2008ರ ಮುಂಚೆ ಪಾಟೀಲ ನೀರಾವರಿ ಪರ ಧ್ವನಿ ಎತ್ತಿದ ಉದಾಹಣೆ ಇಲ್ಲ| 2008ರ ಚುನಾವಣೆಯಲ್ಲಿ ಗೆದ್ದ ನಂತರ ಅಂದಿನ ಬೆಳಗಾವಿ ಅಧಿವೇಶನದಲ್ಲಿ ರೂಲ್‌ 69ರಲ್ಲಿ ಸಮಗ್ರ ಉತ್ತರ ಕರ್ನಾಟಕದ ನೀರಾವರಿಗಾಗಿ ಧ್ವನಿ ಎತ್ತಿದ್ದು ನಾನು: ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ|  

ಮುದ್ದೇಬಿಹಾಳ(ಅ.09): ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗಳಿಗೆ ಅನುದಾನ ಬಿಡುಗಡೆ ಮಾಡಲು ಆಗ್ರಹಿಸಿ ದೇವರ ಹಿಪ್ಪರಗಿಯಿಂದ ಆಲಮಟ್ಟಿವರೆಗೆ ಬಂಡಿ ಯಾತ್ರೆ ಮತ್ತು ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಿರುವುದು ನಾನು. 2008ರ ಮುಂಚೆ ಶಾಸಕರಾಗಿದ್ದಾಗ ಎಂ.ಬಿ.ಪಾಟೀಲರು ಜಿಲ್ಲೆಯ ನೀರಾವರಿ ಯೋಜನೆಗಳ ಪರ ಧ್ವನಿ ಎತ್ತಿದ ಯಾವುದೇ ಉದಾಹರಣೆ ಇಲ್ಲ. ಹಾಗಾದರೆ ಆಧುನಿಕ ಭಗೀರಥ ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವವಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದ್ದಾರೆ. 

ಗುರುವಾರ ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಗ್ರಾಮಗಳ ಕೆರೆ ತುಂಬಿಸುವ ಮೂಲಕ ನೀರು ಬಿಡುವ ಯೋಜನೆಯ ಕನಸು ರೈತರದ್ದೇ ಹೊರತು ಶಾಸಕ ಎಂ.ಬಿ. ಪಾಟೀಲ ಅವರದ್ದಲ್ಲ. ಇದು ನನ್ನ ಕನಸಾಗಿತ್ತು ಎಂದು ಅವರು ಹೇಳಿಕೆ ನೀಡಿರುವುದು ಸರಿಯಲ್ಲ. ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಹೋರಾಟ ಮತ್ತು ಅನುದಾನ ತರುವಲ್ಲಿ ತಮ್ಮ ಶ್ರಮ ಏನು ಎಂಬುದನ್ನು ದಾಖಲೆಗಳ ಸಮೇತ ಬಿಡುಗಡೆಗೊಳಿಸಲಿ. ನಾನು ಕೂಡ ದಾಖಲೆಗಳ ಸಮೇತ ಬಹಿರಂಗ ಪಡೆಸುತ್ತೇನೆ ಎಂದು ಸವಾಲು ಹಾಕಿದರು.

2008ರ ಚುನಾವಣೆಯಲ್ಲಿ ಗೆದ್ದ ನಂತರ ಅಂದಿನ ಬೆಳಗಾವಿ ಅಧಿವೇಶನದಲ್ಲಿ ರೂಲ್‌ 69ರಲ್ಲಿ ಸಮಗ್ರ ಉತ್ತರ ಕರ್ನಾಟಕದ ನೀರಾವರಿಗಾಗಿ ಧ್ವನಿ ಎತ್ತಿದ್ದು ನಾನು. ಅದೇ ಸಂದರ್ಭದಲ್ಲಿ ನೀರಾವರಿ ಹೋರಾಟದ ಜೊತೆಗೆ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗಾಗಿ ಅನೇಕ ಮಹನೀಯರು ಹೋರಾಡಿದ್ದಾರೆ. ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿ ಸಲುವಾಗಿ ಯರನಾಳ ಶ್ರೀಗಳು ಸೇರಿ ಜಿಲ್ಲೆಯ ಹಲವು ಜನ ಹೋರಾಡಿದ್ದಾರೆ. ಅದರಲ್ಲಿ ಅಂದಿನ ಸಂಸದರಾಗಿದ್ದ ಬಸನಗೌಡ ಪಾಟೀಲ ಯತ್ನಾಳ ಕೂಡ ಒಬ್ಬರಾಗಿದ್ದಾರೆ ಎಂದರು.

