'ರಾಹುಲ್ ಗಾಂಧಿ ಮೂಲತಃ ಪಾಕಿಸ್ತಾನಿ, ಅವರೊಬ್ಬ ಪಾಕ್ ಏಜೆಂಟ್'
ಕಾಂಗ್ರೆಸ್, ಕೆಲ ಜಾತ್ಯತೀತ ಎನ್ನುವ ಕೋಮುವಾದಿ ಪಕ್ಷಗಳು ಒಂದು ಕೋಮಿನ ಜನರನ್ನು ಒಕ್ಕಲೆಬ್ಬಿಸುತ್ತಿದ್ದಾರೆ| ಪಾಕಿಸ್ತಾನ, ಅಪ್ಘಾನಿಸ್ತಾನದಲ್ಲಿ ಹಿಂದು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ| ಶಾಸಕ ಯತ್ನಾಳ ಗೌಡ್ರು ಫಾರ್ ಮಿನಿಸ್ಟರ್ ಅಭಿಯಾನ ಆರಂಭ|
ವಿಜಯಪುರ(ಡಿ.18): ಪೌರತ್ವ ಕಾಯ್ದೆ ವಿಚಾರದಲ್ಲಿ ಪಾಕಿಸ್ತಾನ ಏಜೆಂಟರು ಜನರ ದಾರಿ ತಪ್ಪಿಸುತ್ತಿದ್ದಾರೆ. ರಾಹುಲ್ ಗಾಂಧಿ ಒಬ್ಬ ಪಾಕಿಸ್ತಾನ ಏಜೆಂಟ್ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಮೂಲತಃ ಪಾಕಿಸ್ತಾನಿ. ಪಾಕಿಸ್ತಾನ, ಅಪ್ಘಾನಿಸ್ತಾನದಲ್ಲಿ ಹಿಂದು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದರು.
ಕಾಂಗ್ರೆಸ್, ಕೆಲ ಜಾತ್ಯತೀತ ಎನ್ನುವ ಕೋಮುವಾದಿ ಪಕ್ಷಗಳು ಒಂದು ಕೋಮಿನ ಜನರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪೌರತ್ವ ಕಾಯ್ದೆ ತಿದ್ದುಪಡಿ ಪರ ಶನಿವಾರ ವಿಜಯಪುರ ನಗರದಲ್ಲಿ ಬೃಹತ್ ರಾರಯಲಿ ನಡೆಸಲಾಗುವುದು ಎಂದು ಹೇಳಿದರು.
ಡಿಸಿಎಂ ಹುದ್ದೆ ಸರಿಯಲ್ಲ:
ಒಬ್ಬರೇ ಮುಖ್ಯಮಂತ್ರಿ ಇರಬೇಕು. ಉಳಿದವರು ಮಂತ್ರಿಗಳಿರಬೇಕು. 5-10 ಡಿಸಿಎಂ ಹುದ್ದೆ ಸೃಷ್ಟಿಮಾಡುವುದು ಸರಿಯಲ್ಲ. ಹೆಚ್ಚು ಹುದ್ದೆಗಳನ್ನು ಸೃಷ್ಟಿಸುವುದರಿಂದ ಆ ಹುದ್ದೆಗೆ ಗೌರವ ಇರುವುದಿಲ್ಲ ಎಂದು ಹೇಳಿದರು. ಸಚಿವ ಶ್ರೀರಾಮುಲು ಅವರು ಬಹಳ ವರ್ಷಗಳಿಂದ ಪಕ್ಷ ಕಟ್ಟಿದವರು. ಆದರೆ ಅವರು ಎಲ್ಲೂ ಡಿಸಿಎಂ ಸ್ಥಾನ ಬೇಕು ಎಂದು ಹೇಳಿಲ್ಲ. ಡಿಸಿಎಂ ಮಾಡಲು ಅವರ ಅಭಿಮಾನಿಗಳ ಒತ್ತಡವಿದೆ ಎಂದರು.
ಸಚಿವ ಸ್ಥಾನಕ್ಕೆ ಲಾಬಿ ನಡೆಸಿಲ್ಲ:
ನಾನು ಸಚಿವ ಸ್ಥಾನಕ್ಕೆ ಲಾಬಿ ನಡೆಸಿಲ್ಲ. ನಾನು ಹಿಂದೆ ಕುಳಿತು ಆಟವಾಡುವ ಜಾಯಮಾನದ ರಾಜಕಾರಣಿ ಅಲ್ಲ. ಅಭಿಮಾನಿಗಳನ್ನು ಮುಂದೆ ಬಿಟ್ಟು ವರಿಷ್ಠರ ಮೇಲೆ ಒತ್ತಡ ಹಾಕುವುದಿಲ್ಲ ಎನ್ನುವ ಮೂಲಕ ಲಾಬಿ ಮಾಡುತ್ತಿರುವವರಿಗೆ ಯತ್ನಾಳ ಟಾಂಗ್ ನೀಡಿದರು. ಸಚಿವ ಸ್ಥಾನ ನೀಡುವುದು ಬಿಡುವುದು ಸಿಎಂ ಹಾಗೂ ಹೈಕಮಾಂಡ್‌ಗೆ ಬಿಟ್ಟಿದ್ದು. ನಾನು ಲಾಬಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಉಪ ಚುನಾವಣೆಯಲ್ಲಿ ನಾನು ಪ್ರಚಾರ ಮಾಡಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದರಿಂದ ಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇದನ್ನು ಪಕ್ಷ ಗಮನಿಸುತ್ತಿದೆ. ನಾನಾಗಿಯೇ ಮಂತ್ರಿ ಸ್ಥಾನ ಕೇಳಲ್ಲ ಎಂದರು.
