'ಕಲ್ಯಾಣ ಕರ್ನಾಟಕಕ್ಕೆ 500 ಕೋಟಿಗೂ ಹೆಚ್ಚು ಬಿಡುಗಡೆ'
ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ಅನುದಾನ: ಶಾಸಕ ರಾಜೂಗೌಡ| ಯಾದಗಿರಿ ಜಿಲ್ಲೆಯ ಸುರಪುರಕ್ಕೆ 240 ಕೋಟಿ,ಶಹಾಪೂರ 68 ಕೋಟಿ| ಬೀದರ್ ಜಿಲ್ಲೆಯ ಔರಾದ್‌ಗೆ 70 ಕೋಟಿ| ಕಲಬುರಗಿ ಜಿಲ್ಲೆಯ ಅಫಜಲ್ಪುರಕ್ಕೆ 88 ಕೋಟಿ, ಆಳಂದ 80 ಕೋಟಿ ರು. ಬಿಡುಗಡೆ|
ಸುರಪುರ(ಸೆ.19): ಶಾಶ್ವತ ಕುಡಿಯುವ ನೀರಿಗಾಗಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ 500 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ನಗರ ನೀರು ಪೂರೈಕೆ ಮತ್ತು ಒಳಚರಂಡಿ ನಿಗಮದ ಅಧ್ಯಕ್ಷ, ಶಾಸಕ ನರಸಿಂಹನಾಯಕ (ರಾಜೂಗೌಡ) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಯ ಸುರಪುರಕ್ಕೆ 240 ಕೋಟಿ, ಶಹಾಪೂರ 68 ಕೋಟಿ, ಬೀದರ್ ಜಿಲ್ಲೆಯ ಔರಾದ್‌ಗೆ 70 ಕೋಟಿ, ಕಲಬುರಗಿ ಜಿಲ್ಲೆಯ ಅಫಜಲ್ಪುರಕ್ಕೆ 88 ಕೋಟಿ, ಆಳಂದ 80 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಪರಿಶೀಲಿಸಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸುರಪುರ ನಗರಕ್ಕೆ 240 ಕೋಟಿ ರು.:
ಸುರಪುರ ನಗರದಲ್ಲಿ 15 ದಿನಕ್ಕೊಮ್ಮೆ ನೀರು ಬಿಡಲಾಗುತ್ತದೆ. ಸಾರ್ವಜನಿಕರಿಂದ ಬಹಳಷ್ಟುದೂರು ಬಂದಿವೆ. ಹೀಗಾಗಿ 240 ಕೋಟಿ ರು. ಬಿಡುಗಡೆ ಮಾಡಲಾಗಿದ್ದು, ಇನ್ನೂ 35 ವರ್ಷ ನೀರಿನ ಮಸ್ಯೆ ಇಲ್ಲದಂತೆ ವ್ಯವಸ್ಥೆ ಮಾಡಲಾಗುವುದು. ತಾಲೂಕಿಗೆ ಯಾರೇ ಶಾಸಕರಾದರೂ ಕುಡಿಯುವ ನೀರಿಗೆ ತೊಂದರೆಯಾಗಬಾರದು. ನಗರ ಕುಡಿಯುವ ಯೋಜನೆಗೆ ಕವಡಿಮಟ್ಟಿ, ಖಾನಾಪುರ ಎಸ್.ಎಚ್.ಗ್ರಾಮಗಳನ್ನು ಸೇರ್ಪಡಿಸಿಕೊಳ್ಳಲಾಗುವುದು. ಮುಂಬರುವ ದಿನಗಳಲ್ಲಿ ಕಕ್ಕೇರಾ, ಹುಣಸಗಿ ಭಾಗದಲ್ಲಿಯೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಸುರಪುರ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆಗೆ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. 4 ತಿಂಗಳ ಕಾಲ ನದಿಯಲ್ಲಿ ಇರುವುದಿಲ್ಲ. ಪ್ರವಾಹ ಉಂಟಾದಾಗ ಸಮಸ್ಯೆ ತಲೆದೋರುತ್ತದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪರದಾಟ ನಡೆಯುತ್ತದೆ. ಇದೆಲ್ಲವನ್ನು ಗಮನಿಸಿ 72 ಎಕರೆ ಜಮೀನನನ್ನು ಖರೀದಿಸಲಾಗುತ್ತದೆ. ಅಲ್ಲಿ ನೀರಿನ ಸಂಗ್ರಹ ಮಾಡಿ ಶಾಶ್ವತ ಕುಡಿಯುವ ನೀರಿನ್ನು ಒದಗಿಸುವ ಯೋಜನೆ ಕೈಗೊಳ್ಳಲಾಗುತ್ತದೆ ಎಂದರು.
ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ದೇವಿಗೆ ಚೀಟಿ ಬರೆದ ಶ್ರೀರಾಮುಲು?
ಇತ್ತೀಚೆಗೆ ಕೋವಿಡ್ ಸೋಂಕಿಗೆ ಬಲಿಯಾದ ಮೂವರು ಪತ್ರಕರ್ತರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ ಮೂರು ಲಕ್ಷ ರು. ಬಿಡುಗಡೆ ಮಾಡಿಸಲಾಗಿದೆ. ನಾನೂ ಸಹ ವೈಯಕ್ತಿಕವಾಗಿ ತಲಾ 50 ಸಾವಿರ ರು. ನೀಡುವೆ ಎಂದು ಸುರಪುರ ಶಾಸಕ ರಾಜೂಗೌಡ ಅವರು ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಎಸ್‌ಸಿ, ಎಸ್‌ಟಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮೊಬೈಲ್ ನೀಡಲಾಗುವುದು ಎಂಬ ಹೇಳಿಕೆ ನೀಡಿದ್ದಾರೆ. ಎಸ್‌ಸಿ, ಎಸ್‌ಟಿ, ಹಿಂದುಳಿದವರು, ಮೇಲ್ವರ್ಗದವರು ಎಂದು ಭೇದ ಭಾವ ಸೃಷ್ಟಿಸುವುದು ಬೇಡ. ಎಲ್ಲ ವಿದ್ಯಾರ್ಥಿಗಳಿಗೂ ಮೊಬೈಲ್ ನೀಡಬೇಕು. ಇದಕ್ಕೆ ನಮ್ಮ ಸಹಮತವಿದೆ. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ನ್ಯಾಯ ದೊರೆಯಬೇಕು ಎಂದು ಶಾಸಕ ರಾಜೂಗೌಡ ಹೇಳಿದರು.