ನೀರು ಹಂಚಿಕೆ ಕುರಿತು ಸರ್ವಪಕ್ಷ ಸಭೆ ಕರೆಯಿರಿ: ಬಿಎಸ್‌ವೈಗೆ ಎಂ.ಬಿ.ಪಾಟೀಲ್‌ ಪತ್ರ

ದೇವರಹಿಪ್ಪರಗಿಯಿಂದ ಆಲಮಟ್ಟಿಯವರೆಗೆ ಸಾವಿರಾರು ರೈತರೊಂದಿಗೆ ಬಂಡಿಯಾತ್ರೆ ಹಾಗೂ ಪಾದಯಾತ್ರೆ ಮೂಲಕ ಹೋರಾಡಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಜೀವ ತುಂಬುವ ಕಾರ್ಯ ಮಾಡಿದ್ದೇನೆ. ಆದರೆ ನಿಮ್ಮ ಹೋರಾಟ ಶೂನ್ಯ ಎಂದು ಹರಿಹಾಯ್ದರು.

ಶೇ.80 ಅನುದಾನ:

ಕಾಂಗ್ರೆಸ್‌ ಪಕ್ಷ ಆಡಳಿತವಿದ್ದಾಗ ಉತ್ತರ ಕರ್ನಾಟಕ ನೀರಾವರಿ ಯೋಜನೆಗಳಿಗೆ ಶೇ.20 ಅನುದಾನ ಬಿಡುಗಡೆಯಾಗಿದ್ದರೆ, ಬಿಜೆಪಿ ಸರ್ಕಾರವಿದ್ದಾಗ ಶೇ.80 ಅನುದಾನ ಬಿಡುಗಡೆಯಾಗಿದೆ. ವಿಜಯಪುರ ಜಿಲ್ಲೆ ಸಮಗ್ರ ನೀರಾವರಿಯಾಗಲು ಜನರ ಶ್ರಮವಿದೆ. ನೀವು ನೀರಾವರಿ ಸಚಿವರಾಗಿದ್ದಾಗ ಸ್ವಕ್ಷೇತ್ರಕ್ಕೆ ಮಾತ್ರ ಒತ್ತು ನೀಡಿದ್ದೀರಿ ವಿನಃ ಸಮಸ್ತ ಉತ್ತರ ಕರ್ನಾಟಕಕ್ಕೆ ಶ್ರಮಿಸಿಲ್ಲ ಎಂದು ಆರೋಪಿಸಿರುವ ಅವರು, ಎಂ.ಬಿ.ಪಾಟೀಲರು ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ನಾಲೆಗಳಿಂದ ಹಳ್ಳಗಳಿಗೆ ನೀರು ಹರಿಸುವ ಯೋಜನೆಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಚಿಮ್ಮಲಗಿ ಏತ ನೀರಾವರಿಗೆ ಕಾಂಗ್ರೆಸ್‌ ಸರ್ಕಾರ ಕೇವಲ . 1500 ಕೋಟಿ ಕೊಟ್ಟಿದೆ. ಬೂದಿಹಾಳ-ಪೀರಾಪುರ, ನಾಗರಬೆಟ್ಟ ಏತ ನೀರಾವರಿ ಯೋಜನೆಗೆ . 580 ಕೋಟಿ ಕೊಟ್ಟಿರುವುದು ಬಿಟ್ಟರೆ ಎಂ.ಬಿ.ಪಾಟೀಲರು ನೀರಾವರಿ ಸಚಿವರಿದ್ದಾಗ ಜಿಲ್ಲೆಗೆ ಕೊಡುಗೆ ಶೂನ್ಯವಾಗಿದೆ. ನೀರಾವರಿ ಯೋಜನೆಗಳಿಗೆ ಬಿಜೆಪಿ ಸರ್ಕಾರ .8 ಸಾವಿರ ಕೋಟಿ ಅನುದಾನ ಕೊಟ್ಟಿದೆ. ಎಲ್ಲದಕ್ಕೂ ದಾಖಲೆಗಳಿವೆ. ಅವಳಿ ಜಿಲ್ಲೆ ನೀರಾವರಿ ಯೋಜನೆಗಳ ಜಾರಿ ನನ್ನ ಕನಸು ಎಂದರು.
ಕೆರೆ ತುಂಬುವುದು ಮತ್ತು ನಾಲೆಗಳಿಂದ ಹಳ್ಳಗಳಿಗೆ ನೀರು ಹರಿಸುವ ವಿನೂತನ ವೈಜ್ಞಾನಿಕ ಯೋಜನೆ ಜಾರಿಗೆ ತಂದಿರುವುದು ಬಿಜೆಪಿ ಸರ್ಕಾರ. ತಾವು ಬಬಲೇಶ್ವರ ಮತಕ್ಷೇತ್ರ ಮಮದಾಪುರ ಹಾಗೂ ಬೇಗಮ್‌ ತಲಾಬ್‌ ಕೆರೆಗಳನ್ನು ತುಂಬಿರುವುದು ಮಾತ್ರ ಸಾಧನೆಯಾಗಿದೆ. ಸಮಗ್ರ ಜಿಲ್ಲೆಯ ಯಾವ ಕೆರೆಗಳನ್ನೂ ಇವರಿಂದ ತುಂಬಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

