ಮೈಸೂರು(ಫೆ.08): ಸಂಪುಟ ವಿಸ್ತರಣೆಗೆ ನಡೆದ ಸರ್ಕಸ್ ರಾಜ್ಯದ ಜನರಿಗೆ ಗೊತ್ತು. ಹಾಗೂ ಹೀಗೂ 10 ಜನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದೂ ಆಯಿತು. ಆದರೆ ಈಗ ಶಾಸಕ ರಾಮ್‌ದಾಸ್ ಪ್ರೇಯಸಿ ಪ್ರೇಮಾ ಕುಮಾರಿ ಸಿಎಂ ವಿರುದ್ಧ ಫುಲ್ ಗರಂ ಆಗಿದ್ದಾರೆ.

ಶಾಸಕ ರಾಮ್‌ದಾಸ್ ಪ್ರೇಯಸಿ‌‌‌ ಪ್ರೇಮ ಕುಮಾರಿ ಮತ್ತೊಮ್ಮೆ ಸದ್ದು ಮಾಡಿದ್ದು, ವಿಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿ ಶಾಸಕ‌ ರಾಮ್‌ದಾಸ್‌ಗೆ ಸ್ಥಾನ ಸಿಗದ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿರುವ ಪ್ರೇಮಾ ಕುಮಾರಿ ತಮಗೆ ಅನ್ಯಾಯವಾಗಿರುವುದಾಗಿ ಆರೋಪಿಸಿದ್ದಾರೆ.

ರಾಮ - ಪ್ರೇಮ : ಡ್ರಾಮಾ..!

ರಾಮ್‌ದಾಸ್‌ಗೆ ಸಚಿವ ಸ್ಥಾನ ಮಿಸ್ ಆಗೋದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಕಾರಣ ಎಂದು ಪ್ರೇಮ ಕುಮಾರಿ ಕೂಗಾಡಿದ್ದಾರೆ. ನನ್ನ ಕಾರಣ ಮುಂದಿಟ್ಟುಕೊಂಡು ಯಡಿಯೂರಪ್ಪ ರಾಮ್‌ದಾಸ್‌ಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ. ಆ ಮೂಲಕ ನಮ್ಮ ಕುಟುಂಬ ಹಾಗೂ ರಾಮ್‌ದಾಸ್ ಅವರನ್ನು ತುಳಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವೀರಶೈವ ಲಿಂಗಾಯತ ವ್ಯಕ್ತಿಯಾಗಿ ವೀರಶೈವ ಲಿಂಗಾಯತ ಕುಟುಂಬದ ಹೆಣ್ಣುಮಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಯಡಿಯೂರಪ್ಪ ನಾಲಾಯಕ್ ಮುಖ್ಯಮಂತ್ರಿ ಎಂದು ಪ್ರೇಮ ಕುಮಾರಿ ಸಿಕ್ಕಾಪಟ್ಟೆ ಕೂಗಾಡಿದ್ದಾರೆ.

ಸಚಿವ ಸಂಪುಟ ಸರ್ಕಸ್; ಹೈಕಮಾಂಡ್ ಮಟ್ಟದಲ್ಲಿ ರಾಮ್‌ದಾಸ್ ಲಾಬಿ!

ನಮ್ಮದು ವಯಕ್ತಿಕ ವಿಚಾರ. ಯಡಿಯೂರಪ್ಪ ತಮ್ಮ ಶಿಷ್ಯನ ಮೂಲಕ ರಾಮ್‌ದಾಸ್ ಹಾಗೂ ನನ್ನನ್ನು ದೂರ ಮಾಡಿದ್ದಾರೆ. ನಾನು ಎಲ್ಲಾ ದಾಖಲೆ ಇಟ್ಟುಕೊಂಡಿದ್ದು, ಕೋರ್ಟ್‌ನಲ್ಲಿ ನನಗೆ ನ್ಯಾಯ ಸಿಗುತ್ತೆ. ರಾಮ್‌ದಾಸ್ ಗೆ ಹೈಕಮಾಂಡ್ ನಲ್ಲಿ‌ ಎಂತಾ ಶಕ್ತಿ ಇದೆ ಅಂತ ಗೊತ್ತಿದೆ. ವೀರಶೈವ ಲಿಂಗಾಯತ ಹೆಣ್ಣುಮಗಳಿಗೆ ನ್ಯಾಯ ಕೊಡಿಸಲಾರದ ಇವರು ಮುಖ್ಯಮಂತ್ರಿ ಸ್ಥಾನದಲ್ಲಿ ಇರಬೇಕ ಎಂದು ಅವರು ಪ್ರಶ್ನಿಸಿದ್ದಾರೆ. 9.21ನಿಮಿಷ ವೀಡಿಯೋ ಮಾಡಿ ಸಿಎಂ ವಿರುದ್ಧ ಹಿಗ್ಗಾ ಮುಗ್ಗ ವಾಗ್ದಾಳಿ ನಡೆಸಿರುವ ಪ್ರೇಮಾಕುಮಾರಿ ಅದನ್ನು ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡಿದ್ದಾರೆ.