'ಪ್ರಧಾನಿ ಮೋದಿಯಿಂದ ದೇಶಕ್ಕೆ ಅಪಾರ ಹಾನಿ'
ಆರ್ಥಿಕವಾಗಿ 20 ವರ್ಷ ಹಿಂದೆ ಹೋದ ಭಾರತ: ಶಾಸಕ ಯಶವಂತರಾಯಗೌಡ| ಬಿಜೆಪಿಯಲ್ಲಿ ಒನ್‌ಮ್ಯಾನ್ ಶೋ, ಅಮಿತ ಶಾರದಿಂದ ಪ್ರಜಾಪ್ರಭುತ್ವಕ್ಕೆ ತೊಂದರೆ| ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ ಅಧಿಕಾರ ತ್ಯಾಗ ಮಾಡಿ, ಆರ್ಥಿಕ ತಜ್ಞ ಮನಮೋಹನ ಸಿಂಗ್ ಅವರನ್ನು ಪ್ರಧಾನಿ ಮಾಡಿದರು|
ಇಂಡಿ(ಸೆ.13): ಜನರನ್ನು ಹಾಗೂ ಕೂಲಿ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ತೆರಳುವಂತೆ ಮಾಡಿ ನಂತರ ಲಾಕ್‌ಡೌನ್ ಘೋಷಿಸಬೇಕಿತ್ತು. ಪ್ರಧಾನಿ ನರೇಂದ್ರ ಮೋದಿ ಆಚಾತುರ್ಯದಿಂದ ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಮೋದಿ ಅವರ ಹಿಟ್ಲರ್ ಸಂಸ್ಕೃತಿ ನಡೆಯಿಂದ ದೇಶ ಆರ್ಥಿಕವಾಗಿ ಕುಸಿದಿದ್ದು, 20 ವರ್ಷ ಹಿಂದೆ ಹೋಗಿದೆ. ಈ ಸಂಸ್ಕೃತಿ ಮುಂದುವರಿಯುವುದಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹರಿಹಾಯ್ದಿದಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಸಂಜೆ ಹಮ್ಮಿಕೊಂಡ ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮ ಹಾಗೂ ಗ್ರಾಪಂ ಚುನಾವಣಾ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಅಮಿತ್ ಶಾ ಅವರ ದಬ್ಬಾಳಿಕೆ ರಾಜಕಾರಣ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ತೊಂದರೆಯಾಗುತ್ತಿದೆ. ಬಿಜೆಪಿಯನ್ನು ಬೇರುಮಟ್ಟದಿಂದ ಕಟ್ಟಿಬೆಳೆಸಿದ ಲಾಲ್‌ಕೃಷ್ಣ ಆಡ್ವಾಣಿ, ಮುರುಳಿ ಮನೋಹರ ಜೋಷಿ ಅಂತವರನ್ನು ಕ್ಯಾರೆ ಎನ್ನದ ಇವರಿಂದ ದೇಶಾಭಿವೃದ್ಧಿ ಅಸಾಧ್ಯ. ಬಿಜೆಪಿಯಲ್ಲಿ ಒನ್‌ಮ್ಯಾನ್ ಶೋ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ, ಬದ್ಧತೆ ರಾಜಕಾರಣ ಮಾಡುವ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಪಕ್ಷವಾಗಿದೆ ಎಂದರು. ಜನರ ಸಹಾಯಕ್ಕೆ ಬರಬೇಕಾದ ರಾಜ್ಯ ಬಿಜೆಪಿ ಸರ್ಕಾರ ಕೊರೋನಾ ಹೆಸರಲ್ಲಿ ಭ್ರಷ್ಟಾಚಾರ ನಡೆಸಿದೆ. ಸಚಿವರು, ಸಿಎಂ ಅವರಲ್ಲಿ ಸಮನ್ವಯತೆ ಇಲ್ಲ ಎಂದರು.
