ಮಂಗಳೂರು(ಏ14): ವಿಶ್ವಾದ್ಯಂತ ಕೊರೋನಾ ಭೀತಿ ಆವರಿಸಿ ವೈದ್ಯ ಲೋಕದಲ್ಲೂ ತೀವ್ರ ಸಂಚಲನ ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ಮಂಗಳೂರಿನ ವೈದ್ಯರೊಬ್ಬರು ಕಳೆದ 1 ತಿಂಗಳಿನಿಂದ ಒಂದೇ ಒಂದು ರಜೆಯನ್ನೂ ಪಡೆಯದೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ತನ್ನ ನಾಲ್ಕು ವರ್ಷದ ಪುಟ್ಟಮಗುವಿನಿಂದ, ಬಂಧು ಬಾಂಧವರಿಂದ ದೂರವಾಗುಳಿದು ಕೊರೋನಾ ಸೋಂಕಿತರ ಸೇವೆಗೆ ಕಟಿಬದ್ಧರಾಗಿದ್ದಾರೆ.

ಇವರು ಡಾ. ಶರತ್‌ ಬಾಬು ಎಸ್‌., ದಕ್ಷಿಣ ಕನ್ನಡ ಜಿಲ್ಲಾ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯ ಜ್ವರ ಕ್ಲಿನಿಕ್‌, ಐಸೋಲೇಶನ್‌ ಸೆಂಟರ್‌ ಹಾಗೂ ಚಿಕಿತ್ಸಾ ವಿಭಾಗದ ಟೀಮ್‌ ಲೀಡರ್‌. ಜಿಲ್ಲಾ ಕೋವಿಡ್‌ ಆಸ್ಪತ್ರೆಯ ನೋಡಲ್‌ ಅಧಿಕಾರಿಯೂ ಹೌದು. ಜಿಲ್ಲೆಯಲ್ಲಿ ದಾಖಲಾದ 12 ಪಾಸಿಟಿವ್‌ ಪ್ರಕರಣಗಳ ಪೈಕಿ ಬಹುತೇಕರು ಆಸ್ಪತ್ರೆಯಿಂದ ಬಿಡುಗಡೆಗೊಂಡು ಪುನರ್ಜನ್ಮ ಪಡೆದಿರುವ ಹಿಂದೆ ಇವರ ತ್ಯಾಗದ ಸೇವೆಯ ಪಾಲು ಬಹು ದೊಡ್ಡದು. ತಮ್ಮ ಬಿಡುವಿಲ್ಲದ ಕೆಲಸ- ಕಾರ್ಯಗಳ ನಡುವೆಯೂ ಕನ್ನಡಪ್ರಭದೊಂದಿಗೆ ಕೋವಿಡ್‌ ವಿರುದ್ಧದ ತಮ್ಮ ಹೋರಾಟದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.

24/7 ಕೆಲಸ:

ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಶನಿವಾರ, ಭಾನುವಾರಗಳಿಗೆ ವ್ಯತ್ಯಾಸವೇ ಇಲ್ಲದಂತಾಗಿ ಏಕತಾನತೆಯ ದಿನಚರಿಯಾಗಿದೆ. ಮಾಚ್‌ರ್‍ 12ರಿಂದ ಜ್ವರ ಕ್ಲಿನಿಕ್‌ ಆರಂಭವಾದಾಗಿನಿಂದ ಒಂದೂ ರಜೆ ಪಡೆದಿಲ್ಲ. ಬೆಳಗ್ಗೆ 8.30ರಿಂದ ಕೆಲಸ ಆರಂಭವಾದರೆ ಮನೆಗೆ ಮರಳುವುದು ರಾತ್ರಿಯೇ. ಅನೇಕ ಬಾರಿ ರಾತ್ರಿಯೂ ಮೊಬೈಲ್‌ ಕರೆಗಳನ್ನು ಸ್ವೀಕರಿಸಿ ಜೂನಿಯರ್‌ ಡಾಕ್ಟರ್‌ಗಳಿಗೆ ಸಲಹೆ ಸೂಚನೆಯನ್ನು ನೀಡಬೇಕಾಗುತ್ತದೆ. ಒಂದರ್ಥದಲ್ಲಿ ಬಿಡುವಿಲ್ಲದ 24/7 ರೀತಿಯಲ್ಲಿ ಕೆಲಸ ಮಾಡುವಂತಾಗಿದೆ.

