ಬೆಳ್ತಂಗಡಿ(ಏ.19): ಲಾಕ್‌​ಡೌ​ನ್‌​ನಿಂದಾ​ಗಿ ಚಾರ್ಮಾಡಿ ಘಾಟ್‌ ರಸ್ತೆ ಬದಿಯಲ್ಲಿ ಸರಾಗವಾಗಿ ಓಡಾಡಿಕೊಂಡಿದ್ದ ನೂರಾರು ಮಂಗಗಳಿಗೆ ಆಹಾರಕ್ಕೂ ಕುತ್ತು ಬಿದ್ದಿದೆ. ಲಾಕ್‌ಡೌನ್‌ ಆಗುವ ಮುಂಚೆ ಧಾರ್ಮಿಕ ಕ್ಷೇತ್ರಗಳಿಗೆ ಸಂದರ್ಶನ ಮಾಡುವ ಭಕ್ತರು, ಪ್ರಯಾಣಿಕರು ಈ ಘಾಟಿ ರಸ್ತೆಯಲ್ಲಿ ನಿಲ್ಲಿಸಿ ರಸ್ತೆ ಬದಿಯಲ್ಲಿರುವ ಮಂಗಗಳಿಗೆ ಹಣ್ಣು ಹಂಪಲುಗಳನ್ನು ನೀಡುತ್ತಿದ್ದರು. ಈಗ ವಾಹನ ಸಂಚಾರವಿಲ್ಲದೆ ಆಹಾರಕ್ಕಾಗಿ ಕಂಗೆಟ್ಟು ರಸ್ತೆ ಬದಿಯಲ್ಲೇ ಕಾದು ಕುಳಿತಿರುವ ಈ ಮುಗ್ಧ ಮೂಕ ಪ್ರಾಣಿಗಳ ರೋಧನ ಮನ ತಲ್ಲಣಗೊಳಿಸುತ್ತದೆ.

ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಘಾಟ್‌ ರಸ್ತೆಯಲ್ಲಿ ಯಾವುದೇ ವಾಹನಗಳು ಬಂದು ನಿಂತರೆ ಸಾಕು ನೂರಾರು ಮಂಗಗಳು ಹತ್ತಿರ ಸುಳಿದಾಡುತ್ತದೆ. ಬಂದವರ ಕೈಯನ್ನೇ ನೋಡುತ್ತಿರುತ್ತದೆ. ಕೈಗಳಲ್ಲಿ ಏನಾದರೂ ಪೊಟ್ಟಣಗಳಿದ್ದರೆ ಎಳೆದಾಡಲು ಹಿಂದೆ ಮುಂದೆ ನೋಡುವುದಿಲ್ಲ. ಆಹಾರ ಸಿಕ್ಕಿದೊಡನೆ ಗುರಾಯಿಸುತ್ತದೆ. ಇದೇ ರಸ್ತೆಯಾಗಿ ಓಡಾಟ ನಡೆಸುವ ಕೆಲವೊಂದು ತರಕಾರಿ ಸಾಗಾಟ ಮಾಡುವ ವಾಹನದವರು ಅದಕ್ಕೆ ತಮ್ಮಲ್ಲಿರುವ ಟೊಮೊಟೊ, ಇನ್ನಿತರ ಕೆಲವೊಂದನ್ನು ಆಹಾರವಾಗಿ ನೀಡುತ್ತಾರೆ.

ರೋದನಕ್ಕೆ ಸ್ಪಂದಿಸಿದ ಶಾಸಕ:

ಮಾಧ್ಯಮ ಮಿತ್ರರಿಂದ ವಿಚಾರದ ತಿಳಿದ ಶಾಸಕ ಹರೀಶ್‌ ಪೂಂಜ, ಶನಿವಾರ ತನ್ನ ವಾಹನದಲ್ಲಿ ಹಣ್ಣು-ಹಂಪಲುಗಳನ್ನು ಹೇರಿಕೊಂಡು ಹೋಗಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿರುವ ಆಹಾರಕ್ಕಾಗಿ ಕಾಯುತ್ತಿದ್ದ ಮಂಗಗಳಿಗೆ ಆಹಾರ ನೀಡಿದರು. ಬಾಳೆಹಣ್ಣು, ದ್ರಾಕ್ಷಿ, ಕಲ್ಲಂಗಡಿ, ಕಿತ್ತಲೆ ಮೊದಲಾದ ಹಣ್ಣು ಹಂಪಲುಗಳನ್ನು ದಾರಿಯುದ್ದಕ್ಕೂ ರಸ್ತೆ ಬದಿಯಲ್ಲಿದ್ದ ಮಂಗಗಳಿಗೆ ನೀಡಿದರು.

ಕೊರೋನಾ ಆತಂಕ: ಜಿಲ್ಲಾಡಳಿತಕ್ಕೀಗ ಮುಲ್ಲಾನ ಓಣಿಯದ್ದೇ ದೊಡ್ಡ ಸವಾಲು..!

ಲಾಕ್‌ಡೌನ್‌ನಿಂದಾಗಿ ಚಾರ್ಮಾಡಿ ಘಾಟ್‌ ರಸ್ತೆಯ ಈ ಭಾಗದ ಮಂಗಗಳಿಗೆ ಆಹಾರದ ಸಮಸ್ಯೆ ಉಂಟಾಗಿದೆ. ಮಂಗಗಳು ರಸ್ತೆಯಲ್ಲಿ ಆಹಾರಕ್ಕಾಗಿ ಹುಡುಕಾಟ ನಡೆಸುವಂತಾಗಿದೆ. ಲಾಕ್‌ಡೌನ್‌ ಮುಗಿಯುವ ತನಕ ದಿನನಿತ್ಯ ಒಂದಿಷ್ಟುಹಣ್ಣು-ಹಂಪಲು ನೀಡುವ ಮೂಲಕ ಅವುಗಳಿಗೆ ಆಹಾರದ ವ್ಯವಸ್ಥೆ ಮಾಡಲಾಗುವುದು ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ತಿಳಿಸಿದ್ದಾರೆ.