ಚಿಕ್ಕಮಗಳೂರು: ಮಳೆ ಕೊರತೆ ನಡುವೆಯೂ ಕೋಡಿಬಿದ್ದ ಕೆರೆಗೆ ಬಾಗಿನ ಅರ್ಪಣೆ, ರೈತರ ಮೊಗದಲ್ಲಿ ಮಂದಹಾಸ
ಕೆರೆಯು ಕೋಡಿ ಬಿದ್ದ ನೀರು ಹರಿದರೆ ರೈತರ ಸಂಕಷ್ಟವನ್ನು ಪರಿಹರಿಸಲು ಸಹಕಾರವಾಗುತ್ತದೆ. ಬರ ಛಾಯೆ ಇರುವುದರಿಂದ ಕುಡಿಯುವ ನೀರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಟಾಸ್ಕ್ ಫೋರ್ಸ್ ಸಭೆಯನ್ನು ಕರೆದು ಅದನ್ನ ಪರಿಹರಿಸಲಾಗುವುದು ಎಂದು ತಿಳಿಸಿದ ಶಾಸಕ ಕೆ. ಎಸ್. ಆನಂದ್
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಅ.05): ಮಳೆ ಕೊರತೆ ನಡುವೆಯೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿರುವ ಐತಿಹಾಸಿಕ ಪ್ರಸಿದ್ಧ ಮದಗದಕೆರೆ ಕೋಡಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇಂದು(ಗುರುವಾರ) ಕಡೂರು ತಾಲೂಕು ಆಡಳಿತ ಮತ್ತು ಸ್ಥಳೀಯ ಶಾಸಕ ಕೆ. ಎಸ್. ಆನಂದ್ ಅವರ ನೇತೃತ್ವದಲ್ಲಿ ತಾಯಿ ಕೆಂಚಮ್ಮ ದೇವಿಗೆ ಪೂಜೆ ಸಲ್ಲಿಸಿ ಕೆರೆಗೆ ಬಾಗಿನ ಅರ್ಪಿಸಿದ್ದಾರೆ.
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ತಾಯಿ ಕೆಂಚಮ್ಮನವರಿಗೆ ಪೂಜೆ ಸಲ್ಲಿಸಿ ಮದಗದ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಕಡೂರು ಶಾಸಕ ಕೆ. ಎಸ್. ಆನಂದ್, ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ ಎಂಬ ಇತಿಹಾಸವನ್ನು ಹೊಂದಿರುವುದು ಈ ಕೆರೆಯೇ. ಬರದ ಛಾಯೆಯ ನಡುವೆಯೂ ಈ ಕೆರೆ ತುಂಬಿರೋದ್ರಿಂದ ಸುತ್ತಮುತ್ತಲಿನ 23 ಹಳ್ಳಿಯ ಜನ-ಜಾನುವಾರುಗಳಿಗೆ ಕುಡಿಯೋ ನೀರಿಗೆ ಆಸರೆಯಾದಂತಾಗಿದೆ. ಹೊಲಗದ್ದೆ-ತೋಟ ಹಾಗೂ ಬೋರ್ವೆಲ್ ಗಳಿಗೆ ಚೈತನ್ಯ ಬಂದಂತಾಗಿದೆ. ಕೆರೆಗೆ ನೀರು ಬಂದಿರೋದ್ರಿಂದ ಸುತ್ತಮುತ್ತಲಿನ ಸಾವಿರಾರು ಎಕರೆ ತೋಟಗಳಿಗೆ ನೀರಿನ ಸಮಸ್ಯೆ ನೀಗಿದಂತಾಗಿದೆ. ಕಳೆದ ವರ್ಷದಲ್ಲಿ ಕೆರೆಗೆ ಬಾಗಿನ ಕೊಡಲು ಸಾಧ್ಯವಾಗಿರಲಿಲ್ಲ ಆದ್ದರಿಂದ ಶಿಷ್ಟಾಚಾರದಿಂದ ಮತ್ತು ಶಿಸ್ತಿನಿಂದ ಎಲ್ಲರೂ ಕೂಡಿ ಸಂತೋಷವಾಗಿ ಬಾಗಿನವನ್ನು ಕೊಟ್ಟಿದ್ದೇವೆ ಎಂದರು.
ಚಿಕ್ಕಮಗಳೂರು: ಕುಡುಕರ ಅಡ್ಡೆಯಾದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾದ ಮಳಿಗೆಗಳು..!
ನೀರಿನ ಕೊರತೆ ನೀಗುವ ಜೊತೆಗೆ ಸಮೃದ್ಧ ಕೃಷಿ ಚಟುವಟಿಕೆಗೆ ಅವಕಾಶ
ಕೆರೆಯು ಕೋಡಿ ಬಿದ್ದ ನೀರು ಹರಿದರೆ ರೈತರ ಸಂಕಷ್ಟವನ್ನು ಪರಿಹರಿಸಲು ಸಹಕಾರವಾಗುತ್ತದೆ. ಬರ ಛಾಯೆ ಇರುವುದರಿಂದ ಕುಡಿಯುವ ನೀರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಟಾಸ್ಕ್ ಫೋರ್ಸ್ ಸಭೆಯನ್ನು ಕರೆದು ಅದನ್ನ ಪರಿಹರಿಸಲಾಗುವುದು ಎಂದು ಶಾಸಕ ಕೆ. ಎಸ್. ಆನಂದ್ ತಿಳಿಸಿದ್ದಾರೆ.
ಮದಗದ ಕೆರೆಗೆ ಕೋಡಿ ಬಿದ್ದ ಹಿನ್ನೆಲೆ ಹರ್ಷ ವ್ಯಕ್ತಪಡಿಸಿದ ಸ್ಥಳೀಯ ರೈತರುಗಳು ಈ ಭೂಭಾಗದ ಜನರ ಜೀವನಾಡಿ ಈ ಮಗದದಕೆರೆ. ಕೆ.ಆರ್.ಎಸ್ ಕಾವೇರಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆ ಈ ಕೆರೆಗೂ ಕೂಡ ಇದೆ. ಜಿಲ್ಲೆಯಲ್ಲಿ ನೂರಾರು ಗ್ರಾಮಗಳಿಗೆ ನೀರಿನ ಕೊರತೆ ನೀಗುವ ಜೊತೆಗೆ ಸಮೃದ್ಧ ಕೃಷಿ ಚಟುವಟಿಕೆಗೆ ಅವಕಾಶ ಲಭಿಸಲಿದೆ ಎಂದರಲ್ಲದೆ, ಈ ಕೆರೆಯು ಕೋಡಿಬಿದ್ದು ಎರಡು ತಿಂಗಳುಗಳು ಕಳೆದಿದೆ ಇನ್ನು ಹೆಚ್ಚಿನ ಮಳೆ ಬಂದರೆ ಇನ್ನೂ ಕೆರೆ ತುಂಬುತ್ತಿತ್ತು. ಸುಮಾರು 2 ಸಾವಿರ ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆಯು ಸುತ್ತಮುತ್ತಲ ತಾಲೂಕುಗಳಾದ ಕಡೂರು ಬೀರೂರು ಜನರಿಗೆ ಇದು ಸಹಕಾರಿಯಾಗಿದೆ ಎಂದು ಹೇಳಿದರು.