ರಸ್ತೆ ಅಭಿವೃದ್ಧಿಯಲ್ಲಿ ರಾಯಚೂರು ಜಿಲ್ಲೆಗೆ ಮೊದಲ ಆದ್ಯತೆ: ಶಿವನಗೌಡ ನಾಯಕ

ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡರು ನನಗೆ ನಿಗಮ ಅಧ್ಯಕ್ಷ ಸ್ಥಾನ ಕಲ್ಪಿಸಿದ್ದಾರೆ| ನಾನೂ ಕ್ಷೇತ್ರಕ್ಕೆ ಆದ್ಯತೆ ನೀಡುವದಾದರೆ ಮಾಜಿ ಜಿಪಂ ಸದಸ್ಯ ಪ್ರಕಾಶ ಪಾಟೀಲ್‌ ಜೇರಬಂಡಿಯವರಿಗೆ ಅವಕಾಶ ನೀಡಲು ಮನವಿ ಮಾಡಿದ್ದೆ ಆದರೆ ಪಕ್ಷ ತೀರ್ಮಾನದ ಮೇರೆಗೆ ಕಳೆದ ವಾರ ಅಧಿಕಾರ ಸ್ವೀಕಾರ ಮಾಡಿದ್ದೇನೆ: ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ಶಿವನಗೌಡ ನಾಯಕ|

MLA Shivanagouda Naik Says Raichur District is the First Priority in Road Development

ದೇವದುರ್ಗ(ಆ.24): ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ವಿಶೇಷ ಅನುದಾನ ತಂದು ಜಿಲ್ಲೆಯ ರಸ್ತೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ಶಿವನಗೌಡ ನಾಯಕ ತಿಳಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನೇನು ನಿಗಮ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಿಲ್ಲ. ರಾಜ್ಯದ ರಾಜಕೀಯ ಪರಿಸ್ಥಿತಿ, ಪ್ರವಾಹ, ಕೊರೋನಾದಂತಹ ಸಮಸ್ಯೆಗಳಿರುವಾಗ ಸಚಿವ ಸ್ಥಾನದ ಬೇಡಿಕೆ ಇಡುವದು ಸಮಂಜಸವಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ. ಆದರೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡರು ನನಗೆ ನಿಗಮ ಅಧ್ಯಕ್ಷ ಸ್ಥಾನ ಕಲ್ಪಿಸಿದ್ದಾರೆ. ಆದರೂ ನಾನೂ ಕ್ಷೇತ್ರಕ್ಕೆ ಆದ್ಯತೆ ನೀಡುವದಾದರೆ ಮಾಜಿ ಜಿಪಂ ಸದಸ್ಯ ಪ್ರಕಾಶ ಪಾಟೀಲ್‌ ಜೇರಬಂಡಿಯವರಿಗೆ ಅವಕಾಶ ನೀಡಲು ಮನವಿ ಮಾಡಿದ್ದೆ ಆದರೆ ಪಕ್ಷ ತೀರ್ಮಾನದ ಮೇರೆಗೆ ಕಳೆದ ವಾರ ಅಧಿಕಾರ ಸ್ವೀಕಾರ ಮಾಡಿದ್ದೇನೆ.

