ಯರಗಟ್ಟಿ(ಡಿ.09): ಹಿಂದಿನ ಸರ್ಕಾರ ನಮ್ಮ ಮತಕ್ಷೇತ್ರದಲ್ಲಿ ಬೋಗಸ್‌ ನೀರಾವರಿ ಯೋಜನೆ ಜಾರಿಗೆ ತಂದಿದೆ. ಇನ್ಮುಂದೆ ರಮೇಶ ಜಾರಕಿಹೊಳಿ ನೀರಾವರಿ ಸಚಿವರಾಗುವುದು ಖಚಿತ. ನೀರಾವರಿ ಯೋಜನೆಗಳನ್ನು ಶೀಘ್ರ ಪ್ರಾರಂಭಿಸಲಾಗುವುದು ಶಾಸಕ ಆನಂದ ಮಾಮನಿ ಭವಿಷ್ಯ ನುಡಿದಿದ್ದಾರೆ.

ಇಲ್ಲಿನ ಶಾದಿಮಹಲ್‌ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಉಪಚುನಾವಣೆ ಪಲಿತಾಂಶ ಭಾರತೀಯ ಜನತಾ ಪಾರ್ಟಿಗೆ ಹತ್ತರಿಂದ ಹನ್ನೆರಡು ಸೀಟು ಬರುವುದು ಖಚಿತ. ನಮ್ಮ ಸರ್ಕಾರ ರಾಜ್ಯದಲ್ಲಿ ಸ್ಥಿರ ಸರ್ಕಾರ ನಡೆಸುತ್ತದೆ ಎಂಬುದಾಗಿ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಿಂದಿನ ಸರ್ಕಾರ ಯರಗಟ್ಟಿಯನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿದ್ದು ಸಂತಸ. ಬರುವ ಜೂನ್‌ 2020ರ ಒಳಗಾಗಿ ತಾಲೂಕು ಮಟ್ಟದ ಪ್ರತಿಯೊಂದು ಕಚೇರಿಗಳನ್ನು ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ವಿಧಾನ ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಪ್ರತಿಯೊಂದು ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಯರಗಟ್ಟಿತಾಲೂಕು ಕಚೇರಿಗಳ ಪ್ರಾರಂಭಕ್ಕೆ ಸರ್ಕಾರ ಮಟ್ಟದಲ್ಲಿ ಶಾಸಕ ಮಾಮನಿ ಅವರೊಂದಿಗೆ ಶ್ರಮಿಸುವುದಾಗಿ ಹೇಳಿದರು.

ಶಾದಿ ಮಹಲ್‌ ನಿರ್ಮಾಣಕ್ಕೆ ಒಂದು ಎಕರೆ ಜಮೀನು ಭೂದಾನ ಮಾಡಿದ ಅಕ್ಕಾಸಾಹೇಬ ದೇಸಾಯಿ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಭಾಗೋಜಿಕೊಪ್ಪ ಶಿವಲಿಂಗ ಮುರುಘರಾಜೇಂದ್ರ ಶ್ರೀಗಳು, ಅಲ್‌ಹಜ್‌ ಮೌಲಾನಾ ಅಬುಷಮಾ ಖಾಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಹಾಫೀಜ ಲಿಯಾಖತ್‌ ಬಾಗವಾನ ಕುರಾನ್‌ ಪಠಿಸಿದರು, ಅಂಜುಮನ್‌ ಕಮಿಟಿ ಅಧ್ಯಕ್ಷ ಕಾಶೀಮಸಾಬ ಹೊರಟ್ಟಿಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯರಾದ ಅಜೀತಕುಮಾರ ದೇಸಾಯಿ, ವಿದ್ಯಾರಾಣಿ ಸೊನ್ನದ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಧ್ಯಕ್ಷ ಮುಕ್ತಾರ ಹುಸೇನ ಪಠಾಣ, ಪಿಎಸ್‌ಐ ಪ್ರವೀಣ ಗಂಗೋಳ್ಳಿ, ಇಮಾಮಸಾಬ ಮುಗುಟಕಾನ್‌, ರಾಮನಗೌಡ ಪಾಟೀಲ, ಎ.ಕೆ.ಜಮಾದಾರ, ಮಲಿಕಸಾಬ ಬಾಗವಾನ, ಅರವಿಂದಗೌಡ ಪಾಟೀಲ, ಚಂದ್ರು ಅಳಗೋಡಿ, ಸುಭಾನಸಾಬ ಖಾಜಿ, ಹುಸೇನಸಾಬ ಪಠಾಣ, ಬಾಸ್ಕರ ಹಿರೇಮೇತ್ರಿ, ಸಲೀಂ ಮನಿಯಾರ, ಬಾಬುಸಾಬ ಉಗರಗೋಳ, ದೂದನಾನಾ ಪತ್ತುನಾಯ್ಕರ, ಮುಕದ್ದರ ನಧಾಪ, ಸಲಿಮ್‌ಬೆಗ್‌ ಜಮಾದಾರ ಹಾಗೂ ಅಂಜುಮನ್‌ ಎ ಇಸ್ಲಾಮಿಯಾ ಕಮೀಟಿ ಸರ್ವ ಸದಸ್ಯರು ಉಪಸ್ಥಿತರಿದ್ದರು.