ಮಂಗಳೂರು(ಏ.14): ಇಟಲಿಯಲ್ಲಿದ್ದ ಮಂಗಳೂರಿನ ಯುವತಿಯೊಬ್ಬಳು ಭಾರತಕ್ಕೆ ಬಂದು ತೊಂದರೆಗೆ ಸಿಲುಕಿಕೊಂಡಿದ್ದು, ಆಕೆಯನ್ನು ಬೆಂಗಳೂರಿಂದ ಶಾಸಕ ಯು.ಟಿ. ಖಾದರ್‌ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

ಮಂಗಳೂರಿನ ಕುಳಾಯಿ ಮೂಲದ ಯುವತಿ ಶ್ರೀಮಧು ಎಂಬಾಕೆ ಇಟಲಿಯ ಯೂನಿವರ್ಸಿಟಿ ಆಫ್‌ ಡ್ಯುರಿನ್‌ನಲ್ಲಿ ಪಿಎಚ್‌.ಡಿ ಮಾಡುತ್ತಿದ್ದರು. ಆದರೆ ಕೊರೋನಾ ಮಹಾಮಾರಿ ಅಲ್ಲಿ ಸಾಕಷ್ಟುಜನರನ್ನು ಬಲಿ ತೆಗೆದುಕೊಂಡ ಕಾರಣ ಅವರು ಭಾರತಕ್ಕೆ ಮರಳುವ ಯೋಚನೆ ಮಾಡಿದ್ದರು. ಮಾ.14ರಂದು ಇಟಲಿಯ ವಿಮಾನ ನಿಲ್ದಾಣದಿಂದ ಹೊರಟ ಕೊನೆಯ ವಿಮಾನದಲ್ಲಿ ಮಾಚ್‌ರ್‍ 15ರಂದು ದೆಹಲಿ ತಲುಪಿದ್ದರು. ಆದರೆ ಅಲ್ಲಿ ಅವರನ್ನು ಕ್ವಾರೆಂಟೈನ್‌ನಲ್ಲಿ ಇರಿಸಲಾಗಿತ್ತು. ಕ್ವಾರೆಂಟೈನ್‌ ಮುಗಿದ ಬಳಿಕ ಅವರು ವಿಶೇಷ ಬಸ್‌ ಮೂಲಕ ಏ.10ರಂದು ಬೆಂಗಳೂರು ತಲುಪಿದ್ದರು.

ಕೊರೋನಾ ವಾರಿಯರ್‌ ವೈದ್ಯ ಕಂದನ ನೋಡದೆ ತಿಂಗಳಾಯ್ತು!

ಈ ವಿಶೇಷ ಬಸ್‌ನಲ್ಲಿ 19 ಮಂದಿ ಇದ್ದು, ಹೆಚ್ಚಿನವರು ಬೆಂಗಳೂರಿನವರಾಗಿದ್ದರು. ಆದ್ದರಿಂದ ಅವರೆಲ್ಲರೂ ಅದಾಗಲೇ ಮನೆ ತಲುಪಿದ್ದರು. ಮೈಸೂರಿನ ಮೂವರು ಕೂಡಾ ವಿಶೇಷ ಪಾಸ್‌ ಮೂಲಕ ಮನೆ ತಲುಪಿದ್ದರು. ಆದರೆ ಶ್ರೀಮಧು ಮಾತ್ರ ಪಾಸ್‌ ವ್ಯವಸ್ಥೆ ಇಲ್ಲದೆ ಮಂಗಳೂರು ತಲುಪಲಾಗಿರಲಿಲ್ಲ.

ಲಾಕ್‌ಡೌನ್‌ ಆಗಿರುವ ಸಂದರ್ಭ ವಿದೇಶಗಳಿಂದ ಬಂದು ಸಿಲುಕಿಕೊಂಡವರನ್ನು ವಿಶೇಷ ಪಾಸ್‌ ವ್ಯವಸ್ಥೆ ಮೂಲಕ ಕರೆದುಕೊಂಡು ಹೋಗಬಹುದು ಎಂಬ ಸರ್ಕಾರದ ನಿರ್ದೇಶನದಂತೆ ಶ್ರೀಮಧು ಹೆತ್ತವರು ದ.ಕ. ಜಿಲ್ಲಾ​ಧಿಕಾರಿ ಬಳಿ ಪಾಸ್‌ಗಾಗಿ ಬಹಳಷ್ಟುಬಾರಿ ಎಡತಾಕಿದರೂ ಏನೂ ಪ್ರಯೋಜನವಾಗಿರಲಿಲ್ಲ. ಬಳಿಕ ಅವರು ತಮ್ಮ ಕುಟುಂಬದ ಮಿತ್ರರಾಗಿರುವ ಖ್ಯಾತ ವಕೀಲ ಅರುಣ್‌ ಬಂಗೇರ ಅವರನ್ನು ಭೇಟಿಯಾಗಿ ತಮ್ಮ ಪುತ್ರಿ ಲಾಕ್‌ಡೌನ್‌ ಸಂಕಷ್ಟದಿಂದ ಬೆಂಗಳೂರಿನಲ್ಲಿ ಸಿಲುಕಿಕೊಂಡಿರುವ ಬಗ್ಗೆ ತಿಳಿಸಿದ್ದರು. ಅವರು ಶಾಸಕ ಯು.ಟಿ. ಖಾದರ್‌ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದರು.

ಕೊರೋನಾ ವಾರಿಯರ್ಸ್: ದಿನವಿಡೀ ಬರೀ ಕೊರೋನಾ ಕೊರೋನಾ..!

ಖಾದರ್‌ ಅವರು ಈ ಸಂದರ್ಭ ಬೆಂಗಳೂರಿನಲ್ಲಿಯೇ ಇದ್ದ ಕಾರಣ ಅವರು ಯುವತಿಯನ್ನು ಶನಿವಾರ ತಮ್ಮ ಕಾರಿನಲ್ಲಿಯೇ ಬೆಂಗಳೂರಿನಿಂದ ಕರೆದುಕೊಂಡು ಬಂದಿದ್ದು, ಭಾನುವಾರ ಬೆಳಗ್ಗೆ ಕುಳಾಯಿಯಲ್ಲಿರುವ ಅವರ ಮನೆಗೆ ತಲುಪಿಸಿದ್ದಾರೆ.

ಅಂತೂ ಶ್ರೀಮಧು ಅವರು ಮನೆ ತಲುಪಿರುವುದರಿಂದ ಅವರ ಹೆತ್ತವರ ಮುಖದಲ್ಲಿ ಮಂದಹಾಸ ಮೂಡಿದ್ದು, ಶಾಸಕ ಯು.ಟಿ. ಖಾದರ್‌ ಅವರ ಕಾರ್ಯಕ್ಕೂ ಶ್ಲಾಘನೆ ವ್ಯಕ್ತವಾಗಿದೆ.