ಬಬಲೇಶ್ವರ (ವಿಜಯಪುರ)[ಜ.31]: ನಾನು ಜಿಲ್ಲೆಯ ಬಬಲೇಶ್ವರ ಪಟ್ಟಣ ಪಂಚಾಯತಿ ರಚನೆಗೆ ಸಂಪೂರ್ಣವಾಗಿ ಬದ್ಧನಾಗಿದ್ದು, ನಾನು ಬಬಲೇಶ್ವರ ಪಟ್ಟಣ ಪಂಚಾಯತಿ ಮಾಡಿಯೇ ತೀರುತ್ತೇನೆ. ಈಗಾಗಲೇ ಈ ಪ್ರಕ್ರಿಯೆ ಅಧಿಕಾರಿಗಳ ಹಂತದಲ್ಲಿದೆ. ಬಬಲೇಶ್ವರದಲ್ಲಿ ಪಟ್ಟಣ ಪಂಚಾಯತಿ ಮಾಡುವುದು ನಿಶ್ಚಿತ ಎಂದು ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಭರವಸೆ ನೀಡಿದರು.

ಬಬಲೇಶ್ವರದ ಶ್ರೀಶಾಂತವೀರ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಗುರುವಾರ ಏರ್ಪಡಿಸಿದ ತಾಲೂಕು ಕನ್ನಡ ಸಾಹಿತ್ಯ ಪ್ರಪ್ರಥಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಿಕೋಟಾದೊಂದಿಗೇ ಬಬಲೇಶ್ವರ ಪಪಂ ಆಗಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಪಪಂ ಆಗಲಿಲ್ಲ. ಪಪಂಗೆ ರಚನೆಗೆ ಈಗಾಗಲೇ ಪ್ರಯತ್ನ ಮುಂದುವರಿಸಿದ್ದೇನೆ. ಬಬಲೇಶ್ವರ ಪಪಂ ರಚನೆಗೆ ಸಂಬಂಧಿಸಿದ ಕಡತಗಳು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳ ಮುಂದಿವೆ. ಜನಗಣತಿ ಪ್ರಕ್ರಿಯೆ ಹಿನ್ನೆಲೆಯಲ್ಲಿ ಸ್ವಲ್ಪ ತಡವಾಗಬಹುದು. ಜನಗಣತಿ ಪ್ರಕ್ರಿಯೆ ನಂತರ ಬಬಲೇಶ್ವರ ಪಪಂ ನಿರ್ಮಾಣಕ್ಕೆ ಸಂಪೂರ್ಣ ಬದ್ಧನಾಗಿದ್ದೇನೆ. ಜನಗಣತಿ ಪ್ರಕ್ರಿಯೆಗೂ ಮುನ್ನವೇ ಪಪಂ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಪಪಂ ನಿರ್ಮಾಣವಾಗಬೇಕು ಎಂದು ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯರ ಹಾಗೂ ಬಬಲೇಶ್ವರ ನಿವಾಸಿಗಳ ಆಶಯವನ್ನು ನಾನೇ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮುಳವಾಡ ಏತ ನೀರಾವರಿ, ಗುತ್ತಿಬಸವಣ್ಣ, ತುಬಚಿ-ಬಬಲೇಶ್ವರ, ನಾಗರಬೆಟ್ಟಹೀಗೆ ಅನೇಕ ನೀರಾವರಿ ಯೋಜನೆಗಳ ಮೂಲಕ ಜಿಲ್ಲೆಯ 16 ಲಕ್ಷ ಎಕರೆಗೆ ಭೂಮಿ ನೀರಾವರಿಗೊಳಪಡಿಸುವ ಕಾರ್ಯ ಭರದಿಂದ ಸಾಗಿದೆ ಎಂದರು.

ಬಬಲೇಶ್ವರ, ನಿಡೋಣಿ, ನಾಗರಾಳ, ಕುಮಠೆ ಮುಂತಾದ ಗ್ರಾಮಗಳು ಮುಳವಾಡ ಏತ ನೀರಾವರಿ ಯೋಜನೆಗೆ ಒಳಪಟ್ಟಿರಲಿಲ್ಲ. ಈ ಬಗ್ಗೆಯೂ ಅನೇಕ ದಿನಗಳಿಂದ ಹೋರಾಟ ನಡೆದಿತ್ತು. ಆದರೆ, ನಾನು ಸುದೈವದಿಂದ ಜಲಸಂಪನ್ಮೂಲ ಸಚಿವನಾಗಿದ್ದರಿಂದಾಗಿ ತುಬಚಿ-ಬಬಲೇಶ್ವರ ನೀರಾವರಿ ಯೋಜನೆ ಮೂಲಕ ಬಬಲೇಶ್ವರ ಭಾಗದಲ್ಲಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಆಲಮಟ್ಟಿಅಣೆಕಟ್ಟು ಎತ್ತರಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ತಡೆಯಾಜ್ಞೆ ಇದೆ. ಹೀಗಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಬರುವುದಿಲ್ಲ, ಪ್ರಸ್ತುತ ಆಗಿರುವ ಕಾಮಗಾರಿಗಳು ಅಧಿಸೂಚನೆ ಆದ ನಂತರ ಮೂರ್ನಾಲ್ಕು ವರ್ಷಗಳಲ್ಲಿ ಆಗಬೇಕಾಗಿದ್ದವು. ಆದರೆ, ಈಗಲೇ ಇವುಗಳನ್ನು ಪೂರ್ಣಗೊಳಿಸಿದ್ದೇವೆ. ಈಗಾಗಲೇ ಈ ಕಾಲುವೆಗಳ ಮೂಲಕ ನೂರಾರು ಕೆರೆಗಳಿಗೆ ನೀರು ತುಂಬಲಾಗಿದ್ದು, 200 ಹಳ್ಳಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ರೂಪಿಸಲಾಗುತ್ತಿದೆ. ಇಂಡಿ ತಾಲೂಕಿನಲ್ಲಿ ನೀರಿನ ತೀವ್ರ ಸಮಸ್ಯೆ ಇದೆ. ಹೀಗಾಗಿ 13 ಕಿಮೀ ತಿಡಗುಂದಿ ಅಕ್ವಾಡೆಕ್ಟ್ ನಿರ್ಮಿಸಲಾಗಿದೆ. 3 ಟಿಎಂಸಿ ಮೂಲಕ ನೀರಿನ ಮೂಲಕ ಇಂಡಿ ತಾಲೂಕಿನ 16 ಕೆರೆಗಳನ್ನು ಇಂಚಗೇರಿ, ಜಿಗಜಿಣಗಿ, ಹೋರ್ತಿ, ಗುಂಡವಾನ ಮೊದಲಾದ ಕೆರೆಗಳನ್ನು ತುಂಬಿಸಲಾಗುತ್ತಿದೆ ಎಂದರು.

ಬಬಲೇಶ್ವರ ತಾಲೂಕಾಗಬೇಕು ಎಂಬುವುದು ಈ ಭಾಗದ ಅನೇಕ ಹಿರಿಯರ ಕನಸಾಗಿತ್ತು. ಬಬಲೇಶ್ವರ ತಾಲೂಕು ರಚನೆ ಹೋರಾಟಕ್ಕೆ ಮಹಾದೇವ ಶಿವಾಚಾರ್ಯರೇ ಪ್ರೇರಣಾ ಶಕ್ತಿ. ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಬಲೇಶ್ವರ ತಾಲೂಕು ರಚನೆ ಮಾಡುವಂತೆ ಈ ಭಾಗದ ಅನೇಕ ಹೋರಾಟಗಾರರು ನನಗೆ ಮೇಲಿಂದ ಮೇಲೆ ಒತ್ತಾಯಿಸುತ್ತಿದ್ದರು. ಆ ಸಂದರ್ಭದಲ್ಲಿಯೇ ಉಪತಹಸೀಲ್ದಾರ್‌ ಹುದ್ದೆ ಸೃಜಿಸುವ ಮೂಲಕ ಅಂದೇ ಪ್ರತ್ಯೇಕ ತಾಲೂಕು ರಚನೆಯ ಹೆಜ್ಜೆಯನ್ನು ಯಶಸ್ವಿಯಾಗಿ ಪ್ರಥಮ ಹೆಜ್ಜೆ ಇರಿಸಿದ್ದೇನು. ನಂತರ ಜಲಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ ನನ್ನ ಮತಕ್ಷೇತ್ರದ ತಿಕೋಟಾ, ಬಬಲೇಶ್ವರವನ್ನು ತಾಲೂಕು ರಚನೆ ಮಾಡುವಲ್ಲಿ ಯಶಸ್ವಿ ಕಂಡುಕೊಂಡೆನು. ಇದರಿಂದಾಗಿ ಬಹುದಿನಗಳ ಹಾಗೂ ಅನೇಕರ ಸಂಕಲ್ಪವನ್ನು ಈಡೇರಿಸಿದ ಸಂತೃಪ್ತಿ ನನಗಿದೆ ಎಂದು ತಿಳಿಸಿದರು.