ಕೊರೋನಾ ವಾರಿಯರ್ಸ್: ದಿನವಿಡೀ ಬರೀ ಕೊರೋನಾ ಕೊರೋನಾ..!

ನನ್ನ ಜತೆಗೆ ಮೂವತ್ತು ಮಂದಿ ವೈದ್ಯರು, ಅದಕ್ಕಿಂತಲೂ ಹೆಚ್ಚು ದಾದಿಯರು ಇದ್ದಾರೆ. ಅವರನ್ನು ಮೂರು ತಂಡಗಳನ್ನಾಗಿ ಮಾಡಿ ಜ್ವರ ಕ್ಲಿನಿಕ್‌, ಪಾಸಿಟಿವ್‌ ರೋಗಿಗಳನ್ನು ನೋಡಿಕೊಳ್ಳುವುದು, ಐಸಿಯು ಪೇಷಂಟ್‌ಗಳನ್ನು ನೋಡಿಕೊಳ್ಳಲು ವರ್ಗೀಕರಿಸಲಾಗಿದೆ. ಅವರಿಗೆ ಮೂರು ದಿನ ಕೆಲಸ ಮಾಡಿದ ಬಳಿಕ 12 ದಿನ ಸೆಲ್‌್ಫ ಕ್ವಾರಂಟೈನ್‌ ಮಾಡಲು ವ್ಯವಸ್ಥೆ ಮಾಡಿದ್ದೇವೆ. ಆದರೆ ನಾನು ಟೀಮ್‌ ಲೀಡರ್‌ ಆಗಿರುವುದರಿಂದ ಒಂದು ವೇಳೆ ರಜೆ ಪಡೆಯಲು ಮುಂದಾದರೆ ಇಡೀ ವ್ಯವಸ್ಥೆಯೇ ಹದಗೆಟ್ಟು ಹೋಗುತ್ತದೆ. ಹಾಗಾಗಿ ಎಂತಹ ಜಟಿಲ ಸಂದರ್ಭದಲ್ಲೂ ರಜೆಯನ್ನು ಪಡೆದುಕೊಂಡಿಲ್ಲ ಎಂದು ಶರತ್‌ ಬಾಬು ಅನುಭವ ಹಂಚಿಕೊಂಡರು.

ನಾಲ್ಕು ವರ್ಷದ ಮಗು ಜೊತೆಗಿಲ್ಲ:

ಮನೆಯಲ್ಲಿ ನಾನು, ಪತ್ನಿ, ನಾಲ್ಕು ವರ್ಷದ ಮಗು ಹಾಗೂ ನನ್ನ ಅತ್ತೆ -ಮಾವ ಇದ್ದರು. ತಿಂಗಳ ಹಿಂದೆ ಕಾಸರಗೋಡಿನಲ್ಲಿ ಮೊದಲ ಕೊರೋನಾ ಪಾಸಿಟಿವ್‌ ಕೇಸು ದಾಖಲಾದ ತಕ್ಷಣ ಮುನ್ನೆಚ್ಚರಿಕೆ ಕ್ರಮವಾಗಿ ಮಗುವನ್ನು ಶಿವಮೊಗ್ಗದಲ್ಲಿರುವ ನನ್ನ ತಂದೆ ತಾಯಿಯ ಬಳಿಗೆ ಬಿಟ್ಟಿದ್ದೇನೆ. ಅತ್ತೆಯವರಿಗೆ ಡಯಾಬಿಟಿಸ್‌ ಸಮಸ್ಯೆ ಇದ್ದುದರಿಂದ ಅವರನ್ನು ಕೂಡ ಬೆಂಗಳೂರಿನಲ್ಲಿರುವ ಅವರ ಮಗನ ಮನೆಗೆ ಕಳುಹಿಸಿದೆ. ಈಗ ನಾನು ಮತ್ತು ಪತ್ನಿ ಇಬ್ಬರೇ ಮನೆಯಲ್ಲಿ ಇರುವುದು. ಪುಟ್ಟಮಗು ಹತ್ತಿರವಿರುವುದು ಭಾವನಾತ್ಮಕ ಅನ್ಯೋನ್ಯತೆ. ಅದನ್ನು ಕಳೆದುಕೊಂಡಿದ್ದೇನೆ ಎನಿಸುತ್ತದೆ. ಆದರೆ ಇದು ಅನಿವಾರ್ಯ ಎನ್ನುತ್ತಾರವರು.

