ಬೆಳಗಾವಿ[ಡಿ.04]: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರವರನ್ನು ಕೆಳಗಿಳಿಸಲು ಒಂದು ಗ್ರೂಪ್‌ ಕ್ರಿಯಾಶೀಲವಾಗಿದ್ದು, ನಿರಂತರವಾಗಿ ಇಂತಹ ತಂತ್ರಗಾರಿಕೆ ನಡೆಯುತ್ತಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಫೋಟಕ ಹೇಳಿಕೆ ನೀಡಿದ್ದಾರೆ. 

ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಕಡೆ ಆ ಹುಳುಗಳು ಇವೆ. ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಲ್ಲ ಕಡೆ ಆ ಹುಳಗಳಿದ್ದು ಇಂಥವರಿಗೆ ಸರಿಯಾದ ಉತ್ತರ ಕೊಡಲು ನಾವು ಶಾಸಕರು ಗಟ್ಟಿಇದ್ದೇವೆ ಎಂದರು. ಮೂರೂವರೆ ವರ್ಷ ಅವರನ್ನು ಇಳಿಸುವ ಮೂರ್ಖತನ ಮಾಡಿದರೆ, ಅವರ ಸಮಾಧಿ ಅವರೇ ಕಟ್ಟಿಕೊಳ್ಳುತ್ತಾರೆ. ಫಲಿತಾಂಶ ಬಂದ ಬಳಿಕ ಅಂಥವರು ಕ್ರಿಯಾಶೀಲವಾಗಿರಲು ಬಿಡುವುದಿಲ್ಲ. ಆ ಹುಚ್ಚುತನ ಮಾಡಿದರೆ, ನಾನೇ ಹೋಗಿ ಅವರಿಗೆ ಬುದ್ಧಿ ಕಲಿಸುವೆ ಎಂದು ಆಕ್ರೋಶ ಹೊರಹಾಕಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದೇ ವೇಳೆ ಕಾಂಗ್ರೆಸ್‌ನಲ್ಲೂ ಸಿದ್ದರಾಮಯ್ಯನನ್ನು ಮುಗಿಸುವ ತಂತ್ರ ವ್ಯವಸ್ಥಿತವಾಗಿ ನಡೆದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತರೆ ಮಾತ್ರ ಸಿದ್ದರಾಮಯ್ಯಗೆ ಭವಿಷ್ಯ ಇದೆ. ಡಿ.ಕೆ.ಶಿವಕುಮಾರ್‌ ಮತ್ತು ಎಚ್‌.ಡಿ.ಕುಮಾರಸ್ವಾಮಿ ಏಜೆಂಡಾ ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸುವುದೇ ಆಗಿದೆ. ಆ ಕುತಂತ್ರಕ್ಕಾಗಿಯೇ ಇಬ್ಬರೂ ಸೇರಿ ಸಭೆ ಮಾಡಿದ್ದಾರೆ. ಸಿದ್ದರಾಮಯ್ಯ ಮುಗಿಸಿ ಏನೂ ಮಾಡಲು ಆಗೋದಿಲ್ಲ. ಸಿದ್ದರಾಮಯ್ಯ ಒಂದು ಶಕ್ತಿ ಎಂದು ಹೇಳಿದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.