಾಧ್ಯಮದವರು ಹೇಳಿದ ಅರ್ಧಸತ್ಯಕ್ಕೆ ಪ್ರತಿಕ್ರಿಯೆ ನೀಡುವಾಗ ಹೊರಟ್ಟಿಗೆ ತಲೆಕೆಟ್ಟಿದೆ ಎಂದು ಹೇಳಿದ್ದೆ ವಿನಃ ಪೂರ್ಣ ವಿಷಯ ತಿಳಿದಿಲ್ಲ ಎಂದರು.

ಅತ್ತ ಬಿಜೆಪಿಯಲ್ಲಿ ಅಸಮಾಧಾನ: ಇತ್ತ ಬಾಂಬ್ ಸಿಡಿಸಿದ ಹೊರಟ್ಟಿ

ಹೊರಟ್ಟಿಯವರು ಮಾತನಾಡುತ್ತ, ಒಂದು ವೇಳೆ ಮಿರಾಕಲ್‌ ಏನಾದರೂ ನಡೆದು, ಅಂದರೆ ಮೂಲ ಬಿಜೆಪಿಗರು ಸಿಟ್ಟಾಗಿ ಗೊಂದಲದ ಪರಿಸ್ಥಿತಿ ನಿರ್ಮಿಸಿದರೆ, ಆ ವೇಳೆ ಎಚ್‌ಡಿಕೆ ಕಿಂಗ್‌ ಮೇಕರ್‌ ಆಗಬಹುದು ಎಂದಿದ್ದೇನೆ. ಆದರೆ, ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ. ಬಿಜೆಪಿ ಹೈಕಮಾಂಡ್‌ ಬಹಳ ಗಟ್ಟಿಯಾಗಿದೆ. ಗೊಂದಲದ ವಾತಾವರಣ ಸೃಷ್ಟಿಯಾಗಲು ಬಿಡುವ ಸಾಧ್ಯತೆ ಕಡಿಮೆಯಿದೆ ಎಂದು ಸ್ಪಷ್ಟನೆ ನೀಡಿದರು. ಅಲ್ಲದೆ, ನನ್ನ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್‌ ಹೊರಟ್ಟಿಗೆ ತಲೆಕೆಟ್ಟಿದೆ ಎಂದು ಹೇಳಿದ್ದರು. ಹೀಗಾಗಿ ನನಗೆ ತಲೆ ಸರಿಯಿದೆ ಎಂದು ಹೇಳಿ ಹೋಗಲು ಬಂದಿದ್ದೇನೆ ಎಂದು ನಗೆ ಬೀರಿದರು.

ಇದೇ ವೇಳೆ ಪಕ್ಕದಲ್ಲಿದ್ದ ಜಗದೀಶ ಶೆಟ್ಟರ್‌ ಮಾತನಾಡಿ, ಮಾಧ್ಯಮದವರು ಸೆನ್ಸಾರ್‌ ಮಾಡಿದ ಹೇಳಿಕೆಯನ್ನು ನನ್ನ ಎದುರು ಇಟ್ಟಿದ್ದರು. ಈ ಕಾರಣಕ್ಕೆ ಹಾಗೆ ಹೇಳಿದ್ದೆ ವಿನಃ ಬೇರೆ ಅರ್ಥದಲ್ಲಿ ಅಲ್ಲ ಎಂದು ಹಾಸ್ಯ ಮಾಡಿದರು.

ಬಹಿರಂಗ ಸ್ವಾಗತ!

ಮುಂದುವರಿದು ಮಾತನಾಡಿದ ಹೊರಟ್ಟಿ, ಜೆಡಿಎಸ್‌ನಲ್ಲಿ ನೋವಿದೆ ಎಂದು ಹೇಳಿದ್ದೇನೆಯೇ ವಿನಃ ಪಕ್ಷವನ್ನು ಬಿಡುತ್ತೇನೆ ಎಂದಿಲ್ಲ. ಅಂತ ಯೋಚನೆಯೂ ನನಗಿಲ್ಲ. ಅಷ್ಟಕ್ಕೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಾಗಲಿ, ಸಚಿವ ಶೆಟ್ಟರ್‌ ಆಗಲಿ ನನ್ನನ್ನು ಬಿಜೆಪಿಗೆ ಬರುವಂತೆ ಆಹ್ವಾನವನ್ನೇ ನೀಡಿಲ್ಲ ಎಂದರು. ಈ ವೇಳೆ ಮಾತನಾಡಿದ ಜಗದೀಶ ಶೆಟ್ಟರ್‌, ಹೊರಟ್ಟಿಯವರು ಏಳು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿ ದಾಖಲೆ ಬರೆದವರು. ಒಂದು ವೇಳೆ ಅವರು ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ ಎಂದರು.

ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ಹೊರಟ್ಟಿ, ನಮ್ಮದು ಪಕ್ಷಾತೀತ ಸಂಬಂಧ. ಯಡಿಯೂರಪ್ಪ, ಸಿದ್ದರಾಮಯ್ಯ, ಶೆಟ್ಟರ್‌ ನನಗೆ ಪಕ್ಷಾತೀತವಾಗಿ ಆತ್ಮೀಯರು. ಈಗ ಶೆಟ್ಟರ್‌ ಸರಿಯಾದ ಸ್ಥಾನದಲ್ಲಿದ್ದಾರೆ. ನಮ್ಮಂಥವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅಭದ್ರರಾಗುವುದು ಬೇಡ. ಅವರ ಪ್ರೀತಿ-ವಿಶ್ವಾಸಕ್ಕೆ ಧನ್ಯವಾದಗಳು. ನಾನು ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ಮುಂದಿನ ಚುನಾವಣೆಯಿಂದ ದೂರ ಉಳಿಯಲು ಚಿಂತನೆ ನಡೆಸಿದ್ದೇನೆ. ಯಡಿಯೂರಪ್ಪ, ಸಿದ್ದರಾಮಯ್ಯ ನನಗೆ ಜೆಡಿಎಸ್‌ ಬಿಟ್ಟು ಬರಲು ಆಹ್ವಾನಿಸಿದ್ದರು. ಆದರೆ, ನನಗೆ ರಾಜಕೀಯದಲ್ಲಿ ಹೆಚ್ಚಿನ ಅಧಿಕಾರದ ಆಸೆ ಉಳಿದಿಲ್ಲ. ಅಲ್ಲದೆ ಮಗನನ್ನು ರಾಜಕೀಯದಲ್ಲಿ ಬೆಳೆಸುವಷ್ಟೆಲ್ಲ ದೊಡ್ಡವನಾಗಿಲ್ಲ ಎಂದರು.