ಈ ಎರಡೂ ಕೆರೆ ತುಂಬಿ ಇನ್ನುಳಿದ ಎಲ್ಲ ಕೆರೆಗಳನ್ನು ನಾನೇ ತುಂಬಿಸಿದ್ದೇನೆ ಎಂದು ಹೇಳುತ್ತಿರುವುದು ಯಾವ ನ್ಯಾಯ? ಸದ್ಯ ನಾನು ಬಂದಮೇಲೆ ಜಿಲ್ಲೆಯ ಜಲಪುರ, ಪಡೆಕನೂರ, ಅಡವಿ ಹುಲಗಬಾಳ, ಹೋಕ್ರಾಣಿ, ಕವಡಿಮಟ್ಟಿಸೇರಿದಂತೆ ಬಹುತೇಕ ಕೆರೆಗಳನ್ನು ತುಂಬಿಸಿದ್ದೇನೆ ಎಂದು ಶಾಸಕ ನಡಹಳ್ಳಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪರಶುರಾಮ ಪವಾರ ಇದ್ದರು.

2018ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಐಸಿಸಿ ಕಮಿಟಿ ಅಧ್ಯಕ್ಷರಾಗಿದ್ದ ಶಾಸಕ ಶಿವಾನಂದ ಪಾಟೀಲ ನೇತೃತ್ವದಲ್ಲಿ ನೀರಾವರಿಗಾಗಿ ಎಲ್ಲ ಕೆರೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿದ್ದರ ಪರಿಣಾಮ ಕೆರೆ ತುಂಬಿಸಲು ಸಾಧ್ಯವಾಗಿದೆ. ಜತೆಗೆ ಕೆ.ಎಸ್‌. ಈಶ್ವರಪ್ಪನವರು ಜಲಸಂಪನ್ಮೂಲ ಸಚಿವರಿದ್ದಾಗ ಚಿಮ್ಮಲಗಿ ಏತ ನೀರಾವರಿ ಹಾಗೂ ಮುಳವಾಡ ಏತ ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವ ಮೂಲಕ ಬಿಜೆಪಿ ಆಡಳಿತದಲ್ಲಿ ಅತಿಹೆಚ್ಚು ನೀರಾವರಿಗೆ ಆದ್ಯತೆ ನೀಡಿದೆ ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರು ತಿಳಿಸಿದ್ದಾರೆ.