ಪಿಪಿಇ ಕಿಟ್‌ ಧರಿಸಿ ಆಸ್ಪತ್ರೆಗೆ ಶಾಸಕ ಶರತ್‌ ಬಚ್ಚೇಗೌಡ ಭೇಟಿ| ಕೊರೋನಾ ನಿಯಮ ಪಾಲಿಸಲು ಸೂಚನೆ| ಲಸಿಕೆ ಕೊರತೆ ಬಗ್ಗೆ ಸಂಬಂಧಪಟ್ಟ ಅ​ಧಿಕಾರಿಗಳೊಂದಿಗೆ ಚರ್ಚಿಸಿ ಸರಬರಾಜಿಗೆ ಆದ್ಯತೆ ನೀಡಲಾಗುವುದು| ಎರಡನೇ ಬಾರಿಗೆ ಕೋವ್ಯಾಕ್ಸಿನ್‌ ಲಸಿಕೆ ಪಡೆದುಕೊಳ್ಳುವವರಿಗೆ ಅತಿ ಶೀಘ್ರವಾಗಿ ಲಸಿಕೆ ಹಾಕಿಸಲು ವ್ಯವಸ್ಥೆ: ಬಚ್ಚೇಗೌಡ| 

ಹೊಸಕೋಟೆ(ಮೇ.03): ನಗರದ ತಾಲೂಕು ಆಸ್ಪತ್ರೆಗೆ ಶಾಸಕ ಶರತ್‌ ಬಚ್ಚೇಗೌಡ ಭೇಟಿ ನೀಡಿ ಆಸ್ಪತ್ರೆಯ ವೈದ್ಯರೊಂದಿಗೆ ಕೊರೋನಾ ನಿಯಂತ್ರಣದ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದೇ ವೇಳೆ ಪಿಪಿಇ ಕಿಟ್‌ ಧರಿಸಿ ಕೋವಿಡ್‌ ವಾರ್ಡ್‌ಗೆ ತೆರಳಿ ಸೋಂಕು ಹರಡಿ ದಾಖಲಾಗಿರುವ ರೋಗಿಗಳ ಆರೋಗ್ಯ ವಿಚಾರಣೆ ನಡೆಸಿ, ಯಾವುದೆ ರೀತಿಯ ಆತಂಕಕ್ಕೆ ಒಳಗಾಗಬಾರದೆಂದು ಆತ್ಮಸ್ಥೈರ್ಯ ತುಂಬಿದ್ದಾರೆ.

ಬಳಿಕ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದು, ಪೌಷ್ಠಿಕವಾದ ಆಹಾರವನ್ನು ಸಹ ನೀಡುತ್ತಿದ್ದಾರೆ. ಕಳೆದ 15 ದಿನಗಳಿಂದ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳ ಪೈಕಿ ಯಾರೊಬ್ಬರು ಮೃತಪಟ್ಟಿಲ್ಲ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಇಲ್ಲಿನ ವೈದ್ಯರು, ಆರೋಗ್ಯ ಕಾರ್ಯಕರ್ತೆಯರು ಪ್ರಾಮಾಣಿಕವಾಗಿ, ಶ್ರಮವಹಿಸಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಎಂದು ವೈದ್ಯರ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಕೊರೋನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿರುವ ಕಾರಣ ಕೊರೋನಾ ನಿಯಂತ್ರಣದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಿದೆ ಎಂದರು.

"

ಉಗುರು ಬೆಚ್ಚನ್‌ ನೀರ್‌ ಕುಡೀರಿ, ಹೆದ್ರಬ್ಯಾಡ್ರಿ: ಸೋಂಕಿತರಿಗೆ ಧೈರ್ಯ ತುಂಬಿದ HK ಪಾಟೀಲ್‌

ಓಎಚ್‌ಓ ಕಚೇರಿ ಸ್ಥಳಾಂತರ:

ತಾಲೂಕು ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ತಾಲೂಕು ಆರೋಗ್ಯಾ​ಧಿಕಾರಿಗಳ ಕಚೇರಿಯನ್ನು ನಗರದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಮಳಿಗೆಗೆ ಸ್ಥಳಾಂತರ ಮಾಡಿಸಿ, ಖಾಲಿಯಾಗುವ ಕೊಠಡಿಯಲ್ಲಿ ಕೊರೋನಾ ಸೋಂಕಿತರಿಗೆ ಪ್ರತ್ಯೇಕವಾಗಿ 10 ಆಕ್ಸಿಜನ್‌ ಬೆಡಗಳ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಕೊರೋನಾ ಸೋಂಕಿತರಿಗೆ ಮತ್ತಷ್ಟುಅನುಕೂಲ ಆಗಲಿದೆ ಎಂದರು. ತಾಲೂಕು ಆರೋಗ್ಯಾ​ಧಿಕಾರಿ ಡಾ.ಉಮೇಶ್‌, ಆಡಳಿತ ವೈದ್ಯಾಧಿ​ಕಾರಿ ಡಾ.ಸತೀಶ್‌, ಹಿರಿಯ ಆರೋಗ್ಯ ನಿರೀಕ್ಷಕ ಗುರುರಾಜ್‌ ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.

ತಾಲೂಕಿನಲ್ಲಿ ಕೋವ್ಯಾಕ್ಸಿನ್‌ ಲಸಿಕೆ ಕೊರತೆ ಇದೆ. ಪ್ರಥಮ ಬಾರಿಗೆ ಲಸಿಕೆ ಹಾಕಿಸಿಕೊಂಡವರು, ಎರಡನೇ ಬಾರಿಗೂ ಇದೆ, ಲಸಿಕೆ ಹಾಕಿಸಿಕೊಳ್ಳಬೇಕಾಗಿದೆ. ಪ್ರಸ್ತುತ ಕೋವಿಶೀಲ್ಡ್‌ ಲಸಿಕೆ ಹಾಕಲಾಗುತ್ತಿದೆ. ಎರಡನೇ ಬಾರಿಗೆ ಕೋವ್ಯಾಕ್ಸಿನ್‌ ಲಸಿಕೆ ಪಡೆದುಕೊಳ್ಳುವವರಿಗೆ ಅತಿ ಶೀಘ್ರವಾಗಿ ಲಸಿಕೆ ಹಾಕಿಸಲು ವ್ಯವಸ್ಥೆ ಕಲ್ಪಿಸಲಾಗುವುದು. ಲಸಿಕೆ ಕೊರತೆ ಬಗ್ಗೆ ಸಂಬಂಧಪಟ್ಟ ಅ​ಧಿಕಾರಿಗಳೊಂದಿಗೆ ಚರ್ಚಿಸಿ ಸರಬರಾಜಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona