ವಿಜಯಪುರ(ಅ.22): ನಾನು ಸಚಿವನಾಗುವುದಕ್ಕೆ ಯಾರದ್ದೋ ಕಾಲು, ತಲೆ ಹಿಡಿಯುವ ಕೆಲಸ ಮಾಡಿಲ್ಲ. ಅದು ನನ್ನ ಜಾಯಮಾನವೂ ಅಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಟ್ವೀಟ್‌ ಮಾಡಿದ್ದಾರೆ.

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಅಧಿಕೃತವಾಗಿರುವ ತಮ್ಮ ಸಾಮಾಜಿಕ ಜಾಲ ತಾಣದ ಅಕೌಂಟ್‌ನಲ್ಲಿ ಸಚಿವನಾಗುವುದಕ್ಕೆ ಯಾರದ್ದೋ ಕಾಲು, ತಲೆ ಹಿಡಿಯುವ ಕೆಲಸ ಮಾಡಿಲ್ಲ. ಕರ್ನಾಟಕದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ಆತ್ಮಸಾಕ್ಷಿಯಾಗಿ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. 

ಸಿಎಂ ವಿರುದ್ಧ ಮತ್ತೆ ಹರಿಹಾಯ್ದ ಯತ್ನಾಳ್, ಯಡಿಯೂರಪ್ಪಗೆ ಎಚ್ಚರಿಕೆ ಸಂದೇಶ..!

 

ಮಂಗಳವಾರ ಅಷ್ಟೇ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಕುರಿತು ಪರೋಕ್ಷ ಸೂಚನೆ ನೀಡಿ ಉತ್ತರ ಕರ್ನಾಟಕದವರಿಗೆ ಮುಖ್ಯಮಂತ್ರಿ ಸ್ಥಾನ ಒಲಿಯಲಿದೆ ಎನ್ನುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿರುವ ಯತ್ನಾಳ್‌ ಈಗ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಎಂ ವಿರುದ್ಧದ ಪೋಸ್ಟ್‌ ಶೇರ್‌:

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಫೇಸ್‌ಬುಕ್‌ನಲ್ಲಿ ರಾಘವ ಅಣ್ಣಿಗೇರಿ ಎಂಬವರ ಪೋಸ್ಟ್‌ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಫೇಸ್‌ಬುಕ್‌ ಖಾತೆಯಲ್ಲಿ ಶೇರ್‌ ಆಗಿದೆ. ಇದು ಇನ್ನಷ್ಟು ಕುತೂಹಲಕ್ಕೂ ಕಾರಣವಾಗಿದೆ.