ಪತ್ನಿ ಜೊತೆಗಿದ್ದೂ ದೂರ:

ನನ್ನ ಪತ್ನಿ ಕೂಡ ವೈದ್ಯೆ. ಈಗಿನ ಪರಿಸ್ಥಿತಿಯಲ್ಲಿ ನನ್ನ ಸೇವೆಯ ಅಗತ್ಯತೆ ಎಷ್ಟಿದೆ ಎನ್ನುವುದು ಅವಳಿಗೆ ಗೊತ್ತಿದೆ. ಆದರೆ ಸಹಜವಾಗಿ ಬೇಸರ ಕೂಡ ಆಗುವಂಥದ್ದೇ. ಯಾಕೆಂದರೆ ಕಳೆದ ನಾಲ್ಕು ವೀಕೆಂಡ್‌ಗಳಲ್ಲಿ ಆಕೆಯ ಜೊತೆಗಿರಲು ನನಗೆ ಸಾಧ್ಯವಾಗಿಲ್ಲ. ಹಿಂದಿನಂತೆ ಈಗ ಜೀವನ ಸಾಮಾನ್ಯವಾಗಿಲ್ಲ. ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವಷ್ಟರಲ್ಲಿ ಸುಸ್ತಾಗಿರುತ್ತೆ. ನಂತರ ಊಟ ಮಾಡಿ ಮಲಗೋದು. ಹಿಂದಿನಂತೆ ಪತ್ನಿ ಜತೆ ನಗುನಗುತ್ತಾ ಜೊತೆಗಿದ್ದು ಮಾತನಾಡಲೂ ಆಗುತ್ತಿಲ್ಲ. ನಾವಿಬ್ಬರೂ ಒಂದೇ ಮನೆಯಲ್ಲಿದ್ದರೂ ಕೂಡ ಒಂದೇ ರೂಮಿನಲ್ಲಿ ಮಲಗುವಂತಿಲ್ಲ. ಒಟ್ಟಿಗೆ ಊಟ ಮಾಡುವಂತಿಲ್ಲ ಇತ್ಯಾದಿ ಸ್ವಯಂ ನಿರ್ಬಂಧಗಳಿಗೆ ಒಳಗಾಗಿದ್ದೇವೆ ಎಂದರು.

ಮೇ. 3ವರೆಗೆ ದೇಶದಾದ್ಯಂತ ಲಾಕ್‌‌ಡೌನ್: ಪಿಎಂ ಮೋದಿ ಅಧಿಕೃತ ಘೋಷಣೆ!

