ಶಿರಾ (ನ.12):  ಶಿರಾ ಕ್ಷೇತ್ರದ ಅನ್ನದಾತ ಮತ್ತು ಜನ ಸಾಮಾನ್ಯರ ದಶಕಗಳ ಬೇಡಿಕೆಯಾದ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರದ ಮೇಲೆ ಒತ್ತಡ ಹೇರಿ, ಸರ್ಕಾರದಲ್ಲಿ ಆದೇಶ ಮಾಡಿಸಿ ನೀರು ಹರಿಸಿ ಎಂದು ಶ್ರೀಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಅವರು ನೂತನ ಶಾಸಕ ರಾಜೇಶಗೌಡ ಅವರಿಗೆ ಕಿವಿಮಾತು ಹೇಳಿದರು.

ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಸ್ಪಟಿಕಪುರಿ ಮಹಾ ಸಂಸ್ಥಾನ ಮಠಕ್ಕೆ ಭೇಟಿ ನೀಡಿದ್ದ ನೂತನ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡರಿಗೆ ಆಶೀರ್ವದಿಸಿ ಮಾತನಾಡಿದರು.

ಜನ ಸೇವೆ ಮಾಡ ಬೇಕೆಂಬ ಇಚ್ಚಾಶಕ್ತಿ ಇದ್ದರೆ ಎಲ್ಲಾ ಜನಪರ ಕಾರ್ಯಗಳು ಯಶಸ್ವಿಯಾಗಲಿವೆ. ಈ ನಿಟ್ಟಿನಲ್ಲಿ ಹೆಚ್ಚು ಬದ್ದತೆಯಿಂದ ಕಾರ್ಯೋನ್ಮುಖರಾಗ ಬೇಕು ಎಂದು ನೂತನ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡರಿಗೆ ಕಿವಿಮಾತು ಹೇಳಿದರು.

ಬಿಜೆಪಿಗಾಗಿ ದುಡಿದ ಮತ್ತೋರ್ವ ಮುಖಂಡಗೆ ಸಚಿವ ಸ್ಥಾನ : ಸಿಎಂ ಆಪ್ತರಿಂದಲೇ ವಿರೋಧ ...

ಶಿರಾ ಕ್ಷೇತ್ರದಲ್ಲಿ ಜನ ಸಾಮಾನ್ಯರ ನಾಡಿತ ಅರಿತು ಕೆಲಸ ಮಾಡಬೇಕು. ಜನ ಸಾಮಾನ್ಯರ ಕಷ್ಟಗಳಿಗೆ ನಿತ್ಯ ಸ್ಪಂ​ಸುವಂತ ಸೇವೆ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿದೆ. ಮದಲೂರು ಕೆರೆ ತುಂಬಿಸಿದಾಗ ನೂರಾರು ಗ್ರಾಮಗಳ ಅಂತರ್ಜಲಮಟ್ಟವೃದ್ಧಿಯಾಗಲಿದ್ದು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೂರಕಲಿದೆ ಎಂದರು.

ನೂತನ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಕೊಟ್ಟಮಾತಿನಂತೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಉದ್ದೇಶದಿಂದ ಕಾಲುವೆ ಸ್ವಚ್ಛತೆ ಕಾರ್ಯ ನಡೆಸುವ ಶೀಘ್ರ ಪ್ರಾರಂಭವಾಗಲಿದೆ. ಅತಿಶೀಘ್ರವಾಗಿ ಕೆರೆಗೆ ನೀರು ಹರಿಸುವುದು ನನ್ನ ಪ್ರಥಮ ಅಧ್ಯತೆ. ಅಲ್ಪ ಅವಧಿ​ಯಲ್ಲಿ ನನಗೆ ಶಿರಾ ಕ್ಷೇತ್ರದ ಜನ ಬಹುದೊಡ್ಡ ಜವಾಬ್ದಾರಿ ನೀಡಿದ್ದೀರಾ ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಆಭಿವೃದ್ಧಿ ಕಾರ್ಯ ಮಾಡುತ್ತೇನೆ. ಗ್ರಾಮೀಣ ಪ್ರದೇಶದ ರಸ್ತೆಗಳ ಆಭಿವೃದ್ಧಿ, ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಹೆಚ್ಚು ಕಾಳಜಿ ಜೊತೆಗೆ ಗುಡಿಸಲು ಮುಕ್ತ ಶಿರಾ ನನ್ನ ಗುರಿ. ಹಲವಾರು ದಶಕಗಳಿಂದ ಆಭಿವೃದ್ಧಿ ಕಾಣದ ಗೊಲ್ಲರ ಹಟ್ಟಿಗಳ ಪ್ರಗತಿಗೆ ವಿಶೇಷ ಅನುದಾನ ಕೊಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವಂತ ಕಾರ್ಯ ಮಾಡುತ್ತೇನೆ. ನಿಮ್ಮ ಸೇವಕನಾಗಿ ಕೆಲಸ ಮಾಡಬೇಕೆಂಬ ಸಂಕಲ್ಪ ಹೊಂದಿದ್ದೇನೆ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಲಕ್ಕನಹಳ್ಳಿ ಮಂಜುನಾಥ್‌, ನಿಡಗಟ್ಟೆಚಂದ್ರಶೇಖರ್‌, ಮುಕುಂದೇಗೌಡ, ಲಿಂಗದಹಳ್ಳಿ ಸುಧಾಕರ ಗೌಡ, ಪ್ರಕಾಶ್‌ಗೌಡ, ಸೂಡ ಅಧ್ಯಕ್ಷ ಈರಣ್ಣ, ನಗರ ಸಭೆ ಮಾಜಿ ಸದಸ್ಯ ನಟರಾಜು, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ರಮೇಶ್‌, ರಮೇಶ್‌ ಪಟೇಲ್‌, ಬಿ.ಹೆಚ್‌.ಸತೀಶ್‌ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಕಾಲುವೆ ಸ್ವಚ್ಛತೆ ಕಾರ್ಯ ಶೀಘ್ರ ಪ್ರಾರಂಭಿಸಿ, ಕೆರೆಗೆ ನೀರು ಹರಿಸಲಾಗುವುದು. ಅಲ್ಪ ಅವಧಿ​ಯಲ್ಲಿ ನನಗೆ ಶಿರಾ ಕ್ಷೇತ್ರದ ಜನ ಬಹುದೊಡ್ಡ ಜವಾಬ್ದಾರಿ ನೀಡಿದ್ದಾರೆ. ಆ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವೆ.

ಡಾ. ರಾಜೇಶ್‌ಗೌಡ, ನೂತನ ಶಾಸಕ