Asianet Suvarna News Asianet Suvarna News

ಬನಶಂಕರಿ ಜಾತ್ರೆ ವೇಳೆ ಒಂದು ಸೆಕೆಂಡ್‌ ವಿದ್ಯುತ್‌ ಹೋದರೆ ಕ್ರಮ: ಸಿದ್ದರಾಮಯ್ಯ

ಜಾತ್ರೆಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸಿ| ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಅಧಿಕಾರಿಗಳಿಗೆ ಸೂಚನೆ ನೀಡಿದ ಸಿದ್ದರಾಮಯ್ಯ| ಜ. 10 ರಿಂದ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಆರಂಭ|ದಿನದ 24 ಗಂಟೆನೂ ವಿದ್ಯುತ್‌ ಸರಬರಾಜು ಇರಬೇಕು|

MLA Siddaramaiah Meeting With Officers for Banashankari Fair on Badami in Bagalkot District
Author
Bengaluru, First Published Dec 28, 2019, 11:02 AM IST

ಬಾದಾಮಿ(ಡಿ.28): ಜಾತ್ರೆಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸುವುದರ ಜೊತೆಗೆ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಅಧಿಕಾರಿಗಳಿಗೆ ಮಾಜಿ ಸಿಎಂ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜ. 10 ರಿಂದ ಆರಂಭವಾಗಲಿರುವ ಬನಶಂಕರಿ ದೇವಿ ಜಾತ್ರಾ ಮಹೋತ್ಸವದ ಪೂರ್ವಸಿದ್ಧತೆಯನ್ನು ಶುಕ್ರವಾರ ಬೆಂಗಳೂರಿನ ತಮ್ಮ ಕಾವೇರಿ ನಿವಾಸದಲ್ಲೇ ತೆಗೆದುಕೊಂಡು ಮಾತನಾಡಿದ ಅವರು, ಜಾತ್ರೆಯ ರಥೋತ್ಸವ ಸಂದರ್ಭದಲ್ಲಿ ಸೇರುವ ಸಹಸ್ರಾರು ಭಕ್ತರಿಗೆ ಸುಗಮ ರಥೋತ್ಸವಕ್ಕೆ ಹಾಗೂ ಜಾತ್ರೆಯಲ್ಲಿ ಕಾನೂನು ಸುವ್ಯವಸ್ಥೆಯನ್ನ ಕಟ್ಟುನಿಟ್ಟಾಗಿ ಪಾಲಿಸುವುದರ ಜತೆಗೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪುಷ್ಕರಣಿಗೆ ನೀರು ಹರಿಸುವುದು(ಸಂಗ್ರಹ) ದಿನದ 24 ಗಂಟೆ ವಿದ್ಯುತ್‌ ಬೆಳಕಿನ ವ್ಯವಸ್ಥೆ, ಸ್ವಚ್ಛತೆ, ನೈರ್ಮಲೀಕರಣ, ಶೌಚಾಲಯ ನಿರ್ಮಾಣ, ತಾತ್ಕಾಲಿನ ಶೌಚಾಲಯ ಮತ್ತು ಸ್ನಾನಗೃಹಗಳ ನಿರ್ಮಾಣ, ಪಾರ್ಕಿಂಗ್‌ ಸೌಲಭ್ಯ, ಹೆಚ್ಚುವರಿ ವಾಹನಗಳ ಸೌಕರ್ಯ, ಜಾತ್ರೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಇನ್ನಿತರ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹೆಸ್ಕಾಂ ಅಧಿಕಾರಿಗೆ ತರಾಟೆ:

ಸಭೆಗೂ ಬಂದಿಲ್ಲ, ನಿನಗೆ ಬರುವ ವ್ಯವದಾನವಿಲ್ಲವೆ ಎಂದು ಪ್ರಶ್ನಿಸಿ, ನಿನ್ನ ಮೇಲೆ ಬಹಳಷ್ಟುದೂರುಗಳಿವೆ. ವಿದ್ಯುತ್‌ ಯಾವುದೇ ಕಾರಣಕ್ಕೂ ಜಾತ್ರೆಯಲ್ಲಿ ಒಂದು ಸೆಕೆಂಡ್‌ ಆಫ್‌ ಆಗಬಾರದು. ದಿನದ 24 ಗಂಟೆನೂ ವಿದ್ಯುತ್‌ ಸರಬರಾಜು ಇರಬೇಕು ಎಂದು ಕಟ್ಟೆಚ್ಚರ ನೀಡಿದರು.

