'ರಾಹುಲ್ ಗಾಂಧಿಗೆ ಮಾನ ಮರ್ಯಾದೆ ಇಲ್ಲ, ಪಾಕ್ ಏಜೆಂಟ್‌ನಂತೆ ವರ್ತಿಸ್ತಾನೆ'
ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ವಿವಿಧೆಡೆ ಹಿಂದೂಗಳಿಗೆ ಭಯದ ವಾತಾವರಣ ನಿರ್ಮಾಣವಾಗಿತ್ತು| ಅಂತಹವರಿಗೆ ಭಾರತದಲ್ಲಿ ಪೌರತ್ವ ಕೊಡುವ ಕೆಲಸ ಆಗಿದ್ದು ಐತಿಹಾಸಿಕ ನಿರ್ಧಾರ ಎಂದ ಯತ್ನಾಳ|ಸಚಿವ ಸ್ಥಾನ ಕೊಡುವುದು ವರಿಷ್ಠರಿಗೆ ಬಿಟ್ಟದ್ದು|
ವಿಜಯಪುರ(ಡಿ.12): ಪಾಕಿಸ್ತಾನ ಇಬ್ಭಾಗವಾದ ವೇಳೆ ಲಕ್ಷಾಂತರ ಹಿಂದೂಗಳ ಕಗ್ಗೊಲೆ ಆಯಿತು. ನಂತರ ಅಲ್ಲಿ ಹಿಂದೂಗಳ ಸಂಖ್ಯೆ ಇಳಿಕೆಯಾಗಿದ್ದು, ಇಂತಹ ದೌರ್ಜನ್ಯಕ್ಕೆ ಒಳಗಾದವರಿಗೆ ರಾಷ್ಟ್ರೀಯ ಪೌರತ್ವ ಕಾಯ್ದೆ ಅನುಕೂಲವಾಗಲಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ಐತಿಹಾಸಿಕ ಮಸೂದೆ ಪಾಸ್ ಮಾಡಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ವಿವಿಧೆಡೆ ಹಿಂದೂಗಳಿಗೆ ಭಯದ ವಾತಾವರಣ ನಿರ್ಮಾಣವಾಗಿತ್ತು. ಅಂತಹವರಿಗೆ ಭಾರತದಲ್ಲಿ ಪೌರತ್ವ ಕೊಡುವ ಕೆಲಸ ಆಗಿದ್ದು ಐತಿಹಾಸಿಕ ನಿರ್ಧಾರವಾಗಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಿಂದೂಗಳನ್ನು ಸಂರಕ್ಷಣೆ ಮಾಡುವ ಕೆಲಸ ಪ್ರಧಾನಿಗಳು ಸೇರಿದಂತೆ ನಾಯಕರು ಮಾಡಿದ್ದಾರೆ. ವಿರೋಧ ಮಾಡುವ ಕಾಂಗ್ರೆಸ್ ನಾಯಕರು ಪಾಕಿಸ್ತಾನ ಏಜೆಂಟರು. ಅವರಿಗೆ ನ್ಯಾಯ, ನೀತಿ ಅನ್ನೋದು ಇದ್ದರೆ, ಈ ಕಾಯ್ದೆಗೆ ವಿರೋಧ ಮಾಡಬಾರದು. ಕಾಂಗ್ರೆಸ್ಸಿನವರಿಗೆ ಮಾನ ಮರ್ಯಾದೆ ಇದ್ದರೆ ದೇಶದ ನಾಗರಿಕರಾಗಿ ಕೆಲಸ ಮಾಡಲಿ. ಕಾಂಗ್ರೆಸ್ಸಿನವರು ಪಾಕಿಸ್ತಾನದವರಂತೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಮೂರ್ಖ:
ಪ್ರಪಂಚದಲ್ಲಿ ಭಾರತ ಅತ್ಯಾಚಾರಿಗಳ ರಾಜಧಾನಿ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯತ್ನಾಳ, ರಾಹುಲ್ ಗಾಂಧಿ ಮೂರ್ಖ. ಆತನಿಗೆ ಮಾನ ಮರ್ಯಾದೆ ಇಲ್ಲ. ಪಾಕ್ ಏಜೆಂಟ್‌ನಂತೆ ವರ್ತಿಸುತ್ತಾನೆ. ಇಂದು ಕಾಂಗ್ರೆಸ್ ಭಾರತೀಯ ಕಾಂಗ್ರೆಸ್ ಆಗಿ ಉಳಿದಿಲ್ಲ, ಪಾಕಿಸ್ತಾನ ಕಾಂಗ್ರೆಸ್ ಆಗಿ ಹೋಗಿದೆ ಎಂದು ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ವಾಳ್ಕರ ಡ್ಯಾಶ್ ಡ್ಯಾಶ್ ಹೇಳಿದರೆ, ನಾನೂ ಡ್ಯಾಶ್ ಡ್ಯಾಶ್ ಹೇಳುತ್ತೇನೆ. ಡ್ಯಾಶ್ ಡ್ಯಾಶ್ ಫುಲ್ ಫುಲ್ ಮಾಡುತ್ತೇನೆ. ಉಪ ಚುನಾವಣೆಯಲ್ಲಿ ಜನತೆ ಸ್ಥಿರ ಸರ್ಕಾರಕ್ಕೆ ನಾಂದಿ ಹಾಡಿದ್ದಾರೆ. ಮತದಾರರಿಗೆ ಧನ್ಯವಾದಗಳು. ಅಥಣಿ ಸೇರಿದಂತೆ ಕೆಲ ಕ್ಷೇತ್ರಗಳಲ್ಲೂ ಮೊದಲು ನಕಾರಾತ್ಮಕವಾಗಿ ವಾತಾವರಣ ಉಂಟಾಗಿತ್ತು. ಬಳಿಕ ನೀರಾವರಿ ವಿಚಾರವಾಗಿ ಮತದಾರರು ಬಿಜೆಪಿಗೆ ಮತ ಹಾಕಿದರು. ಕೆ.ಆರ್. ಪೇಟೆಯಲ್ಲಿ ಬಿಜೆಪಿ ಒಪನಿಂಗ್ ಮಾಡಿದೆ. ಚಿಕ್ಕ ಬಳ್ಳಾಪುರದಲ್ಲೂ ಖಾತೆ ತೆರೆದಿದೆ. ಯಡಿಯೂರಪ್ಪನವರ ಪ್ರಭಾವ ಇದಕ್ಕೆ ಕಾರಣವಾಗಿದೆ ಎಂದರು.