ವಾಜಪೇಯಿ ಸರ್ಕಾರದಲ್ಲಿ ನನ್ನನ್ನು ಕರೆದು ಕೇಂದ್ರ ಮಂತ್ರಿ ಮಾಡಿದ್ದರು. ನನಗೆ ಪಕ್ಷ ಹಾಗೂ ಸರ್ಕಾರ ಮುಖ್ಯ. ನಾವು ಸಚಿವ ಸ್ಥಾನಕ್ಕೆ ಲಾಬಿ ಮಾಡಿದರೆ ಅಸ್ಥಿರತೆ ಕಾಡುತ್ತದೆ. ಆದ್ದರಿಂದ ಸರ್ಕಾರದ ಹಿತದೃಷ್ಟಿಯಿಂದ ಮಂತ್ರಿ ಮಾಡುವಂತೆ ಕೇಳುವುದಿಲ್ಲ. ಸಮರ್ಥವಾಗಿ ಶಾಸಕ ಸ್ಥಾನ ನಿಭಾಯಿಸುತ್ತೇನೆ ಎಂದು ಹೇಳಿದರು.
ಯತ್ನಾಳ ಫಾರ್ ಮಿನಿಸ್ಟರ್ ಅಭಿಯಾನ ವಿಚಾರವಾಗಿ ಪ್ರತ್ರಿಯಿಸಿದ ಅವರು, ನನ್ನ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಉತ್ತರ ಕರ್ನಾಟಕ ಅಷ್ಟೇ ಅಲ್ಲ, ಇಡೀ ಕರ್ನಾಟಕದಲ್ಲಿ ಹಿಂದುತ್ವದ ಶಕ್ತಿ ನನ್ನ ಬೆನ್ನಿಗಿದೆ ಎಂದರು. ನನಗೆ ಉತ್ತರ ಕರ್ನಾಟಕದ ಅಭಿವೃದ್ಧಿ ಮುಖ್ಯ. ಜಿಲ್ಲೆಗೆ ಸಚಿವ ಸ್ಥಾನಕ್ಕಿಂತ ಉತ್ತರ ಕರ್ನಾಟಕ್ಕೆ ಪ್ರಾತಿನಿಧ್ಯ ಬೇಕಿದೆ ಎಂದಿದ್ದಾರೆ.
ಯತ್ನಾಳ ಮಂತ್ರಿ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ
ಬಸನಗೌಡ ಪಾಟೀಲ ಯತ್ನಾಳ ಅವರು ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ ಎಂದು ಹೇಳುತ್ತಿದ್ದರೂ ಅವರ ಅಭಿಮಾನಿಗಳು ಮಾತ್ರ ಸಾಮಾಜಿಕ ಜಾಲ ತಾಣಗಳಾದ ವಾಟ್ಸಾಪ್, ಫೇಸ್‌ಬುಕ್, ಟಿಕ್‌ಟಾಕ್‌ಗಳಲ್ಲಿ ‘ಯತ್ನಾಳ ಗೌಡ್ರು ಫಾರ್ ಮಿನಿಸ್ಟರ್’ ಅಭಿಯಾನವನ್ನು ಇಡೀ ಉತ್ತರ ಕರ್ನಾಟಕದಾದ್ಯಂತ ಜೋರಾಗಿಯೇ ಕೈಗೊಂಡಿದ್ದಾರೆ. ಟಿಕ್‌ಟಾಕ್‌ನಲ್ಲಿಯೂ ಯತ್ನಾಳ ಪರ ವಿಡಿಯೋ ಅಪ್‌ಲೋಡ್ ಮಾಡಿದ ಅಭಿಮಾನಿಗಳು ತಮ್ಮ ಗೌಡ್ರರಿಗೆ ಸಚಿವ ಸ್ಥಾನ ದೊರೆಯುವ ನಿಟ್ಟಿನಲ್ಲಿ ಪರೋಕ್ಷವಾಗಿ ಅಭಿಯಾನ ಜೋರು ಮಾಡಿದ್ದಾರೆ.
ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಯತ್ನಾಳ ಅವರು ‘ಯತ್ನಾಳ ಗೌಡ್ರು ಫಾರ್ ಮಿನಿಸ್ಟರ್’ ಅಭಿಯಾನ ಕೈಗೊಂಡು ತಮ್ಮ ನಾಯಕ ಫೈರ್ ಬ್ರಾಂಡ್ ಶಾಸಕ ಯತ್ನಾಳ ಸಚಿವರಾಗುವ ಕನಸು ಕಾಣುತ್ತಿದ್ದಾರೆ. ವಾಟ್ಸಪ್, ಫೇಸ್‌ಬುಕ್‌ಗಳಲ್ಲಿ ಲೈಕ್‌ಗಳ ಸುರಿಮಳೆಯಾಗುತ್ತಿದೆ. ಇದಕ್ಕೆ ಬೆಂಬಲ ವ್ಯಕ್ತಪಡಿಸಿ ನೂರಾರು ಜನರು ಅವುಗಳನ್ನು ಶೇರ್ ಮಾಡುತ್ತಿರುವುದಷ್ಟೇ ಅಲ್ಲ, ಬೆಂಬಲಿಸಿ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದಾರೆ.