ಸೂಲಿಬೆಲೆ [ಡಿ.16]:  ಉಪ ಚುನಾವಣೆಯ ವೇಳೆ ಸರ್ಕಾರದಿಂದ ಅನೇಕ ರೀತಿಯ ಒತ್ತಡಗಳಿದ್ರೂ, ಜಾತಿ ಜನಾಂಗಕ್ಕೊಬ್ಬ ನಾಯಕರು ಬಂದು ಮತಯಾಚಿಸಿ ಕಾಸಿನ ಹೊಳೆ ಹರಿಸಿದ್ರೂ ಕ್ಷೇತ್ರದ ಮತದಾರರು ಒಗ್ಗಟ್ಟಾಗಿ ರಾಜ್ಯ 15 ಕ್ಷೇತ್ರಗಳ ಉಪ ಚುನಾವಣೆಯ ಪೈಕಿ ಅನರ್ಹನನ್ನು ಸೋಲಿಸಿ ಸ್ವಾಭಿಮಾನಕ್ಕೆ ಒತ್ತು ಕೊಟ್ಟು ನನ್ನ ಗೆಲ್ಲಿಸಿ ಇಡೀ ರಾಜ್ಯಕ್ಕೆ ಹೊಸಕೋಟೆ ಮತದಾರರು ತಮ್ಮ ಸ್ವಾಭಿಮಾನವನ್ನು ಎತ್ತಿ ತೋರಿಸಿದ್ದಾರೆ ಎಂದು ಹೊಸಕೊಟೆ ಶಾಸಕ ಶರತ್‌ ಬಚ್ಚೇಗೌಡ ಹೇಳಿದರು.

ಸೂಲಿಬೆಲೆ ಹೋಬಳಿ ರಾಂಪುರ, ಕದನಪುರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡೈರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಹೈನುಗಾರಿಕೆಯನ್ನು ನಂಬಿರುವ ರೈತರ ರಾಸುಗಳಿಗೆ ಮೇವು ಮತ್ತಿತ್ತರ ಆಹಾರ ಪದಾರ್ಥಗಳನ್ನು ಹೊರಗಿನ ಭಾಗದಿಂದ ತರಿಸಿ ಗ್ರಾಮೀಣ ಭಾಗಕ್ಕೆ ಪೂರೈಕೆ ಮಾಡುವ ಸ್ಥಿತಿಯಿದಂದ. ರೈತರ ಅನುಕೂಲಕ್ಕಾಗಿ ಹೊಸಕೋಟೆ ಭಾಗದಲ್ಲಿ ರಾಸುಗಳಿಗೆ ಆಹಾರ ತಯಾರಿಕೆ ಘಟಕವನ್ನು ಸ್ಥಾಪನೆ ಮಾಡಬೇಕು ಎನ್ನುವ ಕನಸಿನೊಂದಿಗೆ ಚುನಾವಣೆಯ ಸಮಯದಲ್ಲಿ ಭರವಸೆಯನ್ನು ನೀಡಲಾಗಿತ್ತು. ಅದರಂತೆ ಶೀಘ್ರ ಹೊಸಕೋಟೆ ಭಾಗದಲ್ಲಿ 20 ಎಕರೆ ಜಮೀನು ಗುರ್ತಿಸಿ, ಬೆಂಗಳೂರು ಹಾಲು ಒಕ್ಕೂಟದ ಸಹಾಯದಿಂದ ಪಶು ಆಹಾರ ಘಟಕ ಸ್ಥಾಪನೆಗೆ ಒತ್ತು ನೀಡಲಾಗುವುದು. ಕ್ಷೇತ್ರದಲ್ಲಿ ಶಾಶ್ವತ ಅಭಿವೃದ್ಧಿ ಕೆಲಸಗಳಿಗೆ ಗಮನಹರಿಸಬೇಕಿದೆ.

ಕಳೆದ ಆರೇಳು ವರ್ಷದಲ್ಲಿ ಹೊಸಕೋಟೆ ತಾಲೂಕಿನಲ್ಲಿ ಪ್ಯಾಚ್‌ ವರ್ಕ ಡೆವಲಪ್‌ಮೆಂಟ್‌ ಆಗಿದ್ದು, ಇನ್ನೂ ತಾಲೂಕಿನಲ್ಲಿ ಶಾಶ್ವತ ಅಭಿವೃದ್ಧಿ ಕೆಲಸಗಳಾಗಬೇಕಿದೆ. ಒಕ್ಕೂಟದಿಂದ ಸಿಗುವ ಶಾಶ್ವತ ಕೆಲಸಗಳಿಗೆ ಒತ್ತು ನೀಡಿದರೆ, ರೈತರಿಗೆ ಅನುಕೂಲವಾಗಿ, ನಿರುದ್ಯೋಗಿ ಯುವಕರಿಗೆ ಉದ್ಯೋಗಗಳು ಸಿಗಲು ಅನುಕೂಲವಾಗುತ್ತದೆ.