ಉತ್ತರ ಕರ್ನಾಟಕಕ್ಕೆ ನೀರಾವರಿ ಖಾತೆ ನೀಡಲಿ:
ಜಲ ಸಂಪನ್ಮೂಲ ಸಚಿವ ಸ್ಥಾನ ಉತ್ತರ ಕರ್ನಾಟಕಕ್ಕೆ ಸಿಕ್ಕರೆ ಅನುಕೂಲವಾಗುತ್ತದೆ. ಈ ಭಾಗದ ನೀರಾವರಿ ಕಾಮಗಾರಿಗಳಿಗೆ ಅನುಕೂಲವಾಗತ್ತೆ. ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಬಾಕಿ ಉಳಿದ ಎಲ್ಲ ಕಾಮಗಾರಿ ಪೂರ್ಣವಾಗುತ್ತವೆ. ಆದ್ದರಿಂದ ಉತ್ತರ ಕರ್ನಾಟಕ್ಕೆ ನೀರಾವರಿ ಖಾತೆ ಕಡ್ಡಾಯವಾಗಿ ನೀಡಬೇಕು ಎಂದರು.
ಉಪಚುನಾವಣೆಯಲ್ಲಿ ಕೇವಲ ಯಡಿಯೂರಪ್ಪ ಬಲದಿಂದ ಗೆದ್ದಿಲ್ಲ. ಎಲ್ಲರ ಬಲದಿಂದ ಗೆಲುವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಯತ್ನಾಳ ಪ್ರತಿಕ್ರಿಯಿಸಿ, ಪಕ್ಷದ ರಾಷ್ಟ್ರೀಯ, ರಾಜ್ಯದ ಹಿರಿಯರ ಮಾರ್ಗದರ್ಶನದಲ್ಲಿ ಗೆಲುವಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ದೊಡ್ಡ ಶಕ್ತಿಯಾಗಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದ ಕಾರಣ ಪ್ರಧಾನಿ ಅವರು ಯಡಿಯೂರಪ್ಪನವರಿಗೆ ಗೌರವ ನೀಡಿದ್ದಾರೆ ಎಂದು ಹೇಳಿದರು. ಉಪಚುನಾವಣೆಯಲ್ಲಿ ಪರಾಜಯದ ಕಾರಣ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ಮುಗಿಯಲಿಲ್ಲ. ಒಂದು ಚುನಾವಣೆಯಲ್ಲಿ ಸೋತರೆ ರಾಜಕೀಯ ಮುಗಿಯುತ್ತದೆ ಎಂದು ಭಾವಿಸೋದು ಸರಿಯಲ್ಲ ಎಂದರು.
ಸಚಿವ ಸ್ಥಾನ ಕೊಡುವುದು ವರಿಷ್ಠರಿಗೆ ಬಿಟ್ಟದ್ದು
ನನಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡುವುದು ಬಿಡುವುದು ವರಿಷ್ಠರಿಗೆ ಬಿಟ್ಟವಿಚಾರ. ಜವಾಬ್ದಾರಿ ನೀಡಿ ಸಚಿವ ಸ್ಥಾನ ನೀಡಿದರೆ ಕೆಲಸ ಮಾಡುವೆ. ಇಲ್ಲವಾದರೂ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಮೊದಲು ಉಪ ಚುನಾವಣೆಯಲ್ಲಿ ವಿಜೇತರಾದವರಿಗೆ ಅವಕಾಶ. ಜನರ ಮನಸ್ಸಿನಲ್ಲಿ ನಾನಿದ್ದೇನೆ. ನಾನು ಪ್ರಚಾರ ಮಾಡಿದ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ವಿಜೇತರಾಗಿದ್ದಾರೆ ಎಂದು ಹೇಳಿದರು.