ಬೆಂಗಳೂರು (ನ.08):  ‘ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಯಾವುದೇ ಕಾರಣಕ್ಕೂ ಮುಜರಾಯಿ ವ್ಯಾಪ್ತಿಗೆ ತರುವುದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ದೇವಾಲಯ ವಿವಾದದ ಕುರಿತು ಸಾಗರ ಶಾಸಕ ಹರತಾಳು ಹಾಲಪ್ಪ ಹಾಗೂ ರೇಣುಕಾನಂದ ಸ್ವಾಮೀಜಿ ನೇತೃತ್ವದಲ್ಲಿ ಈಡಿಗ ಸೇರಿದಂತೆ ವಿವಿಧ ಸಮುದಾಯಗಳ ಮಠಾಧೀಶರ ನಿಯೋಗ ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.

ಸಭೆಯಲ್ಲಿ ದೇವಾಲಯದ ಮೇಲುಸ್ತುವಾರಿ ಸಮಿತಿ ಕುರಿತ ಗೊಂದಲ ಹಾಗೂ ಭಕ್ತರು ನೀಡುವ ಹಣಕಾಸು, ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಜೊತೆಗೆ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ರಚಿಸಿರುವ ಸಲಹಾ ಸಮಿತಿಯನ್ನು ಪರಿಷ್ಕರಿಸುವಂತೆ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಮಾಡಿತು.

ಸಿಗಂದೂರು ಚೌಡೇಶ್ವರಿ ದೇವಾಲಯ ವಿವಾದ: ಹೋರಾಟದ ಎಚ್ಚರಿಕೆ ಕೊಟ್ಟ ಮಾಜಿ ಶಾಸಕ .

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ದೇವಾಲಯವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ನೀಡಲಾಗುತ್ತದೆ ಎಂಬ ವಿವಾದದ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡುತ್ತಿದ್ದೇನೆ. ದೇವಸ್ಥಾನವನ್ನು ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವುದಿಲ್ಲ’ ಎಂದು ಭರವಸೆ ನೀಡಿದರು.

ಅಲ್ಲದೆ, ‘ಜಿಲ್ಲಾಡಳಿತ ನೇತೃತ್ವದ ಸಲಹಾ ಸಮಿತಿಗೆ ಈಡಿಗ ಸಮುದಾಯದ ರೇಣುಕಾನಂದ ಸ್ವಾಮೀಜಿ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಈಗ ರಚನೆಯಾಗಿರುವ ಸಮಿತಿಯು ಮುಂದಿನ 4 ತಿಂಗಳವರೆಗೆ ಮುಂದುವರೆಯಲಿದೆ. ಬಳಿಕ ಸಮಿತಿಯು ಇರಬೇಕೆ ಅಥವಾ ಕೈ ಬಿಡಬೇಕೆ ಎಂಬ ಕುರಿತು ನಿರ್ಧರಿಸಲಾಗುತ್ತದೆ’ ಎಂದು ತಿಳಿಸಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಬಂಜಾರ ಸಮಾಜದ ಸೇವಾಲಾಲ್‌, ಅರೇಮಲ್ಲಾಪುರದ ಪ್ರಣಯಾನಂದ ಸ್ವಾಮೀಜಿ, ಭಗೀರಥ ಮಠದ ಪುರುಷೋತ್ತಮಪುರಿ ಸ್ವಾಮೀಜಿ ಸೇರಿದಂತೆ ತಿಗಳರು, ಮಡಿವಾಳರು, ಗಾಣಿಗರು, ಛಲವಾದಿ ಸಮುದಾಯದ ಸ್ವಾಮೀಜಿಗಳು ಭಾಗವಹಿಸಿದ್ದರು.