ಬಸವಾದಿ ಶರಣರು ವಚನ ಚಳವಳಿ ಮಾಡದೇ ಹೋಗಿದ್ದರೆ ಕನ್ನಡ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಪುರೋಹಿತಶಾಹಿಗಳಿಂದಾಗಿ ಸಂಸ್ಕೃತ ಸಂಪೂರ್ಣವಾಗಿ ಪಸರಿದ ಸಂದರ್ಭದಲ್ಲಿ ಶ್ರೇಷ್ಠವಾದ ಆಡುಭಾಷೆಯಲ್ಲಿ ವಚನ ರಚಿಸುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಿದರು. ಸಂಸ್ಕೃತಮಯವಾಗಿದ್ದ ನಾಡಿನಲ್ಲಿ ಬಸವಾದಿ ಶರಣರು ಆಡುಭಾಷೆಯಲ್ಲಿ ವಚನಗಳ ಮೂಲಕ ಕನ್ನಡವನ್ನು ಬಿತ್ತಿದರು. ಕಸಗುಡಿಸುವ ಕಾಯಕದಲ್ಲಿ ತೊಡಗಿದ್ದ ಸತ್ಯಕ್ಕ ಅವರೂ ವಚನ ಸಾಹಿತ್ಯವನ್ನು ರಚಿಸಿದರು. ಎಲ್ಲ ವರ್ಗದ ಕಾಯಕಜೀವಿಗಳು ವಚನಗಳನ್ನು ರಚಿಸಿದರು ಎಂದರು.

ವಚನಪಿತಾಮಹ ಡಾ.ಫ.ಗು.ಹಳಕಟ್ಟಿಅವರು ಇಲ್ಲದಿದ್ದರೆ ವಚನ ಸಾಹಿತ್ಯ ಬೆಳಕಿಗೆ ಬರುತ್ತಿರಲಿಲ್ಲ. ಮನೆಯ ಜಗುಲಿಯಲ್ಲಿ ಪೂಜಿಸಲ್ಪಡುತ್ತಿದ್ದ ವಚನ ಸಾಹಿತ್ಯದ ಕಟ್ಟುಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ಡಾ.ಹಳಕಟ್ಟಿಅವರು ನೀಡದೇ ಹೋಗಿದ್ದ ಭವಿಷ್ಯದ ಪೀಳಿಗೆಗೆ ವಚನ ಸಾಹಿತ್ಯವೇ ಲಭ್ಯವಾಗುತ್ತಿರಲಿಲ್ಲ. ವಚನ ಸಾಹಿತ್ಯವನ್ನು ಸಂಗ್ರಹಿಸುವ ಮೂಲಕ ಡಾ.ಹಳಕಟ್ಟಿಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ಬಬಲೇಶ್ವರ ಬೃಹನ್ಮಠ, ಶ್ರೀಶಾಂತವೀರ ಮಹಾಶಿವಯೋಗಿಗಳು ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

224 ಶಾಸಕರು ಅಷ್ಟೇ ಏಕೆ ಮುಖ್ಯಮಂತ್ರಿಗಳು ಸಹ ತಮ್ಮ ಕ್ಷೇತ್ರಕ್ಕೆ ತರಲು ಸಾಧ್ಯವಾಗದಷ್ಟುಅನುದಾನವನ್ನು ಬಬಲೇಶ್ವರ ಕ್ಷೇತ್ರಕ್ಕೆ ತಂದ ಸಂತೃಪ್ತಿ ನನಗಿದೆ. ಇದಕ್ಕೆಲ್ಲ ನಿಮ್ಮ ಆಶೀರ್ವಾದ ಬಲವೇ ಕಾರಣ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದ್ದಾರೆ.