ಹುಕ್ಕೇರಿ(ಮಾ.06): ನೆರೆ ಹಾವಳಿಯಲ್ಲಿ ಸಂಪೂರ್ಣ ಮನೆ ಕುಸಿತಗೊಂಡ ನಿರಾಶ್ರಿತರಿಗೆ ಹೊಸ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಕಳೆದ ನಾಲ್ಕು ತಿಂಗಳು ಹಿಂದೆಯೇ ಮುಂಗಡವಾಗಿ 1 ಲಕ್ಷ ಹಣ ನೀಡಿದೆ. ಅಂಥ ಫಲಾನುಭವಿಗಳ ಮನೆ ನಿರ್ಮಾಣ ಕಾರ್ಯ ಈ ತಿಂಗಳಾಂತ್ಯದಲ್ಲಿ ಆರಂಭಿಸದಿದ್ದರೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಶಾಸಕ ಉಮೇಶ ಕತ್ತಿ ಎಚ್ಚರಿಸಿದ್ದಾರೆ.

ಇಲ್ಲಿನ ತಾಪಂ ಸಭಾಭವನದಲ್ಲಿ ಶುಕ್ರವಾರ ನಡೆದ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಪಿಡಿಒಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗುಡುಗಿದರು.

ನೆರೆ ಹಾವಳಿಯಲ್ಲಿ ಹುಕ್ಕೇರಿ ಕ್ಷೇತ್ರದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಹೊಸ ಮನೆ ನಿರ್ಮಾಣದ ತಳಪಾಯ ಕೆಲಸಕ್ಕೆ 1 ಲಕ್ಷ ಮುಂಗಡ ಹಣ ಮಂಜೂರು ಮಾಡಿ ನಾಲ್ಕೈದು ತಿಂಗಳಾಗಿದೆ. ಆದರೆ, ಕೆಲ ಫಲಾನುಭವಿಗಳು ಇದುವರೆಗೂ ಮನೆ ಈ ಹಂತದ ಕೆಲಸ ಮಾಡಿಲ್ಲ. ಹಾಗಾಗಿ ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾದ ಹಣ ಸಂಪೂರ್ಣ ಖರ್ಚು ಮಾಡಬೇಕು. ಒಂದು ವೇಳೆ ಮನೆ ನಿರ್ಮಿಸಿಕೊಳ್ಳಲು ಹಿಂದೇಟು ಹಾಕುವ ಸಂತ್ರಸ್ತರಿಂದ ಪಿಡಿಒಗಳು ಹಣ ವಾಪಸ್‌ ಪಡೆದು ಸರ್ಕಾರಕ್ಕೆ ಭರಣಾ ಮಾಡಬೇಕು ಎಂದು ಅವರು ಸೂಚಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೃಷಿ ಇಲಾಖೆಯಿಂದ ಹನಿ ಹಾಗೂ ತುಂತುರು ನೀರಾವರಿಯ ಸಹಾಯಧನ ಬಿಡುಗಡೆಯಾಗಲು ವಿಳಂಬವಾಗಿದ್ದು ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಗ್ರಾಮೀಣ ವಿದ್ಯುತ್‌ ಸಹಕಾರಿ ಸಂಘಕ್ಕೆ ನೆರೆಹಾವಳಿಯಿಂದ ಸುಮಾರು 10 ಕೋಟಿ ಮೌಲ್ಯದ ಸಾಧನ, ಸಲಕರಣೆಗಳು ಹಾನಿಗೀಡಾಗಿದ್ದು ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ನೆರೆ ಹಾವಳಿಯಿಂದ ಹಾನಿಗೊಳಗಾದ ಶಾಲೆ ಮತ್ತು ಅಂಗನವಾಡಿ ಕಟ್ಟಡಗಳ ದುರಸ್ತಿ ಕೆಲಸವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಇದೇ ಸಂದರ್ಭದಲ್ಲಿ ಸೂಚಿಸಿದರು.

ಹುಕ್ಕೇರಿ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನ ಬರುವ ಮಾಚ್‌ರ್‍ ತಿಂಗಳಲ್ಲಿ ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ತನ್ಮೂಲಕ ಯಾವುದೇ ಅನುದಾನ ಸರ್ಕಾರಕ್ಕೆ ವಾಪಸ್‌ ಹೋಗದಂತೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ಯಾವುದೇ ಕಾರಣಕ್ಕೂ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನಿಗಾ ವಹಿಸಬೇಕು ಎಂದು ಅವರು ತಾಕೀತು ಮಾಡಿದರು.

ಉದ್ಯೋಗ ಖಾತರಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಜತೆಗೆ ಇನ್ನೂ ಅಗತ್ಯಬಿದ್ದರೆ ಹೆಚ್ಚುವರಿ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದುಕೊಳ್ಳಬೇಕು. ವಿವಿಧ ಗ್ರಾಮಗಳಲ್ಲಿ ಬೇಡಿಕೆ ಇರುವ ಅಂಬೇಡ್ಕರ್‌, ಜಗಜೀವನರಾಂ, ವಾಲ್ಮೀಕಿ, ಸಮುದಾಯ ಭವನಗಳ ಪಟ್ಟಿಯನ್ನು ವಾರಾಂತ್ಯದಲ್ಲಿ ಸಲ್ಲಿಸಿದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆಯಲಾಗುವುದು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳಿದ್ದು ಈ ಕೂಡಲೇ ಎಲ್ಲ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.

ತಹಸೀಲ್ದಾರ ಅಶೋಕ ಗುರಾಣಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್‌.ಬಿರಾದಾರಪಾಟೀಲ, ಸಿಪಿಐ ಗುರುರಾಜ ಕಲ್ಯಾಣಶೆಟ್ಟಿಮತ್ತಿತರರು ಉಪಸ್ಥಿತರಿದ್ದರು.