ಮಾಗಡಿ(ಏ.29): ಕೊರೋನಾ ವೈರಸ್‌ ಹರಡಲು ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಸಹ ಸರಕಾರದಿಂದ ಯಾವುದೇ ಅನುದಾನ ಬಂದಿಲ್ಲ. ತಾಲೂಕಿನಲ್ಲಿ 770 ನಿರ್ಗತಿಕರ ಪಟ್ಟಿಯನ್ನು ತಯಾರಿಸಲಾಗಿದೆ ಎಂದು ಶಾಸಕ ಎ.ಮಂಜುನಾಥ್‌ ಹೇಳಿದ್ದಾರೆ. 

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೊರೋನಾ ನಿಯಂತ್ರಣ ಸಭೆಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ, ಬೆಸ್ಕಾಂ ಇಲಾಖೆಯಲ್ಲಿ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರಿಂದ, ಮೊಬೈಲ್‌ ಟವರ್‌ ನವರಿಂದ ದೇಣಿಗೆ ಪಡೆದು ದಿನಸಿ ಕಿಟ್‌ಗಳನ್ನು ನಿರ್ಗತಿಕರಿಗೆ ವಿತರಿಸಬೇಕು. ತಾಲೂಕಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು, ಕುಡಿಯುವ ನೀರು ಪೂರೈಸುವ ಕೊಳವೆ ಬಾವಿಗಳಿಗೆ ಬೆಸ್ಕಾಂ ಅಧಿಕಾರಿಗಳು ಶೀಘ್ರವಾಗಿ ವಿದ್ಯುತ್‌ ಸಂಪರ್ಕ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಲಾಕ್‌ಡೌನ್‌ ಎಫೆಕ್ಟ್‌: 'ಉದ್ಯೋಗವಿಲ್ಲದವ​ರ ಬ್ಯಾಂಕ್‌ ಖಾತೆಗೆ ದುಡ್ಡು ಹಾಕುತ್ತೇನೆ'

ಕಾರ್ಯಕರ್ತೆಯರು ಸಹಕರಿಸಬೇಕು

ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯರು ಮಾತ್ರ ತಮ್ಮ ವ್ಯಾಪ್ತಿಯ ಪ್ರತಿಯೊಂದು ಮನೆಗಳಿಗೂ ತೆರಳಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಅಂಗನವಾಡಿ ಕಾರ್ಯಕರ್ತೆಯರೂ ಸಹ ಆಶಾ ಕಾರ್ಯಕರ್ತೆಯರ ಜೊತೆ ಸೇರಿ ಕೆಲಸ ಮಾಡಬೇಕು ಎಂದರು.

ಸೋಂಕು ಕುರಿತು ಮಾಹಿತಿ:

ಆರೋಗ್ಯ ಇಲಾಖೆ ರಂಗನಾಥ್‌ ಮಾತನಾಡಿ, ಮಾಗಡಿ ತಾಲೂಕಿನಲ್ಲಿ ವಿದೇಶಿಗರು, ಹೊರ ರಾಜ್ಯ ಹಾಗೂ ಬೇರೆ ಜಿಲ್ಲೆಗಳಿಂದ 167 ಮಂದಿ ಬಂದಿದ್ದು, 152 ಜನರಿಗೆ ಸ್ಟಾಂಪ್‌ ಹಾಕಲಾಗಿದೆ. 49 ಮಂದಿ 28 ದಿನಗಳ ಕ್ವಾರಂಟೈನ್‌ ಮುಗಿಸಿದ್ದಾರೆ. 56 ಮಂದಿ 14 ದಿನಗಳ ಕ್ವಾರಂಟೈನ್‌ ಮುಗಿಸಿದ್ದು 47 ಪ್ರಜೆಗಳು ಬಾಕಿ ಉಳಿದಿದ್ದಾರೆ. ಹುಲಿಕಟ್ಟೆಕ್ವಾರಂಟೈನ್‌ ನಲ್ಲಿ 8 ಮಂದಿ ಇದ್ದಾರೆ, ಇಲ್ಲಿಯವರೆಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ 119 ಜನರ ಸ್ವಾಬ್‌ ಪರೀಕ್ಷೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

40 ಮಂದಿ ಹೊರ ರಾಜ್ಯದ ಕಾರ್ಮಿಕರು

ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ್ಯ ನಾಯಕ್‌ ಮಾತನಾಡಿ, ಮರಲಗೊಂಡಲದಲ್ಲಿ ಹೊರ ರಾಜ್ಯದಿಂದ ಬಂದ 40 ಕಾರ್ಮಿಕರು ಇದ್ದಾರೆ. ಅವರ ಗ್ರಾಮಗಳಿಗೆ ಬಿಡಲು ಸರಕಾರ ಆದೇಶ ನೀಡಿದ್ದು, ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಸ್ವಸ್ಥಾನಕ್ಕೆ ಬಿಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ವೆಂಗಳಪ್ಪನಹಳ್ಳಿಯಲ್ಲಿ ನಡೆಯುತ್ತಿರುವ ಕ್ರಷರ್‌ ಧೂಳಿನಿಂದ ಅಕ್ಕಪಕ್ಕದ ಗ್ರಾಮಸ್ಥರಿಗೆ ಚರ್ಮರೋಗ ಹರಡುತ್ತಿದೆ, ಮನೆಗಳು ಬಿರುಕು ಬಿಡುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.

ಜಿಪಂ ಸದಸ್ಯೆ ದಿವ್ಯಾ ಗಂಗಾಧರ್‌ , ತಾಪಂ ಉಪಾಧ್ಯಕ್ಷೆ ಅಂಬಿಕಾ, ಶಿರಸ್ತೆದಾರ್‌ ಜಗದೀಶ್‌, ಪುರಸಭೆ ಮುಖ್ಯಾಧಿಕಾರಿ ಮಹೇಶ್‌, ಪಿಎಸ್‌ಐ ವೆಂಕಟೇಶ್‌, ತಾಲೂಕು ಪಂಚಾಯಿತಿ ಸದಸ್ಯರು ನಾರಾಯಣಪ್ಪ, ವೆಂಕಟೇಶ್‌, ಸುಗುಣ, ಕೆಡಿಪಿ ಸದಸ್ಯ ನಾಗರಾಜ್‌, ರಾಘವೇಂದ್ರ, ವೆಂಕಟೇಶ್‌, ಅಶೋಕ್‌, ಗೌರಮ್ಮ, ಪುರಸಭಾ ಸದಸ್ಯರಾದ ಅನಿಲ್‌ ಕುಮಾರ್‌, ಜಯರಾಂ, ಭಾಗ್ಯಮ್ಮ, ರಾಮು, ಅಶ್ವಥ್‌,  ಕಾಂತರಾಜು, ರೇಖಾ, ಎಂ.ಎನ್‌.ಮಂಜುನಾಥ್‌ ಮತ್ತಿತರರು ಇದ್ದರು.