ಇತರ ರೋಗಿಗಳಿಗೆ ಹೋಲಿಕೆ ಮಾಡಿದರೆ ಸಾಮಾನ್ಯವಾಗಿ ಕೊರೋನಾ ಸೋಂಕಿತರಿಗೆ ಆತಂಕ ಹೆಚ್ಚು ಇರುತ್ತದೆ. ಅದನ್ನು ಕೆಲವೊಮ್ಮೆ ವ್ಯಕ್ತಪಡಿಸುತ್ತಾರೆ ಕೂಡ. ಅಂಥವರಿಗಾಗಿ ಪ್ರತ್ಯೇಕ ತಂಡದಿಂದ ಕೌನ್ಸೆಲಿಂಗ್‌ ವ್ಯವಸ್ಥೆಯನ್ನು ಮಾಡಿದ್ದೇವೆ. ಅತೀವವಾದ ಭಯದಿಂದ ಕೆಲವೊಮ್ಮೆ ಗೊಂದಲಕ್ಕೊಳಗಾಗಿ ಸ್ವಲ್ಪ ವಿಕೋಪ ಎನಿಸುವಂತಹ ವರ್ತನೆ ತೋರಿಸುವ ಸಾಧ್ಯತೆಗಳು ಇವೆ. ಆದರೆ ಬೇರೆಯವರಿಗೆ ಹಾನಿ ಮಾಡುವಂತಹ ವರ್ತನೆಯನ್ನು ಇದುವರೆಗೂ ಯಾವ ರೋಗಿಯೂ ತೋರಿಸಿಲ್ಲ ಎಂದರು.

ಸಿಬ್ಬಂದಿಗೆ ತಾರತಮ್ಯ:

ನಾನು ಶಿವಮೊಗ್ಗ ಮೂಲದವನಾಗಿರುವುದರಿಂದ ಮಂಗಳೂರಿನಲ್ಲಿ ನೆಂಟರು ಇಲ್ಲ. ಸ್ನೇಹಿತರು ಬೇಕಾದಷ್ಟಿದ್ದಾರೆ, ಆದರೆ ಈಗ ಲಾಕ್‌ಡೌನ್‌ ಇರುವುದರಿಂದ ಅವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಫೋನ್‌ ಮೂಲಕ ಆಗಾಗ ಹುಷಾರಾಗಿರುವಂತೆ ಹೇಳುತ್ತಾರೆ. ಆದರೆ ಕೊರೋನಾ ಚಿಕಿತ್ಸಾ ವೈದ್ಯನಾಗಿದ್ದರೂ ನನ್ನನ್ನು ಬೇರೆಇರಿಸಿ ತಾರತಮ್ಯ ಭಾವನೆಯಿಂದ ನೋಡುವಂತಹ ಪ್ರಸಂಗಗಳು ನಡೆದಿಲ್ಲ. ಆದರೆ ನಮ್ಮ ಆಸ್ಪತ್ರೆಯ ಸಿಬ್ಬಂದಿಗೆ ಇಂತಹ ಅನುಭವ ಸಾಕಷ್ಟಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಇಂತಹ ವರ್ತನೆ ಮಿತಿ ಮೀರಿದರೆ ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದು ಡಾಕ್ಟರ್‌ ಶರತ್‌ ಬಾಬು ಹೇಳಿದರು.

ಮೊದಲ ವ್ಯಕ್ತಿ ಡಿಸ್ಚಾಜ್‌ರ್‍ ಖುಷಿ..

ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಕೊರೋನಾ ಪ್ರಕರಣಗಳು ಹೊಸದಾಗಿದ್ದರಿಂದ ಮೊದಲ ಸೋಂಕಿತ ವ್ಯಕ್ತಿ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ನಮ್ಮ ಇಡೀ ತಂಡಕ್ಕೆ ಅತ್ಯಂತ ಸಂತೋಷ ನೀಡಿದ ಸಂಗತಿ. ಅದೊಂದು ಅತ್ಯಂತ ವಿಶೇಷವಾದ ಸಂದರ್ಭವಾಗಿತ್ತು. ನಮ್ಮ ಸೇವೆಯ ಮೊದಲ ಸಕ್ಸಸ್‌ ಅದಾಗಿದ್ದರಿಂದ ಸಹಜವಾಗಿ ಅತೀವ ಖುಷಿ ಪಟ್ಟಿದ್ದೆವು ಎಂದು ಡಾ. ಶರತ್‌ ಬಾಬು ಸಂತೋಷ ಹಂಚಿಕೊಂಡರು.

-ಸಂದೀಪ್‌ ವಾಗ್ಲೆ