ಮಾಗಡಿ(ಏ.23): ಇಸ್ತ್ರಿ ಮಾಡುವವರಿಗೆ ಹಾಗೂ ಶೇವಿಂಗ್‌ ಶಾಪ್‌ಗಳಲ್ಲಿ ಉದ್ಯೋಗ ನಿರ್ವಹಿಸುವ ಕಾರ್ಮಿಕರಿಗೆ ಲಾಕ್‌ಡೌನ್‌ ಮುಗಿಯುವವರೆಗೂ ಅವರ ಖಾತೆಗಳಿಗೆ 500 ರು. ಜಮೆ ಮಾಡುವುದಾಗಿ ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ತಿಳಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್‌ ಹಿನ್ನೆ​ಲೆ​ಯಲ್ಲಿ ಇಸ್ತ್ರಿ ಅಂಗಡಿ ಹಾಗೂ ಶೇವಿಂಗ್‌ ಶಾಪ್‌ ಮುಂತಾದವುಗಳನ್ನು ಕಡ್ಡಾಯವಾಗಿ ಮುಚ್ಚಬೇಕು ಎಂದು ಸರ್ಕಾರದ ಆದೇಶವಿದೆ. ತಾಲೂಕಿನಾದ್ಯಂತ ಇಲ್ಲಿ ನೂರಾರು ಮಂದಿ ಉದ್ಯೋಗವನ್ನು ನಿರ್ವಹಿಸುತ್ತಾರೆ. ಇವರಿಗೆ ಸರಕಾರ ಅಕ್ಕಿ ಮತ್ತು ಗೋಧಿಯನ್ನು ವಿತರಿಸುತ್ತಿದೆ. ಇವೆರಡರಿಂದ ಜೀವನ ನಡೆಸಲು ಸಾಧ್ಯವಿಲ್ಲ, ಅಡುಗೆ ತಯಾರಿಸಲು ಬೆಳೆ, ಎಣ್ಣೆ, ಸಾಂಬರ್‌ ಪುಡಿ ಮುಂತಾದವುಗಳು ಅತ್ಯವಶ್ಯಕವಾಗಿದ್ದು, ಮಾಗಡಿ ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆಯ ಕಾಂಗ್ರೆಸ್‌ ಗೆದ್ದ ಹಾಗೂ ಪರಾಜಿತರು ಅದಷ್ಟು ಬಡವರನ್ನು ಗುರುತಿಸಿ ದಿನಸಿಯನ್ನು ವಿತರಿಸುತ್ತಿದ್ದಾರೆ ಎಂದರು.

'ಇವತ್ತು ನಾನೇ ಸಿಎಂ ಆಗಿದ್ದಿದ್ದರೆ ರೈತರಿಗೆ ಐದು ಸಾವಿರ ಕೋಟಿ ಪ್ಯಾಕೇಜ್‌ ಕೊಡುತ್ತಿದ್ದೆ'

ಈ ನಿಟ್ಟಿನಲ್ಲಿ ಇಸ್ತ್ರಿ ಹಾಗೂ ಶೇವಿಂಗ್‌ ಶಾಪ್‌ ಗಳಲ್ಲಿ ಉದ್ಯೋಗ ನಡೆಸುತ್ತಿರುವ ಕಾರ್ಮಿಕರು ತಮ್ಮ ಖಾತೆಯ ವಿವರ ಹಾಗೂ ಅಧಾರ್‌ ಕಾರ್ಡ್‌ ನಕಲು ಪ್ರತಿಯನ್ನು ಆಯಾ ವಾರ್ಡಿನ ಕಾಂಗ್ರೆಸ್‌ ಮುಖಂಡರುಗಳಿಗೆ ತಲುಪಿಸಿದರೆ ತಾವು ಲಾಕ್‌ಡೌನ್‌ ಮುಗಿಯುವವರೆಗೂ ಪ್ರತಿ ತಿಂಗಳು 500 ರು.ಜಮೆ ಮಾಡುತ್ತೇನೆ ಎಂದು ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ತಿಳಿಸಿದರು. ತಾಪಂ ಮಾಜಿ ಅಧ್ಯಕ್ಷ ಎಂ.ಎಚ್‌.ಸುರೇಶ್‌, ವಿಜಯ್‌ ಕುಮಾರ್‌ , ಎಂ.ಪ್ರಶಾಂತ್‌, ಗಿರೀಶ್‌, ಪತ್ತಿಗೌಡ ಮತ್ತಿತರರು ಹಾಜರಿದ್ದರು.