ರಾಂಪುರ ಗ್ರಾಮಸ್ಥರ ಬೇಡಿಕೆಯಂತೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ರಸ್ತೆ ಅಭಿವೃದ್ಧಿ ಕೆಲಸವನ್ನು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಹಿರಿಯ ಮುಖಂಡ ಬಿ.ಎನ್‌. ಗೋಪಾಲಗೌಡ ಮಾತನಾಡಿ, ಕಳೆದ ಉಪ ಚುನಾವಣೆಯಲ್ಲಿ ಕ್ಷೇತ್ರದ ಎಲ್ಲ ಮತದಾರರು ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ತೆರೆಯಲಾಯಿತು. ಜನರ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಂಡು ಹೋಗುವಂತಹ ಕೆಲಸ ನೂತನ ಶಾಸಕರಿಂದ ಆಗುತ್ತದೆ ಎಂದರು.

ಕಾಂಗ್ರೆಸಿಗೆ ಬೆಂಬಲ ಸುಳ್ಳು ಎಂದ ಶರತ್ : ಮುಂದಿನ ನಡೆ ಏನು?...

ಬೆಂಗಳೂರು ಹಾಲು ಒಕ್ಕೂಟ ಮಾಜಿ ಅಧ್ಯಕ್ಷ ಹಲ್ಲೂರು ಸಿ. ಮಂಜುನಾಥ್‌ ಮಾತನಾಡಿ, ಪಶು ಆಹಾರ ಘಟಕ ಸ್ಥಾಪನೆಗೆ ಒಕ್ಕೂಟದಿಂದ ಸ್ಥಳವನ್ನು ಕೇಳಲಾಗಿದæ. ಹೊಸಕೋಟೆ ಭಾಗದಲ್ಲಿ 20 ಎಕೆರೆ ಜಮೀನು ಗುರ್ತಿಸಿಕೊಟ್ಟರೆ ಒಕ್ಕೂಟದಿಂದ ರೈತರ ಅನುಕೂಲಕ್ಕೆ ಪಶು ಘಟಕ ಸ್ಥಾಪನೆ ಮಾಡಲಾಗುವುದು. ಇದರಿಂದ ಈ ಭಾಗದಲ್ಲಿ ರೈತರಿಗೆ ಅನುಕೂಲವಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅನುಕೂಲವಾಗಲಿದೆ.

ಗುಣಮಟ್ಟದ ಹಾಲು ಪೂರೈಕೆಯಿಂದ ಹೆಚ್ಚಿನ ಲಾಭ ಪಡೆಯಬಹುದು. ಗ್ರಾಮದಲ್ಲಿ ಶಾಲೆ, ದೇಗುಲ, ಡೇರಿ ಈ ಮೂವರನ್ನು ಸ್ವಚ್ಛವಾಗಿಟ್ಟುಕೊಂಡು ಪ್ರಗತಿ ಕಾಣಬೇಕು. ಒಕ್ಕೂಟದಿಂದ ರಿಯಾಯಿತಿ ದರದಲ್ಲಿ ಹಲವು ಸವಲತ್ತುಗಳನ್ನು ಡೇರಿಯಿಂದ ನೀಡಲಾಗುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು. ಹೊಸಕೋಟೆ ಹಾಲು ಪ್ಯಾಕಿಂಗ್‌ ಘಟಕದಲ್ಲಿ ಇನ್ನೂ .5 ಕೋಟಿ ವೆಚ್ಚದಲ್ಲಿ ಹಲವು ಅಭಿವೃದ್ಧಿ ಕೆಲಸಗಳಿಗೆ ಟೆಂಡರ್‌ ಕರೆಯಲಾಗಿದೆ ಎಂದರು.

ಸೂಲಿಬೆಲೆ ಸಹಕಾರ ಸಂಘದ ಅಧ್ಯಕ್ಷ ಬಿ.ವಿ. ಸತೀಶ್‌ ಗೌಡ, ಹೊಸಕೋಟೆ ಶಿಬಿರದ ಉಪ ವ್ಯವಸ್ಥಾಪಕ ಶಿವಾಜಿ ನಾಯಕ್‌, ಡೇರಿ ಅಧ್ಯಕ್ಷ ಅಶ್ವಥ್‌ ನಾರಾಯಣ್‌, ರುದ್ರಮರಿ, ಕಮ್ಮಸಂದ್ರ ವಸಂತ್‌ ಕುಮಾರ್‌, ಸೊಣ್ಣಳೀಪುರ ಶ್ರೀನಿವಾಸ ಮೂರ್ತಿ, ಅಂಕೋನಹಳ್ಳಿ ಸೀನಪ್ಪ, ಅರಸನಹಳ್ಳಿ ಶಿವಣ್ಣ, ಬಾಜಿ, ಹೊಸಕೋಟೆ ಶಿಬಿರದ ಮಂಜುನಾಥ ಸ್ವಾಮಿ, ವೆಂಕಟೇಶಪ್ಪ, ವಿಜಯ ಭಾಸ್ಕರ್‌, ಡಾ. ಮಂಜುನಾಥ್‌, ಚಂದ್ರಶೇಖರ್‌, ತಿಮ್ಮಸಂದ್ರ ವಿಜಿ, ರಾಂಪುರ ವೆಂಕಟರಾಮ್‌ ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದ್ದರು.