ರಾಯಚೂರು ಸಿಂಧನೂರು, ರಾಯಚೂರು-ಮುದಗಲ್‌, ಇಲಕಲ್‌ ರಸ್ತೆಗಳ ನಿರ್ಮಾಣ, ರಾಯಚೂರಲ್ಲಿ ರಿಂಗರೋಡ್‌, ಸಿರವಾರ-ದೇವದುರ್ಗ ರಸ್ತೆ, ದೇವದುರ್ಗ ಪಟ್ಟಣಕ್ಕೆ ಪ್ರವೇಶಿಸುವ 3 ರಸ್ತೆಗಳನ್ನು ಚತುಷ್ಕೋನ ಮಾದರಿ ರಸ್ತೆ ಹಾಗೂ ದೇವದುರ್ಗ ಪಟ್ಟಣದಲ್ಲಿ ಬೈಪಾಸ್‌ ರೋಡ್‌ ನಿರ್ಮಿಸಲು ಚಿಂತನೆ ನಡೆಸಿದ್ದು, ಜಿಲ್ಲೆಯ ಸಂಸದ, ಶಾಸಕರೊಡನೆ ಚರ್ಚಿಸಿ ಕಾಮಗಾರಿಗಳ ನೀಲ ನಕ್ಷೆ ಸಿದ್ದಪಡಿಸಲಾಗುವುದು. ಆ.25,26ರಂದು ನಿಗಮ ಅಧಿಕಾರಿಗಳ ತಂಡ ಜಿಲ್ಲೆಗೆ ಆಗಮಿಸಲಿದ್ದು, ಮೊದಲ ಹಂತದ ಕಾಮಗಾರಿಗಳ ಸ್ಥಿತಿಗತಿ ಪರಿಶೀಲಿಸಲು ಸೂಚಿಸಲಾಗಿದೆ. ದೇವದುರ್ಗ, ಕೊಪ್ಪರ, ಗೂಗಲ್‌, ಸುಂಕೇಶ್ವರಹಾಳ, ಅರಕೇರಾ ಮಾರ್ಗದ ರಸ್ತೆ ನಿರ್ಮಾಣ ಯೋಜನೆ ಬಹುತೇಕ ಪೂರ್ಣಗೊಂಡಿದ್ದು, ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ. ಆದಷ್ಟು ಬೇಗನೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ವಸತಿ ಖಾತೆ ಸಚಿವ ವಿ.ಸೋಮಣ್ಣನವರು ದೇವದುರ್ಗ ಪಟ್ಟಣಕ್ಕೆ ಸ್ಲಂಬೋರ್ಡನಿಂದ 750 ಮನೆಗಳನ್ನು ಮಂಜೂರು ಮಾಡಿದ್ದಾರೆ.

ರಾಯಚೂರು: ಕೋವಿಡ್‌ ಆಸ್ಪತ್ರೆಯಲ್ಲಿ ಹಂದಿಗಳದ್ದೇ ದರ್ಬಾರ್‌, ಸೋಂಕಿತರ ಗೋಳಾಟ..!

ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಜಲಧಾರೆ ಯೋಜನೆಯಲ್ಲಿ ಪ್ರತಿವರ್ಷ ಕುಡಿಯುವ ನೀರಿಗಾಗಿ 1ಕೋಟಿ ಅನುದಾನ ಲಭ್ಯವಿದ್ದು, ತಾಲೂಕಿಗೆ ಮೊದಲ ಹಂತದಲ್ಲಿ 80ಲಕ್ಷ ಹಣ ಬಿಡುಗಡೆಯಾಗಿದೆ. ಕೂಡಲೇ ಅಗತ್ಯ ಗ್ರಾಮಗಳನ್ನು ಗುರುತಿಸಿ, ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ದಪಡಿಸಿ, ಪ್ರತಿ ಮನೆಗೆ ನಳದ ನೀರು ತಲುಪುವಂತಹ ಯೋಜನೆ ಸಾಕಾರಗೊಳ್ಳಲಿದೆ.

ಕಾಲುವೆ ನಿರ್ಮಾಣ ಕಾಮಗಾರಿ ಪರಿಶೀಲನೆ:

ನಾರಾಯಣಪೂರ ಬಲದಂಡೆ ನಾಲೆಯ ಮರುನಿರ್ಮಾಣ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದೆ ಎಂದು ದೂರುಗಳು ಕೇಳಿಬಂದಿವೆ. ಆದರೆ ನೋಡದೇ ಆರೋಪ ಮಾಡುವದಿಲ್ಲ. ಪಾದಯಾತ್ರೆ ಮಾಡುವ ಮೂಲಕ ಕಾಮಗಾರಿಗೆ ಅನುದಾನ ಪಡೆಯಲಾಗಿದೆ. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿಯಾಗಲು ಬಿಡುವುದಿಲ್ಲ. ಮೊದಲ ಹಂತದಲ್ಲಿ ಕೇವಲ 49 ಕಿ.ಮೀ ಕಾಮಗಾರಿಯಾಗಿದೆ ಎಂದು ತಿಳಿದಿರುವೆ. ತಾಂತ್ರಿಕ ಸಲಹೆಗಳನ್ನು ಪಡೆದು, ಕಾಮಗಾರಿಯನ್ನು ಪರಿಶೀಲಿಸಲಾಗುವುದು. ಜೊತೆಗೆ ಎಲ್ಲ ವಿತರಣಾ ಮತ್ತು ಕಿರುಗಾಲುವೆಗಳ ನಿರ್ಮಾಣ ಪ್ರಸಾವನೆ ಕೂಡ ಸರ್ಕಾರದ ಮುಂದಿದೆ.

ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷ ಸಿದ್ದಣ್ಣ ಬಿ.ಗಣೇಕಲ್‌. ನಿರ್ದೇಶಕ ವೆಂಕಟಾಪೂರ ಬಸನಗೌಡಮ ಜಿಪಂ ಮಾಜಿ ಸದಸ್ಯ ಪ್ರಕಾಶ ಪಾಟೀಲ್‌ ಜೇರಬಂಡಿ, ಮುಖಂಡರಾದ ಆರ್‌.ಎಸ್‌.ಪಾಟೀಲ್‌ ನಾಗಡದಿನ್ನಿ, ತಾಯಪ್ಪನಾಯಕ ರಾಮದುರ್ಗ, ಚಂದಪ್ಪ ಬುದ್ದಿನ್ನಿ, ಬಸವರಾಜ ಕೊಪ್ಪರ, ಪುರಸಭೆ ಸದಸ್ಯರಾದ ಜಿ.ಪಂಪಣ್ಣ,ಲಕ್ಷ್ಮಣ ನಾಯಕ, ಮಾಜಿ ಸದಸ್ಯ ಚಂದ್ರಶೇಖರ ಚಲವಾದಿ ಹಾಗೂ ಇತರರು ಇದ್ದರು.

ಅಭಿವೃದ್ಧಿಗೆ ಅಡ್ಡಿಪಡಿಸಿದರೆ ಸಹಿಸಲ್ಲ

ಹಿಂದಿನ ಸರಕಾರದ ಅವಘಡದಿಂದ ಆರ್ಥಿಕ ಸಂಕಷ್ಟದ ಜೊತೆಗೆ ಪ್ರವಾಹ, ಕೊರೋನಾದಂತಹ ಸಮಸ್ಯೆಗಳನ್ನು ಎದರಿಸುತ್ತಿರುವ ಸರ್ಕಾರದಲ್ಲಿ ಅನುದಾನ ತರುವುದೆಂದರೆ ಸಣ್ಣ ಸಾಹಸವಲ್ಲ. ಆದರೆ ಕಾಮಗಾರಿಗಳ ನಿರ್ಮಾಣಕ್ಕೆ ಅಡ್ಡಿಪಡಿಸಿದರೆ ಸಹಿಸಲು ಆಗುವುದಿಲ್ಲ. ಬುಂಕಲದೊಡ್ಡಿ ಪ್ರಕರಣದಲ್ಲಿ ದೌರ್ಜನ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂತು. ಮನಸ್ಸಿಗೆ ನೋವಾಯಿತು. ನನ್ನದೇನು ಸ್ವಾರ್ಥವಿದೆ. ಆದರೆ ಅಲ್ಲಿ ವಾಸಿಗಳ ಬೇಡಿಕೆ ಆಧರಿಸಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದ ಅವರು, ವಿರೋಧ ಪಕ್ಷಗಳು ಅಭಿವೃದ್ಧಿಗೆ ಸಹಕರಿಸಬೇಕು. ಸಕಾರಾತ್ಮಕ ಸಲಹೆ, ಸೂಚನೆಗಳನ್ನು ಕೊಡಲಿ ಸ್ವಾಗತಿಸುವೆ ಎಂದು ಶಾಸಕ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ. ಶಿವನಗೌಡನಾಯಕ ತಿಳಿಸಿದರು. 

Latest Videos
Follow Us:
Download App:
  • android
  • ios