ಕಲಬುರಗಿ(ಜು.22):  ಕೊರೋನಾ ಸವಾಲನ್ನು ಹಿಮ್ಮೆಟ್ಟಿಸಲು ಹಾಗೂ ರಾಜ್ಯದ ಆಸ್ಪತ್ರೆಗಳಲ್ಲಿ ಬೆಡ್‌ ಕೊರತೆ ನೀಗಿಸಲು ಮುಂದಾಗಬೇಕು. ಕೊರೋನಾ ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ನೀಡಬೇಕೆಂದು ಶಾಸಕ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.

ಕೊರೋನಾ ವೈರಸ್‌ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ನಮ್ಮ ರಾಜ್ಯವೂ ಸೇರಿದಂತೆ ಇಡೀ ದೇಶವೇ ಕೊರೋನಾ ವೈರಸ್‌ನಿಂದ ನಲುಗುತ್ತಿದೆ. ಈ ಸಂದರ್ಭದಲ್ಲಿ ಎಲ್ಲಾ ಆಸ್ಪತ್ರೆಗಳು ಭರ್ತಿಯಾಗಿರುವುದರಿಂದ ಕೊರೋನಾ ಸೋಂಕಿತರು ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದಾರೆ. ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದರಿಂದ ರಾಜ್ಯದ ಎಲ್ಲಾ ಆಸ್ಪತ್ರೆಗಳ ಮೇಲೆ ಒತ್ತಡ ತಂದಿದೆ. ಹಳ್ಳಿಗಳು ಹಾಗೂ ತಾಲೂಕು ಕೇಂದ್ರಗಳಲ್ಲಿನ ಜನರೂ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಧಾವಿಸುತ್ತಿರುವ ಕಾರಣದಿಂದ ಬಹುತೇಕ ಆಸ್ಪತ್ರೆಗಳು ಬೆಡ್‌ ಕೊರತೆಯನ್ನು ಎದುರಿಸುತ್ತಿವೆ. ಪರಿಸ್ಥಿತಿ ಹೀಗಿದ್ದರೂ ರಾಜ್ಯ ಸರ್ಕಾರವು ಬೆಡ್‌ ಖರೀದಿಯಲ್ಲೂ ಭ್ರಷ್ಟಾಚಾರ ನಡೆಸಿ, ರಾಜ್ಯವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಇದನ್ನೆಲ್ಲ ಮನಗಂಡು, ರಾಜ್ಯ ಕಾಂಗ್ರೆಸ್‌ ಪಕ್ಷದ ವತಿಯಿಂದ ವಿನೂತನ ಪ್ರಯತ್ನಕ್ಕೆ ಕೈ ಹಾಕಲಾಗಿದೆ.

ಕಲಬುರ್ಗಿಯಲ್ಲಿ ಲಾಕ್‌ಡೌನ್ ಆದೇಶ ರದ್ದು; ವ್ಯಾಪಾರ, ಸಂಚಾರಕ್ಕೆ ಅವಕಾಶ

ಕೇವಲ 850 ರುಪಾಯಿ ಮೂಲದರದ 650 ಪರಿಸರ ಸ್ನೇಹಿ ಬೆಡ್‌ಗಳನ್ನು ಖರೀದಿಸಲಾಗಿದ್ದು, ಪ್ರಾಯೋಗಿಕವಾಗಿ ಇವುಗಳನ್ನು ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ನಿನ್ನೆ ಆ ಬೆಡ್‌ಗಳು ಕಲಬುರಗಿ ತಲುಪಿದ್ದು, 100 ಬೆಡ್‌ಗಳನ್ನು ಚಿತ್ತಾಪುರದ ಕೋವಿಡ್‌ ಆರೈಕೆ ಕೇಂದ್ರಕ್ಕೆ ಒದಗಿಸಲಾಗಿದೆ. ಚಿತ್ತಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಇಂತಹ 3 ಕ್ಲಸ್ಟರ್‌ಗಳನ್ನು ಸ್ಥಾಪಿಸಲು ಸೂಚಿಸಿ, ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ತಾಲೂಕು ಕೇಂದ್ರಗಳಲ್ಲೇ ಕ್ಲಸ್ಟರ್‌ಗಳನ್ನು ಸ್ಥಾಪಿಸಿ, ಅಲ್ಲಿ ಬೆಡ್‌ ವ್ಯವಸ್ಥೆ ಮಾಡುವ ಮೂಲಕ ಜಿಲ್ಲಾ ಆಸ್ಪತ್ರೆಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುವ ಯೋಜನೆಯನ್ನು ಚಿತ್ತಾಪುರದಲ್ಲಿ ರೂಪಿಸಲಾಗಿದೆ. ಬಹುಶಃ ದೇಶದಲ್ಲೇ ಮೊದಲ ಬಾರಿಗೆ ನಾವು ಇಂತಹ ಪ್ರಯತ್ನವನ್ನು ಮಾಡ್ತುತ್ತಿದ್ದೇವೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವು ಈ ಚಿತ್ತಾಪುರ ಮಾಡೆಲ್‌ ಅನ್ನು ತ್ವರಿತವಾಗಿ ಅವಲೋಕಿಸಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.