'ಸ್ವಾತಂತ್ರ್ಯ ನಂತರ ನೀರಾವರಿಗೆ ಹೆಚ್ಚು ಹಣ ನೀಡಿದ್ದು ಸಿದ್ದರಾಮಯ್ಯ ಸರ್ಕಾರ'
ಜಯಪ್ರಕಾಶ ನಾರಾಯಣ ಅವರ ಕಾಲದ ಜನತಾ ಪರಿವಾರ ಸದ್ಯ ಇಲ್ಲ. ದೇವೇಗೌಡರ ಕುಟುಂಬದ ಜನತಾ ಪರಿವಾರ ಇಂದು ರಾಜ್ಯದಲ್ಲಿದೆ. ಇಂತವರಿಂದ ದೇಶ, ರಾಜ್ಯದ ಜನತೆಯ ಹಿತ ಕಾಪಾಡಲು ಸಾಧ್ಯವಿಲ್ಲ. ಬಡವರು, ಹಿಂದುಳಿದ ವರ್ಗ, ಮುಂದುವರಿದ ಸಮುದಾಯ, ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು, ರೈತರು ಎಲ್ಲರನ್ನೂ ಒಗ್ಗೂಡಿಸಿ, ಅವರ ಹಿತ ಕಾಪಾಡುವ ಪಕ್ಷ ಕಾಂಗ್ರೆಸ್ ಆಗಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿ ಅವರು ಅಧಿಕಾರ ತ್ಯಾಗ ಮಾಡಿದರು. ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ ಅಧಿಕಾರ ತ್ಯಾಗ ಮಾಡಿ, ಆರ್ಥಿಕ ತಜ್ಞ ಮನಮೋಹನ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಇಂತಹ ತ್ಯಾಗದ ಪ್ರತಿಷ್ಠೆ ಹೊಂದಿದ ಪಕ್ಷ ಕಾಂಗ್ರೆಸ್ ಎಂದರು.
ಕೊರೋನಾ ರೋಗಕ್ಕೆ ಔಷಧ ಕಂಡು ಹಿಡಿಯುವವರೆಗೆ ಜನರು ಸಾಮಾಜಿಕ ಅಂತರ, ಮಾಸ್ಕ್ ಧರಿಸಿ, ಭಯಗೊಳ್ಳದೆ ಎಚ್ಚರಿಕೆಯಿಂದ ಇರಬೇಕು ಎಂದರು. ಬರುವ ಗ್ರಾಪಂ ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಕಾಂಗ್ರೆಸ್ ಇರುತ್ತದೆ. ಕಳೆದ ಅವಧಿಯ ಜಿಪಂ, ತಾಪಂ, ಗ್ರಾಪಂ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚು ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷದಿಂದ ಗೆಲ್ಲಿಸಿ, ಬೆಳೆಸಲಾಗಿದೆ. ಕೆಲವರು ಪಕ್ಷ ಬಿಟ್ಟು ಹೋಗಿದ್ದಾರೆ. ರಾಜಕಾರಣದಲ್ಲಿ ಇಂತವರಿಗೆ ಮದ್ದು ನನ್ನಲ್ಲಿದೆ ಎಂದು ಪಕ್ಷ ಬಿಟ್ಟವರಿಗೆ ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ಮುಖಂಡರಲ್ಲಿ ವ್ಯತ್ಯಾಸ, ವೈಮನಸ್ಸು ಇರಬಹುದು. ಆದರೆ ಚುನಾವಣೆ ಬಂದಾಗ ಪಕ್ಷದ ಪರವಾಗಿ ಶ್ರಮಿಸುತ್ತೇವೆ ಎನ್ನುವುದಕ್ಕೆ ವಿಜಯಪುರ ಜಿಪಂ ಅಧ್ಯಕ್ಷ ಚುನಾವಣೆ ಉದಾಹರಣೆ ಎಂದರು. ಡಿ. ದೇವರಾಜ ಅರಸರ ನಂತರದ ಪ್ರಭುದ್ಧ ನಾಯಕ ಸಿದ್ದರಾಮಯ್ಯನವರ ಅಧಿಕಾರವಧಿಯಲ್ಲಿ ತಾಲೂಕಿನ ಅಭಿವೃದ್ದಿಗಾಗಿ 3600 ಕೋಟಿ ಅನುದಾನ ನೀಡಿದ್ದಾರೆ. ಇಷ್ಟುಅನುದಾನ ಹಿಂದೆಂದೂ ಬಂದಿಲ್ಲ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ.ರಾಜು ಆಲಗೂರ, ಡಾ. ಮಹೇಶ ಗಾಯಕವಾಡ, ಕೆಎಂಎಫ್ ಅಧ್ಯಕ್ಷ ಸಾಂಬಾಜಿರಾವ ಮಿಸಾಳೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಎಂ. ಕೋರೆ, ಸದಾನಂದ ಡಂಗಣ್ಣನವರ, ಸಂಗಮೇಶ ಬಬಲೇಶ್ವರ ಮಾನಾಡಿದರು.
