ಮೂಡಲಗಿ: (ಸೆ.23) ಪ್ರವಾಹ ಬಂದು 50 ದಿನಗಳಾದರೂ ರಾಜ್ಯ ಸರ್ಕಾರ ಘೋಷಿಸಿದಂತೆ ಪ್ರತಿ ಕುಟುಂಬಕ್ಕೆ ತುರ್ತಾಗಿ ಹತ್ತು ಸಾವಿರ, ಮನೆ ನಿರ್ಮಾಣಕ್ಕೆ 5 ಲಕ್ಷ, ಬಾಡಿಗೆ ಹಣ 5 ಸಾವಿರ, ತಾತ್ಕಾಲಿಕ ಶೆಡ್‌ ನಿರ್ಮಾಣ ಮಾಡುವ ಆಶ್ವಾಸನೆಗಳನ್ನು ಈವರಗೆಗೂ ಈಡೇರಿಸಿಲ್ಲ. ಕೆಲವೊಂದು ಕಡೆಗಳಲ್ಲಿ ಪರಿಹಾರ ನೀಡವಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಜಮಖಂಡಿ ಶಾಸಕ ಆನಂದ ನ್ಯಾಮಗೌಡರ ಅಸಮಾಧಾನ ವ್ಯಕ್ತಪಡಿಸಿದರು.

ನೆರೆ ಸಂತ್ರಸ್ತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕೂಗು ಮುಟ್ಟಿಸಲು ತಮ್ಮ ನೂರಾರು ಬೆಂಬಲಿಗರೊಂದಿಗೆ ಜಮಖಂಡಿಯಿಂದ ಬೆಳಗಾವಿಯವರೆಗೆ ಹಮ್ಮಿಕೊಂಡ 2ನೇ ದಿನದ ಪಾದಯಾತ್ರೆಯಲ್ಲಿ ಭಾನುವಾರ ಗುರ್ಲಾಪೂರ ಕ್ರಾಸ್‌ ಹತ್ತಿರ ಮಾತನಾಡಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಸಮ್ಮಿಶ್ರ ಸರ್ಕಾರವಿದ್ದಾಗ ಕೊಡುಗು ಜಿಲ್ಲೆಯಲ್ಲಿ ಆದ ಪ್ರವಾಹ, ಭೂಕುಸಿತದಿಂದ ಹಾನಿಯಾದವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಘೋಷಿಸಿದಂತೆ ಮನೆ ಕಟ್ಟಲು 10 ಲಕ್ಷ, 1 ಲಕ್ಷ ತುರ್ತು ಪರಿಹಾರ ನೀಡಿದ್ದರು. ಆದರೆ ಬಿಜೆಪಿ ಸರ್ಕಾರ ಸಂತ್ರಸ್ತರ ಕಣ್ಣೀರೊರೆಸುವ ಕೆಲಸ ಮಾಡಿಲ್ಲ. ನಿರಾಶ್ರಿತರ ಬೇಕು ಬೇಡಿಕೆಗಳನ್ನು ಬಿಜೆಪಿ ಸರ್ಕಾರ ಈಡೇರಿಸದಿದ್ದರೆ ಉಗ್ರ ಹೋರಾಟವನ್ನು ಅವ್ಯಾಹತವಾಗಿ ನಡೆಸಲಾಗುವುದು ಎಚ್ಚರಿಕೆ ನೀಡಿದರು. 

ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್‌, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಿ 2-3 ಸುತ್ತು ಪರಿಶೀಲನೆ ನಡೆಸಿದರೂ ಕೇಂದ್ರ ಸರ್ಕಾರದಿಂದ ಯಾವುದೇ ಪ್ರಯೋಜನ ಆಗಿಲ್ಲ. ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ ಇವರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ತರುವ ತಾಕತ್ತು ಇಲ್ಲದಾಗಿದೆ ಎಂದು ವ್ಯಂಗ್ಯವಾಡಿದರು.

24 ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ


ಜಮಖಂಡಿಯಿಂದ ಶನಿವಾರ ಪ್ರಾರಂಭವಾದ ಪಾದಯಾತ್ರೆ ತೇರದಾಳ, ಅರಬಾವಿ, ಗೋಕಾಕ ಕ್ಷೇತ್ರದ ಮೂಲಕ ಬೆಳಗಾವಿಗೆ 24ರಂದು ತಲುಪಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು ಶಾಸಕ ಆನಂದ ನ್ಯಾಮಗೌಡ ಅವರು ಹೇಳಿದರು. 

ಇದೆ ವೇಳೆ ಮಾತನಾಡಿದ ಮಾಜಿ ಸಚಿವೆ ಉಮಾಶ್ರೀ ಅವರು, ನಿರಾಶ್ರಿತರ ಕೆಂಗಣ್ಣಿನಿಂದ ಪಾರಾಗಲು ರಾಜ್ಯಸರ್ಕಾರ ಸುಳ್ಳು ಭರವಸೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಅರಬಾವಿ ಕ್ಷೇತ್ರದ ಕಾಂಗ್ರೆಸ್‌ ಮುಖಂಡರಾದ ರಮೇಶ ಊಟಗಿ, ಲಕ್ಕಣ್ಣ ಸವಸುದ್ದಿ ಪಾದಯಾತ್ರೆಯ ಮೂಲಕ ಬಂದ ಮುಖಂಡರನ್ನು ಸ್ವಾಗತಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಪಾದಯಾತ್ರೆಯಲ್ಲಿ ಬಾಗಲಕೋಟೆ ಜಿಪಂ ಅಧ್ಯಕ್ಷೆ ಬಾಯವ್ವ ಮೇಟಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಖಚಾಂಚಿ ಎಸ್‌ . ಆರ್‌.ಸೋನವಾಲ್ಕರ, ಅರವಿಂದ ದಳವಾಯಿ, ಪ್ರಕಾಶ ಸೋನವಾಲ್ಕರ, ಬಿ.ಸಿ.ಮುಗಳಖೋಡ, ವಿರೂಪಾಕ್ಷ ಮುಗಳಖೋಡ, ಶಿವಬಸು ಹಂಚಿನಾಳ, ದುಂಡಪ್ಪ ಜಾಡದ, ಭೀಮಶಿ ಬೆಣ್ಣಿ, ಗಿರೀಶ ಕರಡಿ, ಸುರೇಶ ಮಗದುಂ, ಮಲ್ಲಪ್ಪ ಸಿಂಗಾಡಿ, ರಾಮಪ್ಪ ನೇಮಗೌಡರ,ಮಲ್ಲಪ್ಪ ನೇಮಗೌಡರ ಅನೇಕರು ಪಾಲ್ಗೊಂಡಿದ್ದರು.