ವಿಜಯಪುರ(ಜ.30): ಕೂಡಲಸಂಗಮ ಹಾಗೂ ಹರಿಹರ ಪಂಚಮಸಾಲಿ ಸ್ವಾಮೀಜಿಗಳು ಒಟ್ಟಾಗಿ ಕೆಲಸ ಮಾಡಿದ್ರೆ ಒಳ್ಳೆಯದು. ಇಬ್ಬರೂ ಕೂಡಿ ಸಮಾಜದ ಹಿತದೃಷ್ಟಿಯಿಂದ ಕೆಲಸ ಮಾಡಲಿ. ಯಾರಾದ್ರು ಅನುದಾನ ಕೊಡ್ತಾರೆ ಅಂತಾ ಅವರ ಪರವಾಗಿ ಮಾತನಾಡುವುದನ್ನ ಬಿಡಲಿ. ಅವರನ್ನ ಮಂತ್ರಿ ಮಾಡಿ, ಇವರನ್ನ ಮಂತ್ರಿ ಮಾಡಿ ಅಂತ ಹೇಳಬೇಡಿ. ಸಮುದಾಯದ ಕಡೆ ಕೆಲಸ ಮಾಡುವುದನ್ನ ಬಿಟ್ಟು ರಾಜಕೀಯದಲ್ಲಿ ಭಾಗಿ ಆಗೋದು ಬೇಡ. ತಲೆ ತಿರುಕ ಹೇಳಿಕೆಗಳನ್ನ ಬಿಟ್ಟು ಸಮಾಜಕ್ಕಾಗಿ ಕೆಲಸ ಮಾಡಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿಜಿ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿ ಕಾರಿದ್ದಾರೆ. 

ಸದನದಲ್ಲಿ ನೀಲಿ ಚಿತ್ರ ವೀಕ್ಷಣೆ ವಿಚಾರದ ಬಗ್ಗೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂತಹ ಸಣ್ಣ ವಿಷಯಗಳ ಬಗ್ಗೆ ನಾನು ಮಾತನಾಡುವುದಿಲ್ಲ. ವಿಧಾನಸಭೆ ಹೊರಗಡೆ ನಮಗೆ ಮೊಬೈಲ್ ಹೊರಗಡೆ ಇಡಲು ಬಾಕ್ಸ್ ಮಾಡಿದ್ದಾರೆ. ನಾವೆಲ್ಲ ಅಲ್ಲೆ ಇಟ್ಟು ಹೋಗುತ್ತೇವೆ. ಇದರ ಬಗ್ಗೆ ಸೂಕ್ತ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. ಇದನ್ನ ಗಂಭೀರವಾಗಿ ತಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. 

ರಾಮಮಂದಿರ ಕಟ್ಟಡದ ಹಣ ಸಂಗ್ರಹದ ವಾಹನದ ಮೇಲೆ ಹಲ್ಲೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ಹಾಟ್ ಸ್ಪಾಟ್ ಆಗುತ್ತಿದೆ. ಇದರ ಬಗ್ಗೆ ಸಿಎಂ, ಗೃಹಮಂತ್ರಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ರಾಜ್ಯ ಸರಕಾರ ಕೋಮು ಗಲಭೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಗೃಹ ಮಂತ್ರಿಗಳು ಜಮೀರ್ ಅಹ್ಮದ್ ಪ್ರೀತಿಯ ಗೆಳೆಯರು ಅಂತ ಡೈಲಾಗ್ ಹೊಡೆದುಕೊಂಡು ಇರಬಾರದು. ಗೃಹ ಮಂತ್ರಿಗಳು ಅವರ ಜೊತೆಗೆ ಸಲುಗೆ ಇಟ್ಟುಕೊಂಡ್ರೆ ಬೆಂಗಳೂರಲ್ಲಿ ಇದೆ ಆಗೋದು ಎಂದು ಹೇಳಿದ್ದಾರೆ. 

ಕೊನೆಗೂ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಖಡಕ್ ಎಚ್ಚರಿಕೆ ಸಂದೇಶ..!

ಶಿವಮೊಗ್ಗದಲ್ಲಿ ನಡೆದ ಸ್ಫೋಟದ ವಿಚಾರದ ಬಗ್ಗೆ ಮಾತನಾಡಿದ ಅವರು, ಅದನ್ನ ಸಿಬಿಐಗೆ ಕೊಡಬೇಕಿತ್ತು, ಎಲ್ಲ ರಾಜಕೀಯ ವ್ಯಕ್ತಿಗಳ ಗಣಿಗಾರಿಕೆ ಇದೆ. ಅದು ಏನು ಆಗಲ್ಲ, ಯಾವ ತನಿಖೆಯಿಂದಲು ಏನು ಆಗಲ್ಲ. ನೀವು ಕೂಡ ಎರಡು ದಿನ ತೋರಸ್ತಿರಿ ನಂತರ ಬೇರೆ ಸುದ್ದಿಗೆ ಹೋಗ್ತಿರಿ ಎಂದಿದ್ದಾರೆ. 

ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ವಿರುದ್ಧ ಕಿಡಿ ಕಾರಿದ ಯತ್ನಾಳ್‌, ಉದ್ಧವ್‌ ಠಾಕ್ರೆಗೆ ಮಾಡಲು ಬೇರೆ ಕೆಲಸ ಇಲ್ಲ. ಮಹಾರಾಷ್ಟ್ರದ ಜತ್ತ ಸೇರಿದಂತೆ ಇನ್ನು ಅನೇಕ ಮಹಾರಾಷ್ಟ್ರದ ಹಳ್ಳಿಗಳು ರಾಜ್ಯಕ್ಕೆ ಸೇರಬೇಕು. ಉಪದ್ಯಾಪಿ ಠಾಕ್ರೆ ಹತಾಶಯರಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ. ಇದರಿಂದ ಮತ್ತೆ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ನೋಡ್ತಾ ಇರಿ, ಯುಗಾದಿಗೆ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗುತ್ತೆ. ಈ ಹಿಂದೆ ಮೂರು ತಿಂಗಳು ಅಂತ ಹೇಳಿದ್ದೆ, ನಾವು ಮಂತ್ರಿ ನೀಡಿ ಅಂತ ದಾವಣಗೆರೆಗೆ ಹೋಗಿಲ್ಲ. ಮಂತ್ರಿ ಕೊಡುವ ಜಾಗದಲ್ಲಿ ನಮ್ಮವರೇ ಒಬ್ಬರು ಬರ್ತಾರೆ. ಅದು ಕೂಡ ಉತ್ತರ ಕರ್ನಾಟಕದವರೇ ಬರ್ತಾರೆ ಎಂದು ಹೇಳುವ ಮೂಲಕ ಮತ್ತೊಂದು ಹೊಸ ಬಾಂಬ್‌ ಸಿಡಿಸಿದ್ದಾರೆ.