ಈ ಕುರಿತು ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಪಂ ಸಿಇಒ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಜಾತ್ರೆಯ ಸಂಪೂರ್ಣ ಯಶಸ್ವಿಗೆ ತಾವುಗಳು ಮತ್ತೊಮ್ಮೆ ಸ್ಥಳೀಯ ಜನಪ್ರತಿನಿಧಿ, ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಆಯೋಜಿಸಿ ಸಲಹೆ ಸೂಚನೆ ಪಡೆದು ಶಾಂತರೀತಿಯಲ್ಲಿ ಜರುಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಆಗಮಿಸುವ ಭಕ್ತ ಸಮೂಹಕ್ಕೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್‌, ರಸ್ತೆ ಹಾಗೂ ಭಕ್ತರಿಗೆ ಭದ್ರತೆ ಒದಗಿಸಿ ಸುಚಿತ್ವ ಕಾಪಾಡುವ ಮೂಲಕ ಜಾತ್ರೆ ಯಶಸ್ಸುಗೊಳಿಸಬೇಕು. ರಥೋತ್ಸವದ ಬೀದಿ, ಜಾತ್ರೆಯ ಮುಖ್ಯ ರಸ್ತೆಗಳಲ್ಲಿನ ತೊಂದರೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಅಧಿಕಾರಿಗಳು ಸಾರ್ವಜನಿಕವಾಗಿ ಸ್ಪಂದಿಸಿ ಬಗೆಹರಿಸುವ ಜತೆಗೆ ಜಾತ್ರೆಯಲ್ಲಿ ಪಾವಿತ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಡಾ.ಎಂ.ಎಚ್‌.ಚಲವಾದಿ, ಬ್ಲಾಕ್‌ ಅಧ್ಯಕ್ಷ ಮಲ್ಲಣ್ಣ ಯಲಿಗಾರ, ಹೊಳಬಸು ಶೆಟ್ಟರ, ಪಿ.ಆರ್‌.ಗೌಡರ, ಎಂ.ಬಿ.ಹಂಗರಗಿ, ಆರ್‌.ಎಫ್‌.ಬಾಗವಾನ, ಮಧು ಯಡ್ರಾಮಿ, ಚೊಳಚಗುಡ್ಡ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಕಳಸನ್ನವರ, ಸದಸ್ಯರಾದ ಬಸಯ್ಯ ಹಂಪಿಹೊಳಿಮಠ, ಜಗದೀಶ ಮಲ್ಲಾಪೂರ, ಶಿವಪುತ್ರಪ್ಪ ಭಜಂತ್ರಿ, ಮಾಲತೇಶ ಪೂಜಾರ, ಆನಂದ ದೊಡಮನಿ, ಟ್ರಷ್ಟನ ಅಭಿಷೇಕ ಪೂಜಾರ, ಪಿಡಿಒ ಕೋತಿನ, ತಹಸೀಲ್ದಾರ್‌ ಸುಹಾಸ ಇಂಗಳೆ, ಇಒ ಡಾ. ಪುಣಿತ್‌, ಆರೋಗ್ಯಾಧಿಕಾರಿ ಡಾ. ಎಂ.ಬಿ.ಪಾಟೀಲ, ಸಿಪಿಐ ರಮೇಶ ಹಾನಾಪೂರ, ಜಿಪಂ ಅಭಿಯಂತರ ಕರಮಳ್ಳಿ, ಲೋಕೋಪಯೋಗಿ ಅಭಿಯಂತರ ಜಾಡರ, ಎಂಎಲ್‌ಬಿಸಿ ಮೆಣಸಗಿ, ಪುರಸಭೆ ಮುಖ್ಯಾಧಿಕಾರಿ ಜ್ಯೋತಿ ಗಿರೀಶ, ಸದಸ್ಯರಾದ ಮಂಜುನಾಥ ಹೊಸಮನಿ, ಪಾಂಡು ಕಟ್ಟಿಮನಿ, ಶಂಕರ ಕನಕಗಿರಿ, ಭೀಮಸಿ ಕಂಬಾರ ಸೇರಿದಂತೆ ಇತರರಿದ್ದರು.
 

Follow Us:
Download App:
  • android
  • ios