BSY ವಿರುದ್ಧ ಯಾವುದೇ ಯಾವುದೇ ಚಟುವಟಿಕೆಗಳು ನಡೆದಿಲ್ಲ: ಶಾಸಕ ರಾಜೂಗೌಡ
ಪಕ್ಷದ ವಿರುದ್ಧ ಚಟುವಟಿಕೆ ನಡೆದಿಲ್ಲ: ಶಾಸಕ ರಾಜೂಗೌಡ| ಊಟಕ್ಕೆಂದು ಎಲ್ಲರೂ ಸೇರಿದ್ದೆವು: ಬಿಎಸ್ವೈ ವಿರುದ್ಧ ಚರ್ಚೆಯಾಗಿಲ್ಲ| ಸಭೆಗೆ ನನಗೂ ಬುಲಾವ್ ಬಂದಿತ್ತು, ಆದ್ರೆ ಹೋಗ್ಲಿಲ್ಲ : ಯಾದಗಿರಿ ಮುದ್ನಾಳ್|
ಯಾದಗಿರಿ(ಮೇ.30): ಪಕ್ಷದ ವಿರುದ್ಧವಾಗಲೀ ಅಥವಾ ಬಿಎಸ್ವೈ ವಿರುದ್ಧ ಯಾವುದೇ ಚಟುವಟಿಕೆಗಳು ನಡೆದಿಲ್ಲ ಎಂದು ಸುರಪುರದ ಶಾಸಕ, ಬಿಜೆಪಿಯ ನರಸಿಂಹನಾಯಕ್ (ರಾಜೂಗೌಡ) ಪ್ರತಿಕ್ರಿಯಿಸಿದ್ದಾರೆ. ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆದಿದ್ದು, ಸಿಎಂ ಬಿಎಸ್ವೈ ವಿರುದ್ಧ ಉತ್ತರ ಕರ್ನಾಟಕ ಶಾಸಕರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬುದಾಗಿ ಶುಕ್ರವಾರ ನಡೆದ ಚರ್ಚೆಗಳ ಕುರಿತು ರಾಜೂಗೌಡ ಪ್ರತಿಕ್ರಿಯಿಸಿದರು.
ಶುಕ್ರವಾರ ಸಂಜೆ ತಮ್ಮನ್ನು ಸಂಪರ್ಕಿಸಿದ ’ಕನ್ನಡಪ್ರಭ’ದೊಡನೆ ಮಾತನಾಡಿದ ಅವರು, ಉಮೇಶ ಕತ್ತಿಯವರ ಆಹ್ವಾನದ ಮೇರೆಗೆ ಸಹಜವಾಗಿ ಊಟಕ್ಕೆಂದು ಹೋಗಿದ್ದೆವು. ಶಾಸಕ ಯತ್ನಾಳ್ ಸಹ ಹೇಳಿದ್ದರಿಂದ ಹೋಗಿದ್ದೆ, ಅಲ್ಲಿ ಸರ್ಕಾರದ ವಿರುದ್ಧ ಯಾವುದೇ ಚರ್ಚೆ ನಡೆದಿಲ್ಲ. ಆದರೆ, ಹೊರಬಂದ ನಂತರ ಈ ಬಗ್ಗೆ ವಾತಾವರಣ ಬೇರೆಯದ್ದೇ ಆಗಿತ್ತು. ಇದು ಸರಿಯಲ್ಲ ಎಂದ ಅವರು, ಯತ್ನಾಳ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕೆಲವರ ಹೇಳಿಕೆಗಳಿಂದ ಗೊಂದಲ ಸೃಷ್ಟಿಯಾಗಿದೆ ಎಂದರು.
ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: 'ಉಮೇಶ್ ಕತ್ತಿ ಪಕ್ಷದ ವೇದಿಕೆಯಲ್ಲಿ ಮಾತನಾಡಲಿ'
ಸಭೆಗೆ ನನಗೂ ಬುಲಾವ್ ಬಂದಿತ್ತು: ಮುದ್ನಾಳ್
ಇನ್ನು, ಸಭೆಗೆ ತಮಗೂ ಬುಲಾವ್ ಬಂದಿತ್ತು ಎಂದ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್, ಕೊರೋನಾ ತಡೆಗಟ್ಟುವ ವಿಚಾರದಲ್ಲಿ ಇಲ್ಲಿ ಕೆಲಸ ಇದ್ದಿದ್ದರಿಂದ ಬರೋದು ಆಗೋಲ್ಲ ಎಂದಿದ್ದೆ. ನಾಯಕತವ ಬದಲಾವಣೆ ಹಾಗೂ ಸರ್ಕಾರ ಬೀಳಿಸುವ ಪ್ರಸ್ತಾಪ ಇರಲಿಲ್ಲ. ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ ಎಂದು ಸಭೆ ನಡೆಸೋದಾಗಿ ಹೇಳಿದ್ದರು. ಕೊರೋನಾದಿಂದಾಗಿ ಅಭಿವೃದ್ಧಿ ಕೆಲಸಗಳು ನಿಂತಿವೆಯಷ್ಟೇ ಎಂದರು. ಕೋವಿಡ್ ತಡೆಗಟ್ಟುವ, ರೈತರ ಹಾಗೂ ಕುಡಿಯುವ ನೀರು ವಿಚಾರದಲ್ಲಿ ಯೋಚಿಸಬೇಕಿದೆ ಎನ್ನುವ ಮೂಲಕ ಶಾಸಕ ಮುದ್ನಾಳ್ ಅತೃಪ್ತರಿಗೆ ಟಾಂಗ್ ನೀಡಿದಂತಿತ್ತು.