ನೆಲಮಂಗಲ [ಸೆ.13]:  ಗ್ರಾಮದಲ್ಲಿ ತಳವಾರಿಕೆ ಮಾಡುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಸೋಮವಾರ ಗಲಾಟೆ ನಡೆದಿದ್ದ ಹಿನ್ನೆಲೆ ಪ್ರಕರಣ ದಾಖಲಾಗಿ ಕಾಚನಹಳ್ಳಿ ಬೂದಿಮುಚ್ಚಿದ ಕೆಂಡದಂತಾಗಿದ್ದು ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಳುಗಳು ಚಿಕಿತ್ಸೆ ಪಡೆಯುತ್ತಿದ್ದು ಶಾಸಕ ಡಾ.ಕೆ. ಶ್ರೀನಿವಾಸ ಮೂರ್ತಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಳುಗಳ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು.

ಸ್ಟೆಥಸ್ಕೋಪ್‌ಹಿಡಿದ ಶಾಸಕ:

ತಾಲೂಕಿನ ಕಾಚನಹಳ್ಳಿ ಗ್ರಾಮದ ಗಲಾಟೆ ವಿಚಾರದಲ್ಲಿ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಸ್ವತಃ ಸ್ಟೆತಾಸ್ಕೋಪ್‌ ಹಿಡಿದು ಗಾಯಾಳುಗಳನ್ನು ಪರೀಕ್ಷಿಸುವ ಮೂಲಕ ಅವರ ಆರೋಗ್ಯದ ಕುರಿತಾಗಿ ಗಮನಹರಿಸಿದರು. ಸಂಜೆ ಸುಮಾರು 4 ಗಂಟೆಗೆ ಬಂದಿದ್ದ ಶಾಸ​ಕರು, ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾವಿರಾರು ರೋಗಿಗಳಿಗೆ ತಾವೇ ಚಿಕಿತ್ಸೆಯನ್ನು ನೀಡಿದ್ದನ್ನು ಸ್ಮರಿಸಿಕೊಂಡರು. ತಮ್ಮ ವೃತ್ತಿಜೀವನದ ನೆನಪು ಮಾಡಿಕೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡದ್ದು ವಿಶೇಷವಾಗಿತ್ತು.

ಕೆಂಡಾಮಂಡಲ:

ತಾವು ವೈದ್ಯರಾಗಿ ಸೇವೆ ಸಲ್ಲಿಸಿದ ಆಸ್ಪತ್ರೆಗೆ ಆಗಮಿಸಿ, ಶಾಸಕರೇ ಗಾಯಾಳುಗಳನ್ನು ಪರೀಕ್ಷಿಸುತ್ತಿದ್ದರೂ ಸ್ಥಳಕ್ಕೆ ಯಾವೊಬ್ಬ ವೈದ್ಯರಾಗಲೀ ಸಿಬ್ಬಂದಿಯಾಗಲಿ ಧಾವಿಸದಿರುವುದನ್ನು ಕಂಡ ಶಾಸಕರು ಆಸ್ಪತ್ರೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕೆಂಡಾಮಂಡಲವಾಗಿ ತರಾಟೆಗೆ ತೆಗೆದುಕೊಂಡರು.