Asianet Suvarna News Asianet Suvarna News

ಕೊರೋನಾ ಕಾಲದಲ್ಲಿ ಚುನಾವಣೆ ಬೇಕಿತ್ತಾ: ಬಸವರಾಜ ಹೊರಟ್ಟಿ ಆಕ್ರೋಶ

ಜನರ ಆರೋಗ್ಯಕ್ಕೆ ಗಮನ ನೀಡದೇ ಚುನಾವಣೆ ನಡೆಸೋದು ಖಂಡನೀಯ| ಕೊರೋನಾ ವಿಪರೀತವಾಗಿ ಹರಡುತ್ತಿದ್ದು, ಚುನಾವಣಾ ಆಯೋಗ ಚುನಾವಣೆ ಮುಂದಕ್ಕೆ ಹಾಕಬಹುದಾಗಿತ್ತು| ಜನಸಾಮಾನ್ಯರ ಆರೋಗ್ಯದ ಕುರಿತು ಗಮನ ಕೊಡದೆ ಚುನಾವಣೆ ನಡೆಸಲು ಮುಂದಾಗಿರುವುದು ಖಂಡನೀಯ| 
 

MLC Basavaraj Horatti Outraged of Election During Corona Pandemic grg
Author
Bengaluru, First Published Oct 13, 2020, 8:59 AM IST

ಬೆಂಗಳೂರು(ಅ.13): ಕೋವಿಡ್‌-19 ಸಂದರ್ಭದಲ್ಲಿ ಚುನಾವಣಾ ಆಯೋಗ ಚುನಾವಣೆ ನಡೆಸುತ್ತಿರುವುದು ತಪ್ಪು. ಚುನಾವಣೆ ನಡೆಸದೇ ಹೋಗಿದ್ದರೆ ಏನು ಜಗತ್ತು ಮುಳುಗಿ ಹೋಗುತ್ತಿತ್ತಾ ಎಂದು ವಿಧಾನ ಪರಿಷತ್ತು ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ವಿಪರೀತವಾಗಿ ಹರಡುತ್ತಿದ್ದು, ಚುನಾವಣಾ ಆಯೋಗ ಚುನಾವಣೆ ಮುಂದಕ್ಕೆ ಹಾಕಬಹುದಾಗಿತ್ತು. ಆದರೆ ಜನಸಾಮಾನ್ಯರ ಆರೋಗ್ಯದ ಕುರಿತು ಗಮನ ಕೊಡದೆ ಚುನಾವಣೆ ನಡೆಸಲು ಮುಂದಾಗಿರುವುದು ಖಂಡನೀಯ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಕೋಟಿ ಉದ್ಯೋಗ ಸೃಷ್ಟಿಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದರು. ಆದರೆ ಎರಡು ಜನಕ್ಕೂ ಉದ್ಯೋಗ ಕೊಡಲಿಲ್ಲ. ರಾಜ್ಯ ಸರ್ಕಾರದ ವರ್ಗಾವಣೆ ನೀತಿಯಲ್ಲಿ ಭಾರೀ ದೊಡ್ಡ ಭ್ರಷ್ಟಾಚಾರ ನಡೆದಿದೆ. ಹಾಗೆಯೇ ಶಿಕ್ಷಕರಿಗೆ ಕಾಂಗ್ರೆಸ್‌ ನಯಾ ಪೈಸೆ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ ಶಿಕ್ಷಕರಿಗೆ ಯಾವ ಪ್ರಯೋಜನವೂ ಆಗಿಲ್ಲ. ಬಿಜೆಪಿ ಸಹ ಅನುಕೂಲ ಮಾಡಿಕೊಟ್ಟಿಲ್ಲ. ಇದೆಲ್ಲ ಗಮನದಲ್ಲಿಟ್ಟುಕೊಂಡು ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ಕೊಡಿ ಎಂದು ಮನವಿ ಮಾಡಿದರು.

ಶಿಕ್ಷಕರನ್ನು ಸಂಭಾಳಿಸೋದು ಕಷ್ಟ: ಹೊರಟ್ಟಿ

ವಿಧಾನಪರಿಷತ್ತು ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಅ.28ರಂದು ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆ ನಡೆಯಲಿದ್ದು ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಕೊಡುಗೆ ಬಹಳಷ್ಟಿದೆ. 12 ಸಾವಿರ ಗುತ್ತಿಗೆ ಆಧಾರದ ಶಿಕ್ಷಕರನ್ನು ಖಾಯಂ ಮಾಡಿದ್ದ ಜೆಡಿಎಸ್‌ ಸರ್ಕಾರ. ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಮೊರಾರ್ಜಿ ವಸತಿ ಶಾಲೆ ಆರಂಭಿಸಿದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 48 ಸಾವಿರ ಶಿಕ್ಷಕರ ನೇಮಕ ಮಾಡಿದ್ದರು. ಹಾಗಾಗಿ ನಮ್ಮ ನಾಲ್ಕು ಜನ ಅಭ್ಯರ್ಥಿಗಳನ್ನು ಬೆಂಬಲಿಸಿ ಗೆಲ್ಲಿಸಬೇಕೆಂದು ಕೋರಿದರು.

ಸಮಸ್ಯೆಗೆ ಸ್ಪಂದನೆ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎ.ಪಿ ರಂಗನಾಥ್‌ ಮಾತನಾಡಿ, ಕಳೆದ ಒಂದು ವರ್ಷದಿಂದ ನಾನು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ವಕೀಲರ ಸಂಘದಲ್ಲಿ ಕೆಲಸ ಮಾಡಿ ಅನುಭವವಿದೆ. ಕೊರೋನಾ ಸಂಕಷ್ಟದಿಂದ ಶಿಕ್ಷಕರ ವೇತನ ಸರಿಯಾಗಿ ಆಗದ ವೇಳೆ ಅವರೊಂದಿಗೆ ಧರಣಿ ಮಾಡಿದ್ದೇನೆ. ನಿರಂತರವಾಗಿ ಶಿಕ್ಷಕರ ಪರವಾಗಿ ಕೆಲಸ ಮಾಡುವ ಉತ್ಸಾಹವಿದ್ದು ಮತ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
 

Follow Us:
Download App:
  • android
  • ios