ಬೆಂಗಳೂರು(ನ.22):  ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆ ಸೃಷ್ಟಿಸಿ ತಮ್ಮ ನಿವಾಸಕ್ಕೆ ಬೆಂಕಿ ಹಚ್ಚಿದ ಕೃತ್ಯಕ್ಕೆ ಪ್ರೇರಕರಾಗಿರುವ ಮಾಜಿ ಮೇಯರ್‌ ಸಂಪತ್‌ರಾಜ್‌ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಅಬ್ದುಲ್‌ ಜಾಕೀರ್‌ ಅವರನ್ನು ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಸಂತ್ರಸ್ತ ಹಾಗೂ ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. 

"

ಘಟನೆ ನಡೆದ ಸುದೀರ್ಘ ಕಾಲದ ನಂತರ ಇದೇ ಪ್ರಥಮ ಬಾರಿಗೆ ಶನಿವಾರ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ ಶ್ರೀನಿವಾಸಮೂರ್ತಿ, ತಮ್ಮ ಮನೆಗೆ ಗಲಭೆಕೋರರು ನುಗ್ಗಿ ಬೆಂಕಿ ಹಚ್ಚಿದ ಘಟನೆಯ ಹಿಂದೆ ಕಾಂಗ್ರೆಸ್ಸಿನವರೇ ಆದ ಈ ಇಬ್ಬರು ನಾಯಕರ ಪಾತ್ರವಿದೆ. ಹೀಗಾಗಿ ಈ ಇಬ್ಬರನ್ನು ಪಕ್ಷದಿಂದ ಉಚ್ಛಾಟಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಪತ್ರ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಡಿ.ಕೆ. ಶಿವಕುಮಾರ್‌, ಈ ವಿಚಾರದ ಬಗ್ಗೆ ಮೂರ್ತಿ ನೀಡಿರುವ ಮನವಿ ಪತ್ರವನ್ನು ಪಕ್ಷದ ಶಿಸ್ತು ಸಮಿತಿಯ ಮುಂದಿಟ್ಟು, ತಪ್ಪಾಗಿರುವುದು ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್‌, ಶಾಸಕರ ಮನವಿ ಆಲಿಸಿದ್ದೇನೆ. ಗಲಭೆ ಪ್ರಕರಣದಲ್ಲಿ ಅವರಿಗೆ ಅನ್ಯಾಯವಾಗಿರುವುದು ನನ್ನ ಗಮನಕ್ಕೆ ಬಂದಿದೆ. ನನಗೂ ಈ ವಿಚಾರದ ಬಗ್ಗೆ ತುಂಬಾ ನೋವಾಗಿದೆ. ನಮ್ಮ ಶಾಸಕರು, ಸಂಪತ್‌ರಾಜ್‌ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಪತ್ರ ನೀಡಿದ್ದಾರೆ. ಈ ಪತ್ರವನ್ನು ಪಕ್ಷದ ಶಿಸ್ತು ಸಮಿತಿಗೆ ತಲುಪಿಸುತ್ತೇನೆ. ಈ ವಿಚಾರವನ್ನು ಶಿಸ್ತು ಸಮಿತಿ ಕೂಲಂಕಷವಾಗಿ ಪರಿಶೀಲಿಸಲಿದೆ. ಆರೋಪ ಸಾಬೀೕತಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ನ.24ರ ತನಕ ಸಂಪತ್‌ ರಾಜ್‌ ನ್ಯಾಯಾಂಗ ಬಂಧನಕ್ಕೆ

ಏಕಾಏಕಿ ಕ್ರಮ ಸಾಧ್ಯವಿಲ್ಲ:

ಪಕ್ಷದಲ್ಲಿ ಯಾವುದೇ ಒಬ್ಬ ವ್ಯಕ್ತಿ ಆರೋಪಿಯಾದ ಮಾತ್ರಕ್ಕೆ ಆತನ ಮೇಲೆ ನಾನು ಏಕಾಏಕಿ ಕ್ರಮ ಜರುಗಿಸಲು ಸಾಧ್ಯವಿಲ್ಲ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಇನ್ನೂ ನಡೆಯುತ್ತಿದ್ದು, ಸಂಪತ್‌ರಾಜ್‌ವಿರುದ್ಧದ ಆರೋಪ ಸಾಬೀತುಪಡಿಸಲು ಸಾಕ್ಷ್ಯಾಧಾರಗಳನ್ನು ಒದಗಿಸಬೇಕಿದೆ. ಈ ಎಲ್ಲ ಪ್ರಕ್ರಿಯೆಗಳು ನ್ಯಾಯಾಲಯದಲ್ಲಿ ತೀರ್ಮಾನ ಆಗಬೇಕಾಗಿದೆ. ಇದೇ ರೀತಿಯಲ್ಲಿ ನಾಳೆ ಮತ್ತೊಬ್ಬ ನಾಯಕರ ವಿರುದ್ಧ ಆರೋಪ ಮಾಡಿದ ತಕ್ಷಣ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.

ರಾಜ್ಯದಲ್ಲಿ ಪೊಲೀಸ್‌ಅಧಿಕಾರಿಗಳು, ಬಿಜೆಪಿ ನಾಯಕರು ಹಾಗೂ ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಯಾರು ಯಾವ ಕಾರಣಕ್ಕಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ಅಂಶ ಗೊತ್ತಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಆರೋಪಿಸಿದರು

ಅಖಂಡ ಶ್ರೀನಿವಾಸ್‌ಮೂರ್ತಿ ಅವರು ಕಳೆದ ಎರಡು ದಿನಗಳ ಹಿಂದೆ ಭೇಟಿ ಮಾಡಲು ಕೇಳಿದ್ದರು. ಶನಿವಾರ ಬರಲು ಸೂಚಿಸಿದ್ದೆ. ಅವರು ಬಾರಿ ನೋವಿನಲ್ಲಿ ಇದ್ದಾರೆ. ಅದು ನನಗೆ ಅರ್ಥವಾಗುತ್ತಿದೆ. ನಾನೇ ಅವರ ಸ್ಥಾನದಲ್ಲಿದ್ದರೂ ನೋವಾಗುತ್ತಿತ್ತು. ಕೆಲವೊಂದು ವಿಷಯ ಹೇಳಿದ್ದಾರೆ. ಖಂಡಿತ ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ತಿಳಿಸಿದ್ದಾರೆ. 

ಮಾಜಿ ಮೇಯರ್ ‌ಸಂಪತ್‌ರಾಜ್ ‌ಮತ್ತು ಜಾಕೀರ್‌ರನ್ನು ಪಕ್ಷದಿಂದ ಉಚ್ಚಾಟಿಸಿಬೇಕು ಎಂದು ಮನವಿ ಮಾಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿದ್ದು ನನಗೆ ನ್ಯಾಯ ಸಿಗುತ್ತೆ ಎನ್ನುವ ಭರವಸೆ ಇದೆ ಎಂದು ಶಾಸಕಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.