ಕಂಪ್ಲಿ(ಡಿ. 02):  ವಿಜಯನಗರ ನೂತನ ಜಿಲ್ಲೆಗೆ ಕಂಪ್ಲಿ ತಾಲೂಕನ್ನು ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ಹೋರಾಟ ಮುಂದುವರಿಯಲಿದ್ದು, ಇದಕ್ಕಾಗಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ತಿಳಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರಿಸಬೇಕು ಎಂಬುದು ಈ ಭಾಗದ ಜನರ ಒತ್ತಾಸೆಯಾಗಿದೆ. ಜನರ ಬೇಡಿಕೆ ಈಡೇರಿಕೆಗಾಗಿ ಹೋರಾಟ ಮುಂದುವರಿಸುತ್ತೇನೆ ಎಂದರು. 

'ಸಿಎಂ ಯಡಿಯೂರಪ್ಪ ಹಿಟ್ಲರ್‌ನಂತೆ ತೀರ್ಮಾನ ತೆಗೆದುಕೊಂಡಿದ್ದಾರೆ'

ಕಂಪ್ಲಿ ಬಂದ್‌ ವೇಳೆ ಸಚಿವ ಆನಂದಸಿಂಗ್‌ ಅವರ ವಿರುದ್ಧ ತೊಡೆ ತಟ್ಟಿದ್ದೇನೆ ಎಂದು ಹೇಳಿದ್ದಾರೆ. ಪ್ರತಿಭಟನೆ ವೇಳೆ ಎರಡು ಕಡೆಗಳಿಂದ ವಾಗ್ವಾದ ನಡೆದಿದ್ದು ನಿಜ. ಆದರೆ, ತೊಡೆ ತಟ್ಟಿಲ್ಲ. ಬೇಕಾದರೆ ವಾಗ್ವಾದದ ವೀಡಿಯೋ ತುಣುಕು ನೋಡಲಿ. ಸಚಿವ ಆನಂದಸಿಂಗ್‌ ಅವರ ಮೇಲೆ ನನಗೆ ಅಪಾರ ಗೌರವವಿದೆ. ಮುಂದೆಯೂ ಇರುತ್ತದೆ. ನೂತನ ವಿಜಯನಗರ ಜಿಲ್ಲೆಗೆ 371(ಜೆ) ಸೌಲಭ್ಯ ಸಿಗುವುದಿಲ್ಲ ಎಂಬ ಗಾಳಿ ಸುದ್ದಿಗಳ ಬಗ್ಗೆ ಯಾರೂ ಕಿವಿಗೊಡಬಾರದು ಎಂದು ಶಾಸಕ ಗಣೇಶ್‌ ಮನವಿ ಮಾಡಿದ್ದಾರೆ.