ಕಲ್ಲನಗೌಡ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಲಿಯಾಸ ಬೊರಾಮಣಿ, ಗುರಣ್ಣಗೌಡ ಪಾಟೀಲ, ಲಿಂಬಾಜಿ ರಾಠೋಡ, ಹಣಮಂತ ಖಂಡೆಕಾರ, ಭೀಮಣ್ಣ ಕೌಲಗಿ, ತಾಪಂ ಅಧ್ಯಕ್ಷ ಅಣ್ಣಾರಾಯ ಬಿದಕೋಟಿ, ಎಸ್.ಎಂ. ಪಾಟೀಲ ಗಣಿಹಾರ, ವಿಶ್ವನಾಥಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ದಖನಿ, ಮಹಾದೇವ ಗಡ್ಡದ, ಭೀಮಾಶಂಕರ ಮೂರಮನ್, ಹರಿಶ್ಚಂದ್ರ ಪವಾರ, ತಾಪಂ ಮಾಜಿ ಅಧ್ಯಕ್ಷ ಶೇಖರ ನಾಯಕ, ಅಪ್ಪು ಕಲ್ಲೂರ, ಪ್ರಶಾಂತ ದೇಸಾಯಿ ವೇದಿಕೆಯಲ್ಲಿದ್ದರು.
ಕಾಂಗ್ರೆಸ್ ಮುಖಂಡರಾದ ಸೋಮು ಮ್ಯಾಕೇರಿ, ಲಿಂಬಾಜಿ ರಾಠೋಡ, ತಮ್ಮಣ್ಣ ಪೂಜಾರಿ, ರುಕ್ಮದೀನ ತದ್ದೇವಾಡಿ, ಪ್ರಶಾಂತ ಕಾಳೆ, ಜೀತಪ್ಪ ಕಲ್ಯಾಣಿ, ಸೋಮು ಬ್ಯಾಳಿ, ಅಂತೂ ಜೈನ್, ಸಿದ್ದಪ್ಪ ನಾಟೀಕಾರ, ಅಯುಬ ಬಾಗವಾನ, ಮುಸ್ತಾಕ ಇಂಡಿಕರ್, ಉಮೇಶ ದೇಗಿನಾಳ, ಅವಿನಾಶ ಬಗಲಿ, ಸಿದ್ದು ಬೇಲ್ಯಾಳ, ಶಾಂತು ಹದಗಲ್ಲ, ಪುತಳಾಬಾಯಿ ಬಿಳೂರ, ಅವಿನಾಶ ಬಗಲಿ, ಜಾವೀದ ಮೋಮಿನ, ಜಹಾಂಗೀರ ಸೌದಾಗರ, ಮಹೇಶ ಹೊನ್ನಬಿಂದಗಿ, ಜಬ್ಬಾರ ಅರಬ, ಯಶವಂತ ಕೊಳ್ಳುರ ಶಾಸ್ತಿ್ರ, ಸದಾಶಿವ ಪ್ಯಾಟಿ, ಅಶೋಕಗೌಡ ಪಾಟೀಲ ಅನೇಕರಿದ್ದರು.
ಇಂಡಿ ಮತಕ್ಷೇತ್ರದಲ್ಲಿ ಬಿಜೆಪಿ ಮಕಾಡೆ ಮಲಗಲು ಶಾಸಕ ಯಶವಂತರಾಯಗೌಡ ಪಾಟೀಲರೇ ಕಾರಣ. ಈ ಬಾರಿ ಶಾಸಕರು ಹ್ಯಾಟ್ರಿಕ ಗೆಲವು ಖಚಿತ. ಮುಂಬರುವ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಇಂಡಿ ತಾಲೂಕಿನ 37 ಗ್ರಾಮ ಪಂಚಾಯತದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ತಂದು ಶಾಸಕ ಯಶವಂತರಾಯಗೌಡ ಪಾಟೀಲರ ಕೈಬಲಪಡಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು ಎಂದು ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ಅವರು ತಿಳಿಸಿದ